ನ್ಯೂಸ್

Jawaan Movie Review: ಮಾಸ್ ಮನರಂಜನೆ ಜತೆಗೊಂದು ಸಂದೇಶ

ಚಿತ್ರ: ಜವಾನ್
ನಿರ್ದೇಶನ: ಅಟ್ಲೀ
ನಿರ್ಮಾಣ: ಗೌರಿ ಖಾನ್
ತಾರಾಗಣ: ಶಾರುಖ್ ಖಾನ್, ನಯನತಾರ, ವಿಜಯ್ ಸೇತುಪತಿ, ಪ್ರಿಯಾಮಣಿ,
ಸ್ಟಾರ್: 3

ತಮಿಳು ನಿರ್ದೇಶಕ ಅಟ್ಲೀ ತಮ್ಮೆಲ್ಲ ಸಿನಿಮಾಗಳಲ್ಲಿ ಒಂದು ಪ್ಯಾಟರ್ನ್ ಅನುಸರಿಸುವಂತೆ ಕಾಣುತ್ತದೆ. ‘ಮರ್ಸೆಲ್’, ‘ಬಿಗಿಲ್’ ಸಿನಿಮಾಗಳನ್ನು ನೋಡಿದ್ದರೆ ಅದೇನೆಂದು ತಿಳಿದುಬಿಡುತ್ತದೆ. ಒಂದು ಪಾತ್ರದ ಹಿಂದೆ ಹಲವು ಕಥೆಗಳನ್ನು ಜೋಡಿಸಲಾಗಿರುತ್ತದೆ. ಅದೇ ರೀತಿಯ ಪ್ರಯತ್ನ ‘ಜವಾನ್’ ಸಿನಿಮಾದಲ್ಲೂ ಮುಂದುವರಿದಿರುವುದು ಕಾಣುತ್ತದೆ. ಹಾಗಿದ್ದರೆ, ಇದು ಕೂಡ ಅವೆಲ್ಲದರಂತೆ ಇದೆಯೇ? ಹೌದು, ಯಾಕೆ ಎಂದರೆ, ಇದರಲ್ಲೂ ಅಟ್ಲೀ ಸಿಗ್ನೇಚರ್ ಅಥವಾ ಆ ಛಾಯೆ ಇದೆ. ಮೊದಲರ್ಧದ ಚಿತ್ರದಲ್ಲಿ ಏನಾಗುತ್ತಿದೆ ಎಂಬ ಸಣ್ಣ ಗೊಂದಲ ಉಂಟಾಗುತ್ತದೆ. ಇಂಟರ್‌ವಲ್‌ನ ಸನ್ನಿವೇಶದಲ್ಲಿ ಗೊಂದಲಗಳಿಗೆ ಉತ್ತರ ನೀಡುತ್ತಾರೆ. ಇದು ಅಟ್ಲೀ ಶೈಲಿಯ ಕಥಾನಕ.

