ನ್ಯೂಸ್

ಕರೊನಾ ಕರ್ಫ್ಯೂ ಉಲ್ಲಂಘಿಸಿ ಶೂಟಿಂಗ್ ! ನಟ ಜಿಮ್ಮಿ ಶೇರ್​​ಗಿಲ್ ಸೇರಿ 35 ಜನರ ಮೇಲೆ ಕೇಸ್

ಲೂಧಿಯಾನ : ಕರೊನಾ ಉಲ್ಬಣವಾಗುತ್ತಿರುವುದನ್ನು ತಡೆಯಲು ಪಂಜಾಬಿನಲ್ಲಿ ಸಂಜೆ 6 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ವಿಧಿಸಲಾಗಿದೆ. ಆದರೆ ಈ ಆದೇಶವನ್ನು ಲೆಕ್ಕಿಸದೆ, ಲೂಧಿಯಾನದಲ್ಲಿ 150 ಜನರ ತಂಡದೊಂದಿಗೆ ವೆಬ್​ ಧಾರಾವಾಹಿಯೊಂದರ ಶೂಟಿಂಗ್​ ನಡೆಸುತ್ತಿದ್ದುದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ನಟ ಜಿಮ್ಮಿ ಶೇರ್​ಗಿಲ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಈಶ್ವರ್ ನಿವಾಸ್​ ಸೇರಿದಂತೆ 35 ಜನರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಕರ್ಫ್ಯೂ ಜಾರಿಯಾಗಿ ಎರಡು ಗಂಟೆಗಳು ಕಳೆದರೂ ಲೂಧಿಯಾನದ ಆರ್ಯ ಸೀನಿಯರ್ ಸೆಕೆಂಡರಿ ಸ್ಕೂಲ್​ನಲ್ಲಿ 150 ಜನ ಸಿಬ್ಬಂದಿಯೊಂದಿಗೆ ಹಿಂದಿ ವೆಬ್ ಧಾರಾವಾಹಿಯಾದ 'ಯುವರ್ ಆನರ್'ನ ಚಿತ್ರೀಕರಣ ನಡೆಯುತ್ತಿತ್ತು. ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಪೊಲೀಸರು ದಾಳಿ ನಡೆಸಿದಾಗ ಧಾರಾವಾಹಿಯಲ್ಲಿ ನ್ಯಾಯಾಧೀಶರ ಪಾತ್ರ ವಹಿಸುತ್ತಿರುವ ಜಿಮ್ಮಿ ಶೇರ್​ಗಿಲ್ ಅವರನ್ನೊಳಗೊಂಡ ಕೋರ್ಟ್​ ಸೀನ್​ಅನ್ನು ಸೆರೆ ಹಿಡಿಯಲಾಗುತ್ತಿತ್ತು ಎಂದು ಸಬ್​ಇನ್ಸ್​​ಪೆಕ್ಟರ್ ಹರ್​ಜೀತ್​ ಸಿಂಗ್ ಹೇಳಿದ್ದಾರೆ.

ನಿರ್ದೇಶಕ ಈಶ್ವರ್​ ನಿವಾಸ್, ನಿರ್ಮಾಣ ತಂಡದ ಆಕಾಶ್​​ದೀಪ್ ಸಿಂಗ್ ಮತ್ತು ಮಂದೀಪ್​ ಸಿಂಗ್ ಎಂಬುವರನ್ನು ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಒಟ್ಟು 35 ಜನರ ವಿರುದ್ಧ ಸರ್ಕಾರಿ ಆದೇಶವನ್ನು ಉಲ್ಲಂಘಿಸಿದ ಮತ್ತು ರೋಗ ಹರಡುವುದಕ್ಕೆ ಎಡೆಮಾಡಿಕೊಡುವಂತೆ ನಿರ್ಲಕ್ಷ್ಯವಹಿಸಿದ ಆರೋಪಗಳನ್ನು ಐಪಿಸಿ ಸೆಕ್ಷನ್ 188, 269 ಮತ್ತು ಎಪಿಡೆಮಿಕ್ ಡಿಸೀಸಸ್ ಆ್ಯಕ್ಟ್​ನ ಸೆಕ್ಷನ್ 3 ರಡಿ ಹೊರಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. (ಏಜೆನ್ಸೀಸ್)