ನ್ಯೂಸ್

ಅಪ್ರತಿಮ ಸಾಹಸ ಮೆರೆದ ರೈಲ್ವೆ ಪಾಯಿಂಟ್​​ಮನ್ ಮಯೂರ್ ಶೆಳಕೆಗೆ ಜಾವಾ ಬೈಕ್ ಉಡುಗೊರೆ!

ಮುಂಬೈ: ವೇಗವಾಗಿ ರೈಲು ಬರುತ್ತಿದ್ದರೂ ಲೆಕ್ಕಿಸದೇ ಹಳಿ ಮೇಲೆ ಸಿಲುಕಿದ್ದ ಮಗುವನ್ನು ತನ್ನ ಅಪ್ರತಿಮ ಸಾಹಸದಿಂದ ಬದುಕಿಸಿದ್ದ ಮುಂಬೈ ರೈಲ್ವೆ ವಲಯದ ಪಾಯಿಂಟ್​ಮನ್ ಮಯೂರ್ ಶೆಳಕೆ ಬಗ್ಗೆ ಇದೀಗ ಎಲ್ಲೆಡೆ ಪ್ರಶಂಸೆಯ ಮಹಾಪೂರ ಹರಿದು ಬರುತ್ತಿದೆ. ಅದರಲ್ಲೂ ಮಯೂರ್ ಶೆಳಕೆ ಮಗುವನ್ನು ಬದುಕಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಈ ರೀತಿ ನಿಜವಾದ ಹೀರೋ ಆಗಿರುವ ಮಯೂರ್ ಶೆಳಕೆ ಮಾನವೀಯತೆಗೆ ಹಾಗೂ ದೈರ್ಯ ಸಾಹಸಕ್ಕೆ ಜಾವಾ ಕ್ಲಾಸಿಕ್ ಬೈಕ್ ಉಡುಗೊರೆಯಾಗಿ ದೊರೆತಿದೆ. ಮಹಿಂದ್ರಾ ಕಂಪನಿ ಒಡೆತನದ ಜಾವಾ ಬೈಕ್ಸ್​ ಸಿಇಓ ಅನುಪಮ್ ಥರೇಜಾ ಅವರು ಮಯೂರ್ ಶೆಳಕೆ ಸಾಹಸಕ್ಕೆ ತಲೆಬಾಗಿದ್ದಲ್ಲದೇ, ಅವರ ಕೆಲಸವನ್ನು ಮನಸಾರೆ ಹೊಗಳಿ ಅವರಿಗೆ ಸಂಸ್ಥೆ ವತಿಯಿಂದ ಜಾವಾ ಕ್ಲಾಸಿಕ್ ಬೈಕ್ ಉಡುಗೊರೆ ನೀಡುವುದಾಗಿ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.

ರೈಲ್ವೆ ಪಾಯಿಂಟ್​ಮನ್ ಮಯೂರ್ ಶೆಳಕೆ ಸಾಹಸ ನಮ್ಮೆಲ್ಲರನ್ನೂ ವಿಷ್ಮಯಗೊಳಿಸಿದೆ. ಅವರ ಸಾಹಸಕ್ಕೆ ನಾವು ವಿನಮ್ರವಾಗಿ ತಲೆ ಬಾಗುತ್ತವೆ. ಮಯೂರ್ ಶೆಳಕೆಯನ್ನು ನಾವು ಜಾವಾ ಕ್ಲಾಸಿಕ್ ಬೈಕ್ ಉಡುಗೊರೆ ನೀಡುವ ಮೂಲಕ ಸನ್ಮಾನಿಸುತ್ತೇವೆ ಎಂದು ಅನುಪಮ್ ತರೇಜಾ ಅವರು ಟ್ವಿಟ್​ನಲ್ಲಿ ತಿಳಿಸಿದ್ದಾರೆ. ಅಲ್ಲದೇ ಮಹಿಂದ್ರಾ ಸಂಸ್ಥೆ ಎಂಡಿ ಆನಂದ ಮಹಿಂದ್ರಾ ಕೂಡ ಶಳಕೆ ಸಾಹಸ ಕೊಂಡಾಡಿದ್ದಾರೆ.

ಏಪ್ರಿಲ್ 17 ರಂದು ಮಧ್ಯಾಹ್ನ ಮುಂಬೈ ಬಳಿಯ ವಾಂಗನಿ ರೈಲ್ವೆ ನಿಲ್ದಾಣದಲ್ಲಿ ಎರಡು ಮಕ್ಕಳು ರೈಲು ಹಳಿ ದಾಟುತ್ತಿದ್ದವು. ಅದರಲ್ಲಿ ಒಂದು ಸಣ್ಣ ಮಗು ಪ್ಲಾಟ್​ಪಾರ್ಮ್​ ಹತ್ತಲಾಗದೇ ಪರಿತಪಿಸುತ್ತಿತ್ತು. ಇದೇ ವೇಳೆ ರೈಲು ವೇಗವಾಗಿ ಬರುತ್ತಿದ್ದನ್ನು ಗಮನಿಸಿದ ಪಾಯಿಂಟ್​ಮನ್ ಶೆಳಕೆ ಅವರು, ಮಿಂಚಿನಂತೆ ಹೋಗಿ ಮಗುವನ್ನು ಕಾಪಾಡಿದ್ದಲ್ಲದೇ ತಾವು ಸಾವಿನ ದವಡೆಯಿಂದ ಕ್ಷಣಾರ್ಧದಲ್ಲೇ ಪಾರಾಗಿದ್ದರು. ಈ ಕುರಿತು ಶೆಳಕೆ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶೆಳಕೆ ಅವರು, ಮಗುವನ್ನು ಕಾಪಾಡಿದ ನಂತರ ನಾನು ಸುಮಾರು 20 ನಿಮಿಷ ಸ್ತಬ್ದನಾಗಿ ನಿಂತಿದ್ದೇ ಎಂದು ಹೇಳಿದ್ದಾರೆ. ಅವರ ಸಾಹಸ ಹಾಗೂ ಮಾನವೀಯ ಗುಣ ಬೆರಗು ಮೂಡಿಸಿದೆ.