ನ್ಯೂಸ್

ಭಾರತಕ್ಕೆ ಬೇಕಾಗಿದ್ದ ಮೋಸ್ಟ್​ ವಾಂಟೆಡ್ ಹಿಜ್ಬುಲ್ ಮುಜಾಹಿದ್ದೀನ್​ ಉಗ್ರ ಅರೆಸ್ಟ್​

ನವದೆಹಲಿ: ಭಾರತ ಸರ್ಕಾರಕ್ಕೆ ಬೇಕಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮೋಸ್ಟ್​ ವಾಂಟೆಡ್​ ಉಗ್ರ ಜಾವೇದ್ ಅಹ್ಮದ್ ಮಟ್ಟೂನನ್ನು ದೆಹಲಿ ಪೊಲೀಸ್ ವಿಶೇಷ ದಳ ಗುರುವಾರ ಬಂಧಿಸಿದೆ. ಬಂಧಿತನಿಂದ ಪಿಸ್ತೂಲ್, ಆರು ಲೈವ್ ಕಾಟ್​ರಿಡ್ಜ್​ ಮತ್ತು ಕದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 11 ಭಯೋತ್ಪಾದಕ ದಾಳಿಗಳಲ್ಲಿ ಮಟ್ಟೂ ಭಾರತ ಸರ್ಕಾರಕ್ಕೆ ಬೇಕಾಗಿದ್ದನು. ಭದ್ರತಾ ಏಜೆನ್ಸಿಗಳಿಗೆ ಬೇಕಾಗಿರುವ ಟಾಪ್​ 10 ಉಗ್ರರಲ್ಲಿ ಒಬ್ಬನಾಗಿರುವ ಈತನನ್ನು ಹುಡುಕಿ ಕೊಟ್ಟವರಿಗೆ 10 ಲಕ್ಷ ರೂಪಾಯಿ ಇನಾಮು ನೀಡಲಾಗುವುದು ಎಂದು ತನಿಖಾ ಸಂಸ್ಥೆಗಳು ಘೋಷಿಸಿದ್ದವು.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಮಟ್ಟೂ ಭೂಗತನಾಗಿದ್ದ. ಬಳಿಕ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಸೂಚನೆ ಮೇರೆಗೆ ನೇಪಾಳಕ್ಕೆ ಪರಾರಿಯಾಗಿದ್ದ.

ಕೆಲವು ದಿನಗಳ ಹಿಂದೆ, ಮಟ್ಟೂ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ದೆಹಲಿ-ಎನ್‌ಸಿಆರ್‌ಗೆ ಬರಲಿದ್ದಾನೆ ಎಂಬ ಮಾಹಿತಿ ಲಭಿಸಿತ್ತು. ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮಟ್ಟೂನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.