ನ್ಯೂಸ್

ಎಸ್​ಐ ಅಕ್ರಮ ನ್ಯಾಯಾಂಗ ತನಿಖೆ?: ಸಚಿವ ಸಂಪುಟ ಸಭೆಯಲ್ಲೂ ಚರ್ಚೆ; ಶೀಘ್ರವೇ ಆದೇಶ ನಿರೀಕ್ಷೆ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಕಳೆದ ಸರ್ಕಾರದ ಅವಧಿಯಲ್ಲಿನ ಪೊಲೀಸ್ ಸಬ್ ಇನ್​ಸ್ಪೆಕ್ಟರ್ ನೇಮಕ ಪರೀಕ್ಷೆ ಅಕ್ರಮದ ತನಿಖೆ ಹಳ್ಳಹಿಡಿಯಿತೇ? ಈಗ ನಡೆದಿರುವ ತನಿಖೆಯೇ ಕೊನೆಯಾಗುವುದೇ? ಎಂಬ ಬಿರುಸಿನ ಚರ್ಚೆ ಮತ್ತು ಸರ್ಕಾರದಲ್ಲಿನ ಭಿನ್ನ ಅಭಿಪ್ರಾಯಗಳ ನಡುವೆ ತನಿಖೆ ವಿಚಾರವಾಗಿ ಹೊಸ ಬೆಳವಣಿಗೆಗಳ ಸಾಧ್ಯತೆ ದಟ್ಟವಾಗಿದೆ.

ಪ್ರಕರಣವನ್ನು ಇನ್ನಷ್ಟು ವ್ಯಾಪಕಗೊಳಿಸಲು ನ್ಯಾಯಾಂಗ ತನಿಖೆ ನಡೆಸಬೇಕೆಂಬ ಆಂತರಿಕ ಒತ್ತಡ ಒಂದು ಕಡೆಯಾದರೆ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಿರಿಯ ಪೊಲೀಸ್ ಅಧಿಕಾರಿ ಅಮೃತ್ ಪೌಲ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ಕೊಡಲು ಅವಕಾಶ ನೀಡುವ ಬಗ್ಗೆ ಶೀಘ್ರವೇ ತೀರ್ಮಾನ ಹೊರಬೀಳಲಿದೆ. ಬಿಟ್ ಕಾಯಿನ್ ವಿಚಾರ ಮತ್ತು ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮದ ಬಗ್ಗೆ ವ್ಯಾಪಕ ತನಿಖೆಯಾಗಬೇಕು. ಪಕ್ಷವು ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಇದನ್ನು ದೊಡ್ಡ ಅಸ್ತ್ರವಾಗಿ ಬಳಸಲಾಗಿತ್ತು. ಈಗ ಸುಮ್ಮನಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಕಳೆದ ಗುರುವಾರ ನಡೆದ ಸಂಪುಟ ಸಭೆಯಲ್ಲಿ ವ್ಯಕ್ತವಾಗಿತ್ತು. ಜತೆಗೆ, ಇದು ಇಲಾಖಾ ಮಟ್ಟದ ತನಿಖೆಯಾದರೆ ಯಾವುದೇ ಪ್ರಯೋಜನವಾಗದು. ಅಡ್ಜೆಸ್ಟ್​ಮೆಂಟ್​ಗಳಾಗಿಬಿಡಬಹುದು, ಗಂಭೀರತೆ ಇರುವುದಿಲ್ಲ. ಈ ಕಾರಣಕ್ಕೆ ಗಂಭೀರವಾಗಿ ತನಿಖೆಯಾಗಿ ಜನರಿಗೆ ಸತ್ಯ ಗೊತ್ತಾಗಬೇಕು ಎಂದು ಸಚಿವ ಸಂಪುಟ ಸಹೋದ್ಯೋಗಿಗಳು ಸಿಎಂ ಮುಂದೆ ಅಹವಾಲು ಮಂಡಿಸಿದ್ದಾರೆ.

