ನ್ಯೂಸ್

ಉದ್ಯೋಗ ಮಾಹಿತಿ: ಭಾರತೀಯ ವಾಯುಪಡೆಯಲ್ಲಿ ಕಮಿಷನ್ಡ್​ ಆಫೀಸರ್​ ಹುದ್ದೆ

ಭಾರತೀಯ ವಾಯುಪಡೆಯ ಫ್ಲೈಯಿಂಗ್​ ಮತ್ತು ಗ್ರೌಂಡ್​ ಡ್ಯೂಟಿ (ಟೆಕ್ನಿಕಲ್​ ಮತ್ತು ನಾನ್​ಟೆಕ್ನಿಕಲ್​) ವಿಭಾಗದಲ್ಲಿ ಕಮಿಷನ್ಡ್​ ಆಫೀಸರ್ಸ್​ ಹುದ್ದೆಗೆ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2024ರ ಜನವರಿಯಿಂದ ನಡೆಯಲಿರುವ ಏರ್​ಫೋರ್ಸ್​ ಕಾಮನ್​ ಅಡ್ಮಿನಿಸ್ಟ್ರೆಷನ್​ ಟೆಸ್ಟ್​ (ಎಫ್​​ಸಿಎಟಿ)- 2023ರ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

2024ರ ಜನವರಿಯಲ್ಲಿ ಆರಂಭಿಸುತ್ತಿರುವ ಹೊಸ ಕೋರ್ಸ್​ಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಶಾರ್ಟ್​ ಸರ್ವಿಸ್​ ಕಮಿಷನ್​ (ಎಸ್​ಎಸ್​ಸಿ) ಮತ್ತು ಪರ್ಮನೆಂಟ್​ ಕಮಿಷನ್​ (ಪಿಸಿ) ವಿಭಾಗದ ಏರ್​ಪೋರ್ಸ್​ ಕಾಮನ್​ ಅಡ್ಮಿಷನ್​ ಟೆಸ್ಟ್​ (ಎಎ್​ಸಿಎಟಿ) ಎಂಟ್ರಿ ಮತ್ತು ಎನ್​ಸಿಸಿ ಸ್ಪೆಷಲ್​ ಎಂಟ್ರಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಪರ್ಮನೆಂಟ್​ ಕಮಿಷನ್​ ಅಧಿಕಾರಿ ಹುದ್ದೆಗೆ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇರಲಿದೆ. ಎಸ್​ಎಸ್​ಸಿ ಅಧಿಕಾರಿ ಹುದ್ದೆಗೆ ಮಹಿಳೆ ಹಾಗೂ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳ ದೇಹದಲ್ಲಿ ಟ್ಯಾಟೂ (ಹಚ್ಚೆ) ಇರಬಾರದು ಎಂದು ತಿಳಿಸಲಾಗಿದೆ. ಪರೀಕ್ಷೆಯ ವಿಸ್ತೃತ ವೇಳಾಪಟ್ಟಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

ಹುದ್ದೆ ವಿವರ
ಎಎಫ್​​​ಸಿಎಟಿ ಎಂಟ್ರಿ
  • ಪ್ಲೆಯಿಂಗ್​ -10
  • ಗ್ರೌಂಡ್​ ಡ್ಯೂಟಿ (ಟೆಕ್ನಿಕಲ್​) -130
  • ಗ್ರೌಂಡ್​ ಡ್ಯೂಟಿ (ನಾನ್​ ಟೆಕ್ನಿಕಲ್​) -101
ಎನ್​ಸಿಸಿ ಸ್ಪೆಷಲ್​ ಎಂಟ್ರಿ
  • ಪ್ಲೆಯಿಂಗ್​-ಸಿಡಿಎಸ್​ಸಿ ಖಾಲಿ ಇರುವ ಹುದ್ದೆಯ ಶೇ.10ರಷ್ಟು ಪಿಸಿಗೆ ಮತ್ತು ಎಫ್​​ಸಿಎಟಿಯಲ್ಲಿ ಖಾಲಿ ಇರುವ ಹುದ್ದೆಯ ಶೇ.10 ಎಸ್​ಎಸ್​ಸಿಗೆ
ಶೈಕ್ಷಣಿಕ ಅರ್ಹತೆ

ಫ್ಲೈಯಿಂಗ್​ ವಿಭಾಗಕ್ಕೆ ಗಣಿತ ಮತ್ತು ಭೌತಶಾಸ್ತ್ರ ವಿಷಯದಲ್ಲಿ ಕನಿಷ್ಠ ಶೇ.50 ಅಂಕದೊಂದಿಗೆ ದ್ವೀತಿಯ ಪಿಯುಸಿ ಉತ್ತೀರ್ಣರಾಗಿದ್ದು, ಯಾವುದೇ ಪದವಿಯನ್ನು ಶೇ.60 ಅಂಕದೊಂದಿಗೆ ಉತ್ತೀರ್ಣರಾಗಿರಬೇಕು. ಗ್ರೌಂಡ್​ ಡ್ಯೂಟಿ ಟೆಕ್ನಿಕಲ್​ ವಿಭಾಗಕ್ಕೆ ಇಂಜಿನಿಯರಿಂಗ್​ ಪದವಿ ಪಡೆದಿರಬೇಕು. ನಾನ್​ ಟೆಕ್ನಿಕಲ್​ ವಿಭಾಗಕ್ಕೆ ಯಾವುದೇ ಪದವಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.

