ನ್ಯೂಸ್

'ಸುಂದರ ತ್ವಚೆಗಾಗಿ ಇದನ್ನು ಬಳಸಿ' ಎಂದು ಇನ್ಮುಂದೆ ಹೇಳಲ್ಲ ಎಂದ ಜಾನ್ಸ್​ನ್​ ಆ್ಯಂಡ್ ಜಾನ್ಸನ್​

ನವದೆಹಲಿ: ಸುಂದರ ತ್ವಚೆ ಬೇಕೇ- ಇದನ್ನು ಬಳಸಿ, ಗೌರ ವರ್ಣ ಬೇಕೇ- ಈ ಕ್ರೀಮ್​ ಹಚ್ಚಿ, ಹುಡುಗರು ನಿಮ್ಮತ್ತ ಆಕರ್ಷಿತರಾಗಬೇಕೆ- ಹಾಗಿದ್ದರೆ ಇದನ್ನು ಬಳಸಿ ಎಂದೆಲ್ಲಾ ಟೊಳ್ಳು ಭರವಸೆ ನೀಡುವ ಮೂಲಕ ಜನರನ್ನು ಮರಳು ಮಾಡುವ ಫೇರ್​ನೆಸ್​ ಕ್ರೀಂಗಳ ವಿರುದ್ಧ ಇದೀಗ ದೊಡ್ಡ ಅಭಿಯಾನವೇ ಶುರುವಾಗಿದೆ. ಫೇರ್​ನೆಸ್​ ಕ್ರೀಂಗಳ ಜಾಹೀರಾತಿಗೆ ಸರ್ಕಾರ ನಿರ್ಬಂಧ ವಿಧಿಸಿದೆ.

ಈಗ ಅದರ ಬೆನ್ನಲ್ಲೇ ಜಾನ್ಸನ್​ ಆ್ಯಂಡ್​ ಜಾನ್ಸನ್​ ಕಂಪನಿ ತಾನು ಇಂಥ ಬರಹಗಳುಳ್ಳ ಉತ್ಪನ್ನಗಳನ್ನು ಇನ್ನು ಮುಂದೆ ಮಾರಾಟ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದೆ.

ಇಂಥ ಕ್ರೀಂಗಳು ವರ್ಣಭೇದ ನೀತಿಯನ್ನು ಬಿಂಬಿಸುತ್ತಿರುವುದಾಗಿ ಟೀಕೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ, ಈಗ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಕಂಪನಿ, ಈ ಹೇಳಿಕೆ ನೀಡಿದೆ.

ಈ ಬರಹಗಳುಳ್ಳ ಕ್ರೀಮ್​ಗಳನ್ನು ಅಮೆರಿಕ ಯಾವಾಗಲೋ ನಿಷೇಧಿಸಿದ್ದು, ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಇವುಗಳ ಮಾರಾಟ ನಡೆಯುತ್ತಿತ್ತು. ಆದರೆ ಈಗ ಭಾರತ ಸರ್ಕಾರ ಕೂಡ ಕಠಿಣ ನಿಯಮ ರೂಪಿಸಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಹೇಳಿಕೆಯನ್ನು ಕಂಪನಿ ನೀಡಿದೆ.

ತನ್ನ ಅನೇಕ ಪ್ರಾಡಕ್ಟ್​ಗಳಲ್ಲಿ ಇದೇ ಲೈನ್​ಗಳು ಇವೆ. ವೆಬ್​ಸೈಟ್​ನಲ್ಲಿ ಕೂಡ ಈ ಬಗ್ಗೆ ಉಲ್ಲೇಖವಿದೆ. ಆದ್ದರಿಂದ ವೆಬ್​ಸೈಟ್​ ಕೂಡ ಅಪ್​ಡೇಟ್​ ಮಾಡಲಾಗುವುದು ಎಂದು ಕಂಪನಿ ಹೇಳಿದೆ.

ಈ ನಡುವೆ, ಫೇರ್​ ಆ್ಯಂಡ್​ ಲವ್ಲಿ ಮಾರಾಟವನ್ನುನಿಲ್ಲಿಸುವಂತೆ ಕೆಲವು ಕಡೆಗಳಲ್ಲಿ ಲಕ್ಷಾಂತರ ಮಂದಿ ಸಹಿ ಹಾಕಿದ್ದಾರೆ. ಕಪ್ಪು ಚರ್ಮದ ಮಹಿಳೆಯರಿಗೆ ಭೇದಭಾವ ಮಾಡಲಾಗುತ್ತಿದೆ. ಆದ್ದರಿಂದ ಇದನ್ನು ನಿಷೇಧಿಸಬೇಕು ಎಂದು ಕೋರಲಾಗಿದೆ.

ಅಮೆರಿಕದಲ್ಲಿ ಕಪ್ಪುವರ್ಣೀಯ ಜಾರ್ಜ್​ ಫ್ಲ್ಯಾಡ್​ ಹತ್ಯೆಯ ನಂತರ ಕಪ್ಪು ವರ್ಣದ ಬಗ್ಗೆ ಈಗಾಗಲೇ ದೊಡ್ಡ ಆಂದೋಲನ ನಡೆದಿದೆ. ಅದರ ಆಧಾರದ ಮೇಲೆಯೇ ಈ ಲೋಷನ್​ ಹಾಗೂ ಕ್ರೀಂಗಳನ್ನೂ ಬಂದ್​ ಮಾಡಬೇಕು ಎಂಬ ಕೂಗು ಕೇಳಿಬಂದಿದೆ. (ಏಜೆನ್ಸೀಸ್​)