ಇನ್ನೊಂದೆಡೆ, ನಾವು ಇದೇ ವಿಚಾರವನ್ನು ಎಷ್ಟು ದಿನ ಮುಂದುವರಿಸುವುದು. ಹಳೆಯದನ್ನೇ ಕೆದುಕುತ್ತಾ ಕುಳಿತುಕೊಳ್ಳುವುದು ಸಾಧ್ಯವೇ, ಮುಂದೆ ಸಾಗೋಣ ಎಂದು ಅಭಿಪ್ರಾಯವನ್ನೂ ಕೆಲ ಹಿರಿಯ ಸಚಿವರು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆ ಬಗ್ಗೆ ಒಲವು ತೋರಿದ್ದು, ಈ ವಾರದಲ್ಲೇ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೂಡ ಹೈಕೋರ್ಟ್ ಮುಂದಿದೆ. ಅಲ್ಲದೆ, ಪ್ರಧಾನ ಪ್ರಕರಣದ ವಿಚಾರಣೆ ಕೂಡ ನಡೆಯುತ್ತಿದೆ. ಹೀಗಾಗಿ ಕೋರ್ಟ್​ನ ಬೆಳವಣಿಗೆಯನ್ನು ಗಮನಿಸಿ ಮುಂದುವರಿಯುವ ಸಾಧ್ಯತೆಯೂ ಹೆಚ್ಚಿದೆ ಎಂದು ಸಚಿವರೊಬ್ಬರು ವಿಜಯವಾಣಿಗೆ ತಿಳಿಸಿದರು.

ಸರ್ಕಾರಕ್ಕೆ ಪಟ್ಟಿ ಜಿಜ್ಞಾಸೆ

545 ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಆರೋಪಿಗಳಲ್ಲದವರ ವಿಚಾರದಲ್ಲಿ ನಿಲುವು ಸ್ಪಷ್ಟಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ಕಾನೂನು ಇಲಾಖೆಯು ಅಡ್ವೋಕೇಟ್ ಜನರಲ್ ಸಮ್ಮುಖದಲ್ಲಿ ಅಭಿಪ್ರಾಯವನ್ನು ಸರ್ವಸಮ್ಮತಗೊಳಿಸುವ ಪ್ರಯತ್ನ ಗೃಹ ಇಲಾಖೆಯಿಂದ ನಡೆದಿದೆ. ಆಯ್ಕೆಪಟ್ಟಿ ರದ್ದುಪಡಿಸಿದ ಸರ್ಕಾರದ ಕ್ರಮ ಪ್ರಶ್ನಿಸಿದ ರಿಟ್ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ಆರೋಪಿಗಳನ್ನು ಹೊರತುಪಡಿಸಿ ಉಳಿದವರನ್ನು ಪರಿಗಣಿಸಲು ಸಾಧ್ಯವೇ? ಅಂತಹವರ ಸಾಮರ್ಥ್ಯ ಅಳೆದು ಆಯ್ಕೆ ಮಾಡಲು ಸಾಧ್ಯವಿದೆಯೇ ಎಂದು ತಿಳಿಸಿ ಎಂದು ಸರ್ಕಾರದ ಮುಂದೆ ಹೊಸ ಅವಕಾಶವನ್ನು ತೆರೆದಿಟ್ಟಿತು. ಇದೀಗ ನಿರ್ಧಾರ ಅಂತಿಮಗೊಳಿಸಲು ಸರ್ಕಾರಕ್ಕೆ ಇನ್ನು ಕೆಲ ದಿನಗಳಷ್ಟೇ ಬಾಕಿ ಇದೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಪಟ್ಟಿಯನ್ನೇ ರದ್ದುಪಡಿಸಲಾಗಿದೆ. ಈಗ ಪಟ್ಟಿಯನ್ನು ಮತ್ತೆ ಒಪ್ಪಿಕೊಳ್ಳುವ ಬಗ್ಗೆ ಹೊಸ ಸರ್ಕಾರ ತೀರ್ವನಿಸಬೇಕಾಗಿದೆ. ಅಕ್ರಮದಲ್ಲಿ ಭಾಗಿಯಾಗದವರ ಹಿತರಕ್ಷಣೆ ಕಾಯಲು ಅವಕಾಶವಿದೆ, ಜತೆಗೆ ನೇಮಕ ಪ್ರಕ್ರಿಯೆ ಸರಾಗವಾಗಿ ತುದಿಮುಟ್ಟಲು ಕೂಡ ಸಾಧ್ಯವಿದೆ ಎಂಬ ವಾದವೂ ಇದೆ. ಆದರೆ, ಸುಪ್ರಿಂಕೋರ್ಟ್​ನ ಆದೇಶದಲ್ಲಿ ಯಾವುದೇ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಅದನ್ನು ಪರಿಗಣಿಸಲು ಬರುವುದಿಲ್ಲ ಎಂಬ ಸ್ಪಷ್ಟತೆಯೂ ಇದೆ. ಹೀಗಾಗಿ ಸರ್ಕಾರದಲ್ಲಿ ಭಿನ್ನ ನಿಲುವಿದೆ.