ವಯೋಮಿತಿ

1.1.202ಕ್ಕೆಕ್ಕೆ ಅನ್ವಯವಾಗುವಂತೆ ಫ್ಲೈಯಿಂಗ್​ ವಿಭಾಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 20 ರಿಂದ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, 1998ರ ಜ.2 ಹಾಗೂ 2004ರ ಜ.1ರ ನಡುವೆ ಜನಿಸಿರಬೇಕು. ಗ್ರೌಂಡ್​ ಡ್ಯೂಟಿ (ಟೆಕ್ನಿಕಲ್​/ನಾನ್​ ಟೆಕ್ನಿಕಲ್​) ವಿಭಾಗದ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 20 ರಿಂದ 26 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. 25 ವರ್ಷದೊಳಗಿನ ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು ಎಂದು ತಿಳಿಸಲಾಗಿದೆ.

ತರಬೇತಿ ವಿವರ

2024ರ ಜನವರಿ ಮೊದಲ ವಾರದಲ್ಲಿ ತರಬೇತಿ ಆರಂಭವಾಗಲಿದ್ದು, ಹೈದರಾಬಾದ್​ನ ಡುಂಡಿಗಲ್​ನಲ್ಲಿರುವ ಏರ್​ಫೋರ್ಸ್​​ ಅಕಾಡೆಮಿಯಲ್ಲಿ ತರಬೇತಿ ನಡೆಯಲಿದೆ. ಫ್ಲೈಯಿಂಗ್​​ ಮತ್ತು ಗ್ರೌಂಡ್​ ಡ್ಯೂಟಿ ಟೆಕ್ನಿಕಲ್​ ವಿಭಾಗಕ್ಕೆ 74 ವಾರದ ತರಬೇತಿ, ನಾನ್​ ಟೆಕ್ನಿಕಲ್​ ವಿಭಾಗಕ್ಕೆ 52 ವಾರಗಳ ತರಬೇತಿ ನೀಡಲಾಗುವುದು. ಪ್ಯಾನ್​ಕಾರ್ಡ್​, ಎಸ್ ಬಿಐ ಖಾತೆ, ಆಧಾರ್​ ಸಂಖ್ಯೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಹೊಂದಿರಬೇಕು.

ಗೌರವಧನ

ಕನಿಷ್ಠ ವೇತನ 15,500 ರೂ. ಇರಲಿದ್ದು, ಮೊದಲ ವರ್ಷದ ತರಬೇತಿ ಪೂರ್ಣಗೊಳಿಸಿದ ನಂತರ ಮಾಸಿಕ 56,100 - 1,77,500 ರೂ. ಇರಲಿದೆ. ಸರ್ವಿಂಗ್​ ಆಫೀಸರ್​ಗೆ 1 ಕೋಟಿ ಮೌಲ್ಯದ ವಿಮೆ ಹಾಗೂ ಫ್ಲೈಯಿಂಗ್​​ ವಿಭಾಗದ ಅಧಿಕಾರಿಗಳಿಗೆ 12 ಲಕ್ಷ ರೂ, ಮೌಲ್ಯದ ವಿಮೆ ಇರಲಿದೆ.

ವೈವಾಹಿಕ ಮಾನದಂಡ

25 ವರ್ಷದೊಳಗಿನ ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು, 25 ವರ್ಷದೊಳಗಿನ ವಿಧವೆ/ವಿಧವ, ವಿಚ್ಛೇದಿತ ಅಭ್ಯರ್ಥಿಗಳಿಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.

ಅರ್ಜಿ ಶುಲ್ಕ

ಎಎಫ್​​ಸಿಎಟಿ ವಿಭಾಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆನ್​ಲೈನ್​ ಪರೀಕ್ಷೆ ನಡೆಸುವುದರಿಂದ ಪರೀಕ್ಷಾ ಶುಲ್ಕವಾಗಿ 250 ರೂ. ಪಾವತಿಸತಕ್ಕದ್ದು. ಎನ್​ಸಿಸಿ ಸ್ಪೆಷಲ್​ ಎಂಟ್ರಿ ವಿಭಾಗದ ಅಭ್ಯರ್ಥಿಗಳಿಗೆ ಅರ್ಜಿಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಕೆ ಆರಂಭ: 1.12.2022
ಅರ್ಜಿ ಸಲ್ಲಿಸಲು ಕೊನೇ ದಿನ: 30.12.2022

ಅಧಿಸೂಚನೆಗೆ: http://bit.ly/3VnSz5U
ಮಾಹಿತಿಗೆ: www.careerindianairforce.cdac.in