ನ್ಯೂಸ್

ಜಾರ್ಖಂಡ್​ನಲ್ಲೂ ಕೈಕಂಪನ: ಕಾಂಗ್ರೆಸ್ ಬೆಂಬಲಿತ ಜೆಎಂಎಂ ಸರ್ಕಾರ ತಲ್ಲಣ

ನವದೆಹಲಿ/ರಾಂಚಿ: ರಾಜಸ್ಥಾನದ ಆಡಳಿತಾರೂಢ ಕಾಂಗ್ರೆಸ್​ನ ಭಿನ್ನಮತ ಸರ್ಕಾರವನ್ನು ಪತನದಂಚಿಗೆ ದೂಡಿರುವ ಬೆನ್ನಲ್ಲೇ ಕಾಂಗ್ರೆಸ್ ಬೆಂಬಲಿತ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ)ಸರ್ಕಾರ ಅಸ್ತಿತ್ವದಲ್ಲಿರುವ ಜಾರ್ಖಂಡ್​ನಲ್ಲೂ ಭಿನ್ನಮತದ ಬಿರುಗಾಳಿ ಎದ್ದಿದೆ.

ಮುಖ್ಯಮಂತ್ರಿ ಹೇಮಂತ್ ಸೊರೇನ್ ಕಾರ್ಯವೈಖರಿ ವಿರುದ್ಧ ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿರುವುದು ಹೊಸ ಬೆಳವಣಿಗೆಯಾಗಿದೆ. ಕಾಂಗ್ರೆಸ್​ನ 15 ಶಾಸಕರ ಬೆಂಬಲದೊಂದಿಗೆ ಸೊರೇನ್ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಕಾಂಗ್ರೆಸ್​ನ ಕೆಲ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ತಮ್ಮನ್ನು ಕಡೆಗಣಿಸುತ್ತಿದ್ದಾರೆಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸಿಎಂ ಹಾಗೂ ಅವರ ಪಕ್ಷದ ಸಚಿವರು ಜನರ ಸಮಸ್ಯೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದಂತೆ ಕಾಣುತ್ತಿದೆ. ಈ ಹಿಂದೆ ಇದ್ದ ರಘುಬರ್ ದಾಸ್ ನೇತೃತ್ವದ ಬಿಜೆಪಿ ಸರ್ಕಾರದ ಪ್ರತಿಬಿಂಬಂತೆ ಕಾಣುತ್ತಿರುವುದಾಗಿ ಕಾಂಗ್ರೆಸ್​ನ ಹಿರಿಯ ಶಾಸಕರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

ರಾಜಸ್ಥಾನದಲ್ಲಿ ಶಾಸಕರ ಖರೀದಿಯ ಪ್ರಹಸನವನ್ನು ಪ್ರಧಾನಿ ನರೇಂದ್ರ ಮೋದಿ ಮೊದಲು ನಿಲ್ಲಿಸಬೇಕು. 19 ಬಂಡಾಯ ಶಾಸಕರನ್ನು ಹೈಕಮಾಂಡ್ ಕ್ಷಮಿಸಿದರೆ ಅದೇ ಹಾದಿಯನ್ನು ಅನುಸರಿಸುವೆ. | ಅಶೋಕ್ ಗೆಹ್ಲೋಟ್, ರಾಜಸ್ಥಾನ ಸಿಎಂ

ದೆಹಲಿಗೆ ದೂರು: ಸರ್ಕಾರದ ವಿರುದ್ಧದ ಅಸಮಾಧಾನದ ಧ್ವನಿ ರಾಜಧಾನಿ ದೆಹಲಿಗೂ ಮುಟ್ಟಿದೆ. ಕಾಂಗ್ರೆಸ್​ನ ಹಿರಿಯ ಶಾಸಕರಾದ ಇರ್ಫಾನ್ ಅನ್ಸಾರಿ, ಉಮಾಶಂಕರ್ ಅಕೇಕ, ರಾಜೇಶ್ ಕಶ್ಯಪ್ ಇತ್ತೀಚೆಗಷ್ಟೇ ದೆಹಲಿಗೆ ತೆರಳಿ ಪಕ್ಷದ ಹಿರಿಯ ನಾಯಕ ಹಾಗೂ ಕಾಂಗ್ರೆಸ್​ನ ಟ್ರಬಲ್ ಶೂಟರ್ ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿ ದೂರು ನೀಡಿ ಬಂದಿದ್ದಾರೆಂದು ತಿಳಿದು ಬಂದಿದೆ.

