ನ್ಯೂಸ್

ಈ ಒಂದು ಸಿಂಪಲ್​ ಕೆಲಸ ಮಾಡಿದ್ರೆ ನೀವೂ ಶ್ರೀಮಂತರಾಗಬಹುದಂತೆ: ಇದು ಸಾನಿಯಾ ಮಿರ್ಜಾ ಸಹೋದರಿಯ ಟ್ರಿಕ್ಸ್​! Rich

Rich : ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಹಣವು ಪ್ರಮುಖ ಪಾತ್ರ ವಹಿಸುತ್ತದೆ. ಹಣದ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಎಂದಿಗೂ ಇದರ ಬೇಡಿಕೆಯಂತೂ ಕಡಿಮೆಯಾಗುವುದಿಲ್ಲ. ಹಣವಿದ್ದರೆ ಸಾಕು ಈ ಜಗತ್ತಿನಲ್ಲಿ ಏನು ಮಾಡಬೇಕಾದರೂ ಮಾಡಬಹುದು ಎಂದರೆ ಅತಿಶಯೋಕ್ತಿಯಲ್ಲ. ಪ್ರಪಂಚದಾದ್ಯಂತ ಹಣವೇ ಪ್ರಮುಖ ಶಕ್ತಿಯಾಗಿದೆ. ಹೀಗಾಗಿ ಎಲ್ಲರೂ ಹಣ ಗಳಿಕೆ ಹಿಂದೆ ಬಿದ್ದಿದ್ದಾರೆ. ಶ್ರೀಮಂತರಾಗಬೇಕೆಂಬ ಆಸೆಯಿಂದ ಪ್ರತಿದಿನ ಸಾಕಷ್ಟು ಶ್ರಮ ಪಡುತ್ತಿರುವವರಿದ್ದಾರೆ.

ಆದರೆ, ತಮ್ಮ ಖರ್ಚುಗಳು ಆದಾಯಕ್ಕಿಂತಲೂ ಹೆಚ್ಚಿವೆ ಎಂದು ದೂರದವರು ಬಹಳ ಕಡಿಮೆ. ಹಣ ಉಳಿಸಲು ಬಯಸಿದರೂ ಇಂದು ಅದು ಹೆಚ್ಚಾಗಿ ಸಾಧ್ಯವಾಗುತ್ತಿಲ್ಲ. ಒಂದೆಡೆ ಬೆಲೆ ಏರಿಕೆಯಾದರೆ, ಇನ್ನೊಂದೆಡೆ ಅಗತ್ಯವಿಲ್ಲದಿದ್ದರೂ ಸಹ ಅನೇಕ ವಸ್ತುಗಳನ್ನು ಖರೀದಿಸುವ ಜನರಿದ್ದಾರೆ. ಅದರಲ್ಲೂ ಆನ್​ಲೈನ್​ ಪಾವತಿ ವ್ಯವಸ್ಥೆ ಬಂದ ಮೇಲೆ ಜನರಿಗೆ ಯಾವುದರ ಮೇಲೆ ಎಷ್ಟು ಖರ್ಚು ಮಾಡುತ್ತಿದ್ದೇವೆ ಎಂಬ ಅರಿವು ಇಲ್ಲದಂತಾಗಿದೆ. ಹೀಗಾಗಿ ಇಂದು ಶ್ರೀಮಂತರಾಗಬೇಕಾದರೆ ಕೇವಲ ಕಷ್ಟಪಟ್ಟು ದುಡಿದರೆ ಸಾಲದು, ಹಣವನ್ನು ಉಳಿಸುವ ಕಲೆಯೂ ಇರಬೇಕು.

ಇದೀಗ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಸಹೋದರಿ ಅನಮ್ ಮಿರ್ಜಾ ಅನಗತ್ಯ ಖರ್ಚುಗಳನ್ನು ಕಡಿತಗೊಳಿಸುವ ಮೂಲಕ ಹಣ ಉಳಿಸಲು ಒಂದು ತಂತ್ರವನ್ನು ತಿಳಿಸಿದ್ದಾರೆ. ಸ್ವತಃ ತಾನೇ ಆ ತಂತ್ರವನ್ನು ಬಳಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಇದು ತುಂಬಾ ಸರಳವಾದ ವಿಧಾನ ಎಂದು ಹೇಳಿದ್ದಾರೆ.

