ನ್ಯೂಸ್

ಹುಟ್ಟುಹಬ್ಬ ಆಚರಿಸಿಕೊಂಡ ಖುಷಿಯಲ್ಲಿ ಫ್ರೆಂಡ್ಸ್​ ಜತೆ ಜಾಲಿ ರೈಡ್​ ಹೋದ ಯುವತಿಗೆ ಕಾದಿತ್ತು ಶಾಕ್​!

ಪಂಚಕುಲ (ಹರಿಯಾಣ): ತನ್ನ 22ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಯುವತಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ಜಾಲಿ ರೈಡ್​ಗೆಂದು ತೆರಳಿ ಸಾವಿಗೀಡಾಗಿರುವ ದುರಂತ ಘಟನೆ ಹರಿಯಾಣದ 26ನೇ ವಲಯದ ಐಟಿಬಿಪಿ ಗೇಟ್​ ಬಳಿ ನಡೆದಿದೆ.

ಅನು ಮೃತ ದುರ್ದೈವಿ. ಸ್ನೇಹಿತೆಯೊಂದಿಗೆ ಬೈಕ್​ನಲ್ಲಿ ಸೋಮವಾರ ರಾತ್ರಿ ಜಾಲಿ ರೈಡ್​ಗೆ ತೆರಳಿದ್ದಾಗ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ. ಸ್ನೇಹಿತೆಯು ವೇಗವಾಗಿ ಬೈಕ್​ ಚಾಲನೆ ಮಾಡಿದ್ದೆ ಮಗಳ ಸಾವಿಗೆ ಕಾರಣ ಎಂದು ಹೇಳಿ ಸಂತ್ರಸ್ತ ಯುವತಿಯ ಪಾಲಕರು ಚಂಡಿಗಢದ ಮೌಲಿ ಜಾಗ್ರನ್​ ನಿವಾಸಿಯಾಗಿರುವ ಆಕೆಯ ಸ್ನೇಹಿತೆ ಉಸ್ಮಾನ್​ ವಿರುದ್ಧ ದೂರು ದಾಖಲಿಸಿದ್ದಾರೆ.

ಹರಿಯಾಣ ದೆರಾ ಬಸ್ಸಿಯ ಖೇರಿ ಗ್ರಾಮದ ನಿವಾಸಿಯಾದ ಅನು ಸೆಕ್ಟರ್​ 15ರಲ್ಲಿ ಸಲೂನ್​ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ನಿನ್ನೆ ಹುಟ್ಟುಹಬ್ಬವಿದ್ದರಿಂದ ಆಚರಣೆ ಮಾಡಿ ಅದೇ ಖುಷಿಯಲ್ಲಿ ಸ್ನೇಹಿತೆ ಉಸ್ಮಾನ್​ ಜತೆಗೆ ಅನು ಜಾಲಿ ರೈಡ್​ಗೆ ತೆರಳಿದ್ದಾಳೆ. ಉಸ್ಮಾನ್​ ವೇಗವಾಗಿ ಬೈಕ್​ ಚಲಿಸುತ್ತಾ ಸ್ಪೀಡ್​ ಬ್ರೇಕರ್​ ನೋಡದೆ ಅದರ ಮೇಲೆ ಬೈಕ್​ ಹಾರಿಸಿದ್ದಾಳೆ. ಈ ವೇಳೆ ಆಯತಪ್ಪಿ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಸೆಕ್ಟರ್​​ 6ರಲ್ಲಿರುವ ಆಸ್ಪತ್ರೆಗೆ ದಾಖಲಿಸಿದಾದರೂ ಅದಾಗಲೇ ಸಾವಿಗೀಡಾಗಿರುವ ಬಗ್ಗೆ ವೈದ್ಯರು ತಿಳಿಸಿದರು.

ಶವಪರೀಕ್ಷೆಯ ಬಳಿಕ ಅನು ಶವವನ್ನು ಪಾಲಕರಿಗೆ ಹಸ್ತಾಂತರಿಸಲಾಯಿತು. ಇದೀಗ ಆರೋಪಿ ಉಸ್ಮಾನಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಉಸ್ಮಾನ್​ ವಿರುದ್ಧ ಬೇಜವಾಬ್ದಾರಿಯಿಂದ ಬೈಕ್​ ಚಾಲನೆ ಮಾಡಿ ಸಾವಿಗೆ ಕಾರಣವಾದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)