ಬೆಂಗಳೂರು: ಮುಡಾ ಹಗರಣದಲ್ಲಿ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ-ಜೆಡಿಎಸ್ ಶಾಸಕರು, ಸಂಸದರು ನಗರದ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೊಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಈ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಮುಡಾ ಹಗರಣದಲ್ಲಿ ಸಾವಿರಾರು ಕೋಟಿ ಲೂಟಿ ಆಗಿದೆ. ವಾಲ್ಮೀಕಿ ನಿಗಮದಲ್ಲೂ 187 ಕೋಟಿ ರೂ. ಹಗರಣ ಆಗಿದೆ. ಸಿದ್ದರಾಮಯ್ಯನವರು ಕುರ್ಚಿ ಬಿಡಬೇಕೆಂದು ಜನರು ಬಯಸುತ್ತಿದ್ದಾರೆ ಎಂದು ಹೇಳಿದರು.
ಲೂಟಿಕೋರ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕು. ಅಪರಾಧಿ ಅಲ್ಲ ಎನ್ನಲು ವಿಧಾನಸಭೆಯ ಅಧಿವೇಶನದಲ್ಲಿ ಅವಕಾಶವಿತ್ತು. ಸ್ವಚ್ಛತೆಯನ್ನು ವಿಧಾನಸಭೆಯಲ್ಲೇ ಸ್ಪಷ್ಟಪಡಿಸದೆ ಓಡಿ ಹೋಗಿದ್ದೀರಿ ಎಂದು ಟೀಕಿಸಿದರು.
ಹೋರಾಟ ಮಾಡಲು ಮುಂದಾದ ಕಾಂಗ್ರೆಸ್ ಕಾನೂನು-ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತಿದೆ. ಕಾಂಗ್ರೆಸ್ಸಿಗರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ. ಕೂಡಲೇ ರಾಜ್ಯಪಾಲರ ಆಡಳಿತ ಜಾರಿಗೊಳಿಸಬೇಕು ಎಂದು ಗವರ್ನರ್ ಅವರಿಗೆ ಮನವಿ ಮಾಡಿದರು.
ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ ಕೊಟ್ಟಾಗ ಹಬ್ಬ ಮಾಡಿದ್ದಿರಿ, ಈಗ ಗಲಾಟೆ ಮಾಡುತ್ತೀರಾ? ಒಂದೇ ಸರ್ಕಾರ, ಒಂದೇ ಮಂತ್ರಿ ಮಂಡಲ, ಒಂದೇ ಕ್ಯಾಬಿನೆಟ್. ಎರಡು ನೀತಿ, ದ್ವಂದ್ವ ಯಾಕೆ? ನಾಗೇಂದ್ರಗೆ ಒಂದು ಕಾನೂನು, ಸಿದ್ದರಾಮಯ್ಯಗೆ ಒಂದು ಕಾನೂನಾ ಎಂದು ಪ್ರಶ್ನಿಸಿದರು.
ಜಾರ್ಜ್ ಫರ್ನಾಂಡಿಸ್, ಅಡ್ವಾಣಿ, ರಾಮಕೃಷ್ಣ ಹೆಗಡೆ ಅವರು ಆಪಾದನೆ ಬಂದಾಗ ರಾಜೀನಾಮೆ ಕೊಟ್ಟದ್ದನ್ನೂ ವಿವರಿಸಿದರು. ನಾಗೇಂದ್ರರಿಗೊಂದು ಕಾನೂನು, ನಿಮಗೊಂದು ಕಾನೂನೇ ಎಂದು ಜನರೇ ಪ್ರಶ್ನಿಸುತ್ತಿದ್ದಾರೆ. 5.95 ಲಕ್ಷದ ಜಮೀನಿಗೆ 62 ಕೋಟಿ ಕೇಳುವುದು ಸರಿಯೇ. ಇದು ಬಿಜೆಪಿ- ಜೆಡಿಎಸ್ ಹೋರಾಟ. ಸಿಎಂ ರಾಜೀನಾಮೆ ಕೊಡುವವರೆಗೆ ಹೋರಾಟ ನಿಲ್ಲದು. ಕಾಂಗ್ರೆಸ್ ಇನ್ನೆಷ್ಟು ದಿನ, ಎಷ್ಟು ತಿಂಗಳು ಅಧಿಕಾರದಲ್ಲಿ ಇರಲಿದೆ ಎಂದು ಕೇಳಿದರು.
ದಲಿತರನ್ನು ಸಿದ್ದರಾಮಯ್ಯನವರು ಸಂಪೂರ್ಣ ನಾಶ ಮಾಡಿದ್ದಾರೆ: ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸಂವಿಧಾನದ ಹುದ್ದೆಯಾದ ರಾಜ್ಯಪಾಲರಿಗೆ ಅವಮಾನ ಮಾಡಿದರೆ ಅದು ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಟೀಕಿಸಿದರು. ದಲಿತರನ್ನು ಸಿದ್ದರಾಮಯ್ಯನವರು ಸಂಪೂರ್ಣ ನಾಶ ಮಾಡಿದ್ದಾರೆ. ನಿಮ್ಮನ್ನು ನಂಬಿದ ದಲಿತರ ಚರ್ಮ ಸುಲಿದು ಚಪ್ಪಲಿ ಮಾಡಿದ್ದೀರಿ ಎಂದು ಆಕ್ಷೇಪಿಸಿದರು.
ಕಪ್ಪಗಿನ ಕಾಗೆಯಂತಿರುವ ಮುಖ್ಯಮಂತ್ರಿಗಳಲ್ಲಿ ಕಪ್ಪುಚುಕ್ಕಿ ಇರುವುದು ಹೇಗೆ ಎಂದು ಕೇಳಿದರು. ಕಾಂಗ್ರೆಸ್ ಎಂಬ ಕಸದ ಗುಂಡಿಗೆ ಇಳಿದ ನೀವು ಭ್ರಷ್ಟರಾಗದೇ ಇರಲು ಸಾಧ್ಯವೇ. ಸುಳ್ಳು ಹೇಳುವುದರಲ್ಲಿ ವೀರಪ್ಪ ಮೊಯಿಲಿ ಅವರನ್ನೂ ಸಿದ್ದರಾಮಯ್ಯ ಮೀರಿಸಿದ್ದಾರೆ ಎಂದರಲ್ಲದೆ, ತಕ್ಷಣ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿದೆ. ಸಿಎಂ ಹುದ್ದೆ ಆಕಾಂಕ್ಷಿಗಳಾದ ಕಾಂಗ್ರೆಸ್ಸಿನ ಬಹಳ ಜನರಿಗೆ ಅನ್ಯಾಯ ಮಾಡದಿರಿ ಎಂದು ಕಿವಿಮಾತು ಹೇಳಿದರು. ಕಥೆ ಬಿಟ್ಟು ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಸದಾನಂದಗೌಡ, ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ, ತಿಪ್ಪೇಸ್ವಾಮಿ, ಎಂಎಲ್‌ಎ ನಾಡಗೌಡ, ಸಂಸದರಾದ ಪಿ.ಸಿ ಮೋಹನ್, ಲೆಹರ್ ಸಿಂಗ್, ಎಂಟಿಬಿ ನಾಗರಾಜ್, ಅಶ್ವತ್ಥ್ ನಾರಾಯಣ್ ಮತ್ತಿತರರು ಭಾಗವಹಿಸಿದ್ದರು.