ಎಸ್​ಐ ನೇಮಕಾತಿ ಹಗರಣದ ನ್ಯಾಯಾಂಗ ತನಿಖೆಯಾಗಬೇಕೆಂಬುದು ಬೇಡಿಕೆ ಮುಂಚೆಯಿಂದಲೂ ಇದೆ. ಇಲಾಖಾ ತನಿಖೆಯಿಂದ ಪ್ರಯೋಜನವಾಗದು. ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ. | ಪ್ರಿಯಾಂಕ್ ಖರ್ಗೆ ಐಟಿಬಿಟಿ, ಗ್ರಾಮೀಣಾಭಿವೃದ್ಧಿ ಸಚಿವ

ಜಡ್ಜ್ ಎದುರು ಪೌಲ್ ಹೇಳಿಕೆ?: ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವುದಾಗಿ ಬಂಧಿತ ಎಡಿಜಿಪಿ ಅಮೃತ್ ಪೌಲ್ ಈ ಹಿಂದೆಯೇ ಹೇಳಿದ್ದರು. ಅಂದಿನ ಸರ್ಕಾರ ಅದಕ್ಕೆ ಅವಕಾಶ ನೀಡಿರಲಿಲ್ಲ. ಸರ್ಕಾರ ಬದಲಾಗುತ್ತಿದ್ದಂತೆ ನಿಲುವು ಕೂಡ ಬದಲಾಗಿದ್ದು, ಜಡ್ಜ್ ಮುಂದೆ ಆರೋಪಿ ಅಧಿಕಾರಿಯನ್ನು ಹಾಜರುಪಡಿಸಲು ಒಲವು ವ್ಯಕ್ತವಾಗಿದ್ದು, ಇದಕ್ಕೆ ಸಿಎಂ ಒಪ್ಪಿಗೆ ನೀಡಬೇಕಿದೆ.

ನೇಮಕಾತಿ ಹಗರಣದ ಮುಖ್ಯಾಂಶಗಳು

  • 545 ಪಿಎಸ್​ಐ ಹುದ್ದೆಗಳ ಭರ್ತಿಗೆ 2022ರ ಅ.3 ರಂದು ಬೆಂಗಳೂರು ಸೇರಿ 7 ಜಿಲ್ಲೆಗಳಲ್ಲಿನ 93 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ.
  • ಈ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಹಣ ನೀಡಿ ಉತ್ತೀರ್ಣರಾಗಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂತು.
  • ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತು. ಕೋಟ್ಯಂತರ ರೂ. ಹಣ ಪಡೆದಿರುವುದು ಕಂಡುಬಂತು.
  • ನೇಮಕಾತಿ ವಿಭಾಗದ ಅಧಿಕಾರಿಗೆ 30-35 ಲಕ್ಷ ರೂ. ತಲುಪುತ್ತಿತ್ತು ಎಂಬ ಅಂಶ ಖಚಿತವಾಯಿತು.
  • ಅಧಿಕಾರಿಗಳ ಶಾಮೀಲು ಖಚಿತವಾಗಿ ಎಡಿಜಿಪಿ ಬಂಧನ. ಅನೇಕ ರಾಜಕೀಯ ನಾಯಕರೂ ಸಿಕ್ಕಿಬಿದ್ದರು.