ಇನ್ನು ಕಥೆಯ ಬಗ್ಗೆ ಹೇಳುವುದಾದರೆ, ಇದೊಂದು ಊಹಿಸಬಹುದಾದ ಕಥೆ. ವಿಶೇಷತೆ ಏನೂ ಕಾಣದಿರಬಹುದು. ಸಮಾಜ, ಸರ್ಕಾರದಲ್ಲಿರುವ ನ್ಯೂನತೆಗಳ ಕಡೆಗೆ ಬೆರಳು ಮಾಡಿ ತೋರಿಸುವ ವ್ಯಕ್ತಿ. ಸರ್ಕಾರ ಅಥವಾ ಉದ್ಯಮಿಗಳಿಂದ ಕಷ್ಟಕ್ಕೆ ಒಳಗಾಗಿ ಶಿಕ್ಷೆ ಅನುಭವಿಸುವ ಹೆಣ್ಣು ಮಕ್ಕಳು ಅವನ ತಂಡದವರು. ಅವರೆಲ್ಲರೂ ಸಮಾಜ ಸುಧಾರಣೆಗೆಂದು ಆಯ್ಕೆ ಮಾಡಿಕೊಳ್ಳುವ ದಾರಿ ಹಿಂಸಾತ್ಮಕವಾಗಿದ್ದು. ಆದರೆ, ಅವರ ಹೋರಾಟ ಏನಿದ್ದರೂ ಕೆಟ್ಟವರ ವಿರುದ್ಧವೇ ಆಗಿರುತ್ತದೆ. ಇದರ ಜತೆಗೆ ಸರ್ಕಾರವನ್ನು ಆಯ್ಕೆ ಮಾಡುವ ವಿಷಯದಲ್ಲಿ ಸಮಾಜ ಹೇಗಿರಬೇಕು ಎನ್ನುವುದರ ಬಗ್ಗೆ ಸಂದೇಶ ನೀಡುತ್ತಾರೆ. ಸರಳವಾದ ಕಥೆಯಲ್ಲಿ ಚಿತ್ರ ಗೆಲ್ಲುವುದು ಎಲ್ಲಿ ಅಂದರೆ ಅದು ಮೇಕಿಂಗ್ ಮತ್ತು ಅಭಿನಯ.

ಚಿತ್ರದ ಅದ್ದೂರಿ ಮೇಕಿಂಗ್, ಆ್ಯಕ್ಷನ್ ಸನ್ನಿವೇಶಗಳು ಹಾಗೂ ಚಿತ್ರಕಥೆ ಸಿನಿಮಾವನ್ನು ನೋಡಿಸಿಕೊಂಡು ಸಾಗುತ್ತವೆ. ಟ್ರೇಲರ್‌ನಲ್ಲಿ ಕಂಡಂತೆ ಶಾರುಖ್ ಖಾನ್ ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಮಾಸ್ ಸ್ಟೈಲ್ ಹಾಗೂ ಧ್ವನಿಯಲ್ಲಿ ಈ ಹಿಂದೆ ಕಾಣದ ಬದಲಾವಣೆ ಆಗಿರುವುದನ್ನು ಕಾಣಬಹುದು. ಇನ್ನು ನಯನತಾರ ಮೊದಲ ಬಾಲಿವುಡ್ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ವಿಜಯ್ ಸೇತುಪತಿ ಪ್ರತಿ ಸಿನಿಮಾಗಳಲ್ಲಿ ಮಿಂಚುವಂತೆ ಇದರಲ್ಲೂ ಇಷ್ಟ ಆಗುತ್ತಾರೆ. ಉಳಿದಂತೆ ಸಾನ್ಯಾ, ಪ್ರಿಯಾಮಣಿ, ಸುನಿಲ್ ಗ್ರೋವರ್, ವಿಶೇಷ ಪಾತ್ರದಲ್ಲಿ ದೀಪಿಕಾ ಹಾಗೂ ಸಂಜಯ್ ದತ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅಲ್ಲಲ್ಲಿ ನಮ್ಮೊಳಗಿನ ಭಾವನೆಗಳನ್ನು ಜಾಗೃತಗೊಳಿಸುವಲ್ಲಿ ಚಿತ್ರ ಗೆಲ್ಲುತ್ತದೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕೆ ಪೂರಕ. ಹಾಡುಗಳ ಸನ್ನಿವೇಶ ಹೈವೇಯಲ್ಲಿ ಸಿಗುವ ಹಂಪ್‌ಗಳಂತೆ ಅನಿಸುತ್ತವೆ. ತಮಿಳಿನ ಮಾಸ್ ಹಾಗೂ ಬಾಲಿವುಡ್‌ನ ಕ್ಲಾಸ್ ಬೆಸೆದಿರುವ ಸಿನಿಮಾ ಎನ್ನಬಹುದು. ಮಾಸ್ ಮನರಂಜನೆ ಇಷ್ಟಪಡುವವರಿಗೆ ‘ಜವಾನ್’ ಒಳ್ಳೆಯ ಆಯ್ಕೆ.