ನಿಮ್ಮ ಫೋನ್‌ನಲ್ಲಿರುವ ಎಲ್ಲ UPI ಅಪ್ಲಿಕೇಶನ್‌ಗಳನ್ನು ಅಳಿಸುವುದು ಒಂದು ತಂತ್ರ. ನಾನು Google Pay ಸೇರಿದಂತೆ ಎಲ್ಲವನ್ನೂ ಅನ್​ ಇನ್​ಸ್ಟಾಲ್​ ಮಾಡಿದ್ದೇನೆ. ನಾನು QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಶಾಪಿಂಗ್ ಮಾಡುವುದನ್ನು ನಿಲ್ಲಿಸಿದ್ದೇನೆ. ಬದಲಾಗಿ, ನಾನು ನನ್ನ ಕೈಯಲ್ಲಿ ಹಣವನ್ನು ತೆಗೆದುಕೊಂಡು ನನಗೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಲು ಪ್ರಾರಂಭಿಸಿದ್ದೇನೆ ಎಂದಿದ್ದಾರೆ.

ಸಣ್ಣ ಬದಲಾವಣೆಗಳು ಕೂಡ ದೊಡ್ಡ ಪರಿಣಾಮ ಬೀರುತ್ತವೆ ಎಂದು ಅನಮ್ ಹೇಳುತ್ತಾರೆ. QR ಕೋಡ್ ಸ್ಕ್ಯಾನ್ ಮಾಡದಿರುವುದು ಅಂದರೆ, ಕಡಿಮೆ ಖರ್ಚು ಎಂದರ್ಥ. ಇದು ತನ್ನ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದ್ದಾರೆ.

UPI ಆ್ಯಪ್ ಡಿಲೀಟ್ ಮಾಡಿದ ನಂತರ ಕೆಲವು ದಿನಗಳವರೆಗೆ ತುಂಬಾ ಕಷ್ಟವಾಯಿತು. ನನ್ನ ಪರ್ಸ್‌ನಲ್ಲಿ ನಗದು ಹೊತ್ತುಕೊಂಡು ಹೋಗುವ ಅಭ್ಯಾಸವಿಲ್ಲದ ಕಾರಣ, ನಾನು ಆಗಾಗ ಹಣವನ್ನು ತೆಗೆದುಕೊಳ್ಳುವುದನ್ನು ಮರೆತುಬಿಡುತ್ತೇನೆ. ಅಂತಹ ಸಂದರ್ಭಗಳಲ್ಲಿ ಸ್ನೇಹಿತರು ಚಹಾ ಕುಡಿಯುವಾಗ ಹಣ ನೀಡುವ ಮೂಲಕ ನನಗೆ ಸಹಾಯ ಮಾಡಿದರು. ಆದರೆ ಇಂದು, ನಾನು UPI ಪಾವತಿಗಳಿಲ್ಲದೆ ಬದುಕಲು ಕಲಿತಿದ್ದೇನೆ. ನೀವೂ ಕೂಡ ಇದನ್ನು ಅಳವಡಿಸಿಕೊಂಡರೆ ಒಳ್ಳೆಯದು ಎಂದು ಅನಮ್​ ಮಿರ್ಜಾ ಸಲಹೆ ನೀಡಿದ್ದಾರೆ.

ಇನ್ನು ಅನಮ್ ಮಿರ್ಜಾ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನಮ್​ ಅವರ ಅಭಿಪ್ರಾಯವನ್ನು ಬೆಂಬಲಿಸಿ ಅನೇಕ ಜನರು ಕಾಮೆಂಟ್ ಮಾಡಿದ್ದಾರೆ. ಯುಪಿಐ ಆ್ಯಪ್ ಫೋನ್‌ನಲ್ಲಿ ಇದ್ದರೆ ಅನಗತ್ಯ ವಸ್ತುಗಳನ್ನು ಖರೀದಿಸುವ ಭಾವನೆ ಬರುತ್ತದೆ ಮತ್ತು ಇದು ಶ್ರೀಮಂತರಾಗಲು ಉತ್ತಮ ಮಾರ್ಗವಾಗಿದೆ ಎಂದು ಜನರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)