ನ್ಯೂಸ್

ನ್ಯಾ. ಸದಾಶಿವ ಆಯೋಗದ ವರದಿ ಅವೈಜ್ಞಾನಿಕ; ಸಚಿವ ಪ್ರಭು ಚವ್ಹಾಣ್ ವ್ಯಾಖ್ಯಾನ

ಬೆಂಗಳೂರು: ಇತ್ತೀಚಿನ ಪಂಜಾಬ್ ರಾಜ್ಯ ವಿರುದ್ಧ ದವಂದರ್ ಸಿಂಗ್ ಪ್ರಕರಣದ ಸುಪ್ರೀಂಕೋರ್ಟ್ ತೀರ್ಪನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಸಮುದಾಯಗಳ ಮಧ್ಯೆ ಸಾಮರಸ್ಯೆವನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಭಿಪ್ರಾಯಪಟ್ಟಿದ್ದಾರೆ.

ಎಲ್ಲ ಜಾತಿಗಳಿಗೂ ಎಲ್ಲ ವಿಭಾಗದಲ್ಲೂ ಸಮಪಾಲು ಬೇಕಿದೆ. ಅದು ಸಂವಿಧಾನದ ಆಶಯ. ನ್ಯಾ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಇಲ್ಲಿಯವರೆಗೆ ಬಹಿರಂಗವಾಗದಿರುವ ವರದಿಯನ್ನು ಚರ್ಚೆಯಿಲ್ಲದೆ ಶಿಫಾರಸು ಮಾಡಿ ಎನ್ನುವುದು ಅಪ್ರಜಾಸತ್ತಾತ್ಮಕ ಕ್ರಮವಾಗಿದೆ. ಸೋರಿಕೆಯಾಗಿರುವ ಈ ವರದಿಯ ಅಂಶಗಳನ್ನು ಗಮನಿಸಿದಾಗ ಇದಂತೂ ವಾಸ್ತವಕ್ಕೆ ದೂರವಾದ ವರದಿ ಎಂದು ತಿಳಿಯುತ್ತದೆ. ಇದು ತುಂಬ ಹಳೆಯ ಅಂಕಿ-ಅಂಶಗಳನ್ನು ಒಳಗೊಂಡಿರುವುದರಿಂದ ಇದರ ಚರ್ಚೆ ಈಗ ಅಪ್ರಸ್ತುತ. ಈ ವರದಿಯಿಂದ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಕೆನೆಪದರ ನೀತಿ ಕುರಿತಂತೆ ಪ್ರಸ್ತಾಪಿಸಲಾಗಿದೆ, ಈ ಪ್ರಸ್ತಾವನೆಯು ಜಾರಿಯಾದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮರಣ ಶಾಸನ ಆಗಬಹುದು. ಈ ಬಗ್ಗೆ ಮಾನ್ಯ ನ್ಯಾಯಾಲಯ ಮತ್ತು ಕಾನೂನು ತಜ್ಞರು ಸೂಕ್ತ ಮಾರ್ಗಗಳನ್ನು ಕಂಡುಹಿಡಿಯಬಹುದೆಂದು ಆಶಿಸುತ್ತೇನೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಲ್ಲಿ ಐಕ್ಯತೆ ಬಹುಮುಖ್ಯವಾಗಿದ್ದು ಯಾವುದೇ ಪ್ರಚೋದನೆಗಳಿಗೆ ಒಳಗಾಗದೆ ಸಮಾಜದಲ್ಲಿ ಸಹಬಾಳ್ವೆಯಿಂದ ಇರಲು ಕೋರುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

ಈ ನಡುವೆ ಪರಿಶಿಷ್ಟ ಜಾತಿ, ಪಂಗಡ, ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ ಸಮುದಾಯದ ಮುಖಂಡರು ಸಚಿವ ಪ್ರಭು ಚವ್ಹಾಣ್ ಭೇಟಿ ಮಾಡಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಚರ್ಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿಯಾಗಿ ಚವ್ಹಾಣ್​ ಚರ್ಚೆ ನಡೆಸಿದ್ದಾರೆ. ಈ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ. ಸದ್ಯಕ್ಕೆ ಯಾವುದೇ ಜಾತಿಗಳಿಗೆ ಅನ್ಯಾಯವಾಗಲು ಸರ್ಕಾರ ಬಿಡುವುದಿಲ್ಲ. ಯಾರೂ ಆತಂಕ ಪಡುವ ಆಗತ್ಯವಿಲ್ಲ ಎಂದು ಕಾರಜೋಳ ಭರವಸೆ ನೀಡಿದ್ದಾಗಿ ಚವ್ಹಾಣ್​ ತಿಳಿಸಿದ್ದಾರೆ.