ನ್ಯೂಸ್

ಒಂದೇ ಒಂದು ದ್ರಾಕ್ಷಿಗೆ 35 ಸಾವಿರ ರೂಪಾಯಿ! ಜಗತ್ತಿನ ಅತ್ಯಂತ ದುಬಾರಿ ಹಣ್ಣಿದು

ಟೋಕಿಯೋ: ದ್ರಾಕ್ಷಿ ಹಣ್ಣಿನ ಬೆಲೆ ಎಷ್ಟಿರುತ್ತದೆ? ಅಂದಾಜು ಕೆಜಿಗೆ 100 ರೂಪಾಯಿ ಎಂದುಕೊಳ್ಳಬಹುದು. ಅದರಲ್ಲೂ ಸೀಸನ್​ನಲ್ಲಿ ಬೆಲೆ ಸಾಕಷ್ಟು ಇಳಿಕೆಯಾಗುವುದೂ ಉಂಟು. ಆದರೆ ನಾವು ಈಗ ಹೇಳಲು ಹೊರಟಿರುವ ದ್ರಾಕ್ಷಿ ಅಷ್ಟು ಸುಲಭವಾಗಿ ಎಲ್ಲರಿಗೂ ಸಿಕ್ಕುವುದಲ್ಲ. ಅಂದ ಹಾಗೆ ಅದರ ಬೆಲೆಯೂ ಸಾಮಾನ್ಯರಿಗೆ ತೆರುವಂತದ್ದಲ್ಲ.

ಜಪಾನ್​ನಲ್ಲಿ ಬೆಳೆಯಲಾಗುವ ರೂಬಿ ರೋಮನ್ ಗ್ರೇಪ್ ಅತ್ಯಂತ ಪ್ರಸಿದ್ಧ ದ್ರಾಕ್ಷಿ ತಳಿಯಲ್ಲಿ ಒಂದು. ಕೆಲ ವಿಶೇಷ ಕ್ರಮಗಳನ್ನು ಬೆಳೆಸಿಕೊಂಡು ಆ ದ್ರಾಕ್ಷಿಯನ್ನು ಬೆಳೆಸಲಾಗುತ್ತದೆಯಂತೆ. ಅಂದ ಹಾಗೆ ರೂಬಿ ರೋಮನ್ ದ್ರಾಕ್ಷಿಯ ಒಂದು ಹಣ್ಣಿಗೆ ಬರೋಬ್ಬರಿ 35 ಸಾವಿರ ರೂಪಾಯಿಯಂತೆ. ಇನ್ನು ಒಂದು ಗೊಂಚಲು ದ್ರಾಕ್ಷಿ ತೆಗೆದುಕೊಂಡು ತಿನ್ನುತ್ತೇವೆ ಎಂದರೆ ನೀವು ಲಕ್ಷಾಧೀಶ್ವರರೇ ಆಗಿರಬೇಕು.

ಈ ರೂಬಿ ರೋಮನ್ ದ್ರಾಕ್ಷಿ ಸಾಮಾನ್ಯ ದ್ರಾಕ್ಷಿ ಗಾತ್ರದಲ್ಲಿ ಬೆಳೆಯುವುದಿಲ್ಲ. ನೋಡುವುದಕ್ಕೆ ಒಂದು ಸಣ್ಣ ಟೆನಿಸ್ ಬಾಲ್​ನಷ್ಟೇ ದೊಡ್ಡದಾಗಿ ಹಣ್ಣು ಬೆಳೆಯುತ್ತದೆಯಂತೆ. ಎಲ್ಲ ಹಣ್ಣುಗಳು ಒಂದೇ ಗಾತ್ರದಲ್ಲಿದ್ದು, ಅಚ್ಚ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಇತ್ತೀಚೆಗೆ ಭಾರತದ ಮಾವಿನ ಹಣ್ಣಿನ ತಳಿಯೊಂದರ ರೇಟ್ ಕೇಳಿ ತಲೆ ತಿರುಗಿದ್ದ ಜನರು ಇದೀಗ ಜಪಾನ್​ನ ಈ ದ್ರಾಕ್ಷಿ ಬಗ್ಗೆ ಕೇಳಿ ಮತ್ತೊಮ್ಮೆ ಬಾಯಿ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದಾರೆ. ಇದೇ ರೀತಿ ಬೇರೆ ಬೇರೆ ಸ್ಥಳಗಳಲ್ಲಿ ಕೆಲವು ವಿಶೇಷ ಹಣ್ಣುಗಳು ದುಬಾರಿ ಬೆಲೆಗೆ ಮಾರಾಟ ಆಗುತ್ತಿರುವುದು ಉಂಟು. (ಏಜೆನ್ಸೀಸ್)