1 ಸ್ಥಾನಕ್ಕಾಗಿ ಕಿತ್ತಾಟ: ಮೈತ್ರಿ ಪಕ್ಷಗಳ ಭಿನ್ನಮತದ ಮೂಲ ಒಂದು ಸಚಿವ ಸ್ಥಾನ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ನಾಯಕರು ಸಿಎಂ ಕೈಯಲ್ಲಿರುವ ಒಂದು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಆ ಸ್ಥಾನ ಬಿಟ್ಟುಕೊಡಲು ಸಿಎಂ ಹೇಮಂತ್ ಸೊರೇನ್ ಸಿದ್ಧರಿಲ್ಲ. ಹೀಗಾಗಿಯೇ ಕಾಂಗ್ರೆಸ್ಸಿಗರ ದೂರು ದೆಹಲಿ ಮುಟ್ಟಿದೆ. ಮತ್ತೊಂದೆಡೆ ಅತೃಪ್ತರನ್ನು ಸೆಳೆದು ಸರ್ಕಾರ ಬೀಳಿಸಲು ಬಿಜೆಪಿ ಯತ್ನಿಸುತ್ತಿರುವುದಾಗಿ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಸಿಎಂ ಸೇರಿ ಜಾರ್ಖಂಡ್ ಸರ್ಕಾರದ ಸಚಿವ ಸ್ಥಾನ 12. ಒಂದು ಸ್ಥಾನ ಖಾಲಿ ಉಳಿದಿದ್ದು, ಅದಕ್ಕಾಗಿ ಪೈಪೋಟಿ ನಡೆದಿದೆ.

ಬಿಜೆಪಿ ಸರ್ಕಾರ ಸಾಧ್ಯವೇ?

81 ಶಾಸಕ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂನ 29 ಸದಸ್ಯರಿದ್ದಾರೆ. ಕಾಂಗ್ರೆಸ್ 15, ಆರ್​ಜೆಡಿ, ಎನ್​ಸಿಪಿ ಹಾಗೂ ಸಿಪಿಐ(ಎಂಎಲ್)ನ ತಲಾ ಓರ್ವ ಸದಸ್ಯರಿದ್ದಾರೆ. ಜೆವಿಎಂನ ಪ್ರದೀಪ್ ಯಾದವ್ ಸಹಿತ ಹೇಮಂತ್ ಸೊರೆನ್ ಸರ್ಕಾರಕ್ಕೆ 47 ಶಾಸಕರ ಬಲ ಇದೆ. ಮತ್ತೊಂದೆಡೆ ಮಾಜಿ ಸಿಎಂ ಬಾಬುಲಾಲ್ ಮರಾಂಡಿ ಅವರ ಜಾರ್ಖಂಡ್ ವಿಕಾಸ್ ಮೋರ್ಚಾ ಬಿಜೆಪಿಯಲ್ಲಿ ವಿಲೀನವಾದ ಬಳಿಕವೂ ಬಿಜೆಪಿಯ ಒಟ್ಟಾರೆ ಸದಸ್ಯ ಬಲ 26 ಮಾತ್ರ ಆಗಿದೆ. ಬಹುಮತಕ್ಕೆ 41 ಸದಸ್ಯರ ಬೆಂಬಲ ಬೇಕಿರುವುದರಿಂದ ಬಿಜೆಪಿ ಸರ್ಕಾರ ರಚನೆ ಹಾದಿ ಕಷ್ಟವಾಗಿದೆ. ಆದರೆ ರಾಜಕೀಯದಲ್ಲಿ ಯಾವಾಗ ಏನಾದರೂ ಆಗಬಹುದೆಂಬ ಮಾತು ಸಾಧ್ಯಾಸಾಧ್ಯತೆಗಳ ಕುತೂಹಲ ಹೆಚ್ಚಿಸಿದೆ.