ನ್ಯೂಸ್

ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ..

Webdesk - Ravikanth
  • ತೆಲಂಗಾಣದ ಜಸ್ಟಿ ಯಶವಂತ್ ವಿ ವಿ ಎಸ್ ಮೊದಲ ಸ್ಥಾನ
  • ಮೊದಲ ಬಾರಿಗೆ 14 ಅಭ್ಯರ್ಥಿಗಳಿಗೆ ಪೂರ್ಣಾಂಕ
  • ಬೋಯಾ ಹರೆನ್ ಸಾತ್ವಿಕ್, ಜೆಇಇ ರಾಜ್ಯದ ಟಾಪರ್

ಬೆಂಗಳೂರು: ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆಸಲಾಗುವ ಜೆಇಇ ಮುಖ್ಯ ಪರೀಕ್ಷೆ 2022ರ ಸೆಷನ್ 1 (ಬಿಇ/ಬಿ.ಟೆಕ್)ರ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪ್ರಕಟಿಸಿದ್ದು, ಮೊದಲ ಸ್ಥಾನವನ್ನು ತೆಲಂಗಾಣದ ಜಸ್ಟಿ ಯಶವಂತ್ ವಿ ವಿ ಎಸ್ ತಮ್ಮದಾಗಿಸಿ ಕೊಂಡಿದ್ದಾರೆ. ಇದೇ ಮೊದಲ ಬಾರಿಗೆ 14 ಅಭ್ಯರ್ಥಿಗಳು 100 ಅಂಕಗಳನ್ನು ಪಡೆಯುವ ಮೂಲಕ ದಾಖಲೆ ನಿರ್ವಿುಸಿದ್ದಾರೆ. 100 ಅಂಕ ಪಡೆದವರ ಪಟ್ಟಿಯಲ್ಲಿ ಕರ್ನಾಟಕದ ಬೋಯಾ ಹರೆನ್ ಸಾತ್ವಿಕ್ ಕೂಡ ಒಬ್ಬರಾಗಿದ್ದಾರೆ.

ಪುರುಷರ ವಿಭಾಗದಲ್ಲಿ ತೆಲಂಗಾಣದ ಅನಿಕೇತ್ ಚಟ್ಟೋಪಾಧ್ಯಾಯ ಹಾಗೂ ಮಹಿಳಾ ವಿಭಾಗದಲ್ಲಿ ಅಸ್ಸಾಂನ ಸ್ನೇಹಾ ಪರೀಕ್ ಮೊದಲ ಸ್ಥಾನ ಪಡೆದಿದ್ದಾರೆ. ಈ ಬಾರಿ ಕನ್ನಡವೂ ಸೇರಿದಂತೆ 13 ವಿವಿಧ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್ jeemain.nta.nic.in ಅಥವಾ nta.ac.inನಲ್ಲಿ ಫಲಿತಾಂಶ ಪರೀಕ್ಷಿಸಿಕೊಳ್ಳಬಹುದಾಗಿದೆ.

ಜೆಇಇ ಅಡ್ವಾನ್ಸ್: ಬಾಂಬೆ ಐಐಟಿ ನೇತೃತ್ವದಲ್ಲಿ ಜೆಇಇ ಅಡ್ವಾನ್ಸ್ 2022ರ ಪರೀಕ್ಷೆಯು ಆ.28ರಂದು ನಡೆಯಲಿದ್ದು, ಆಗಸ್ಟ್ 7 ರಿಂದ 11ರ ವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಜೆಇಇ ಮೇನ್ಸ್​ನಲ್ಲಿನ ಟಾಪ್ 2.5 ಲಕ್ಷ ಅಭ್ಯರ್ಥಿಗಳು ಮಾತ್ರ ಜೆಇಇ ಅಡ್ವಾನ್ಸ್ ಪರೀಕ್ಷೆ ಎದುರಿಸಬಹುದಾಗಿದೆ.

ಫಲಿತಾಂಶ ನನಗೆ ಅಚ್ಚರಿ ತಂದಿದೆ. ಅಂಕಗಳನ್ನು ಮತ್ತಷ್ಟು ಹೆಚ್ಚಿಗೆ ಮಾಡಿಕೊಳ್ಳುವ ಸಲುವಾಗಿ 2 ನೇ ಹಂತದ ಪರೀಕ್ಷೆ ತೆಗೆದುಕೊಳ್ಳುತ್ತೇನೆ. ಬಾಂಬೆ ಐಐಟಿ ಸೇರಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮಾಡಬೇಕು ಎಂಬುದು ನನ್ನ ಗುರಿಯಾಗಿದೆ. | ಬೋಯಾ ಹರೆನ್ ಸಾತ್ವಿಕ್ ಜೆಇಇ ರಾಜ್ಯದ ಟಾಪರ್
ಕರ್ನಾಟಕದ ಸಾಧಕರು: ಟಾಪ್ 14 ರ್ಯಾಂಕ್​ನಲ್ಲಿ ಕರ್ನಾಟಕದ ಬೋಯಾ ಹರೆನ್ ಸಾತ್ವಿಕ್ 100 ಅಂಕ ಪಡೆಯುವ ಮೂಲಕ ಸ್ಥಾನ ಪಡೆಯುವುದರ ಜತೆಗೆ ಇತರ ಹಿಂದುಳಿದ ವರ್ಗದ ವಿಭಾಗ ಹಾಗೂ ಪುರುಷರ ವಿಭಾಗದಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಎಸ್​ಟಿ ಕೆಟಗರಿಯಲ್ಲಿ ತನ್ಮಯ್ ಗಜಪತಿ 99.94 ಅಂಕ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ಮುಖ್ಯ ಪರೀಕ್ಷೆ: ಜೆಇಇ ಮೇನ್ಸ್ ಸೆಷನ್ಸ್ 2ರ ಪರೀಕ್ಷೆಯು ಜು.21ರ ನಂತರ ನಡೆಯಲಿದ್ದು, ಅರ್ಜಿ ಸಲ್ಲಿಕೆಗೆ ಇಂದು (ಜು.12) ಕೊನೇ ದಿನವಾಗಿದೆ. ಸೆಷನ್ 2ರ ಪರೀಕ್ಷೆ ನಂತರ ಅಂತಿಮ ಫಲಿತಾಂಶ ಹಾಗೂ ಅಖಿಲ ಭಾರತ ರ್ಯಾಂಕ್ ಅನ್ನು ಎನ್​ಟಿಎ ಪ್ರಕಟಿಸಲಿದೆ.