Japan Cricket: ಸಾನೊ ಮೈದಾನದಲ್ಲಿ ನಡೆದ ಇಂಡಿಯಾ ಮತ್ತು ಜಪಾನ್ ನಡುವಿನ ಏಕೈಕ ಟಿ20 ಪಂದ್ಯವು ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಅದ್ಭುತ ಹಾಗೂ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ನಿರಂತರವಾಗಿ ಸುರಿದ ಮಳೆಯ ಕಾರಣದಿಂದಾಗಿ ಈ ಪಂದ್ಯವನ್ನು ತಲಾ 5 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಕಡಿಮೆ ಓವರ್‌ಗಳ ಪಂದ್ಯವಾಗಿದ್ದರಿಂದ ಆತಿಥೇಯ ಜಪಾನ್ ತಂಡಕ್ಕೆ ಬಲಿಷ್ಠ ಭಾರತದ ವಿರುದ್ಧ ಅಚ್ಚರಿಯ ಗೆಲುವು ಸಾಧಿಸುವ ನೈಜ ಅವಕಾಶ ಸಿಕ್ಕಂತಾಗಿತ್ತು. ಜಪಾನ್ ಆ ಅವಕಾಶವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕೊನೆಯ ಕ್ಷಣದವರೆಗೂ ಪೈಪೋಟಿ ನೀಡಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಜಪಾನ್‌ನ ಸ್ಪಿನ್ನರ್‌ಗಳು ಆರಂಭಿಕ ಆಘಾತ ನೀಡಿದರು. ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಜಪಾನ್ ಸ್ಪಿನ್ನರ್‌ಗಳು, ಭಾರತದ ಪ್ರಮುಖ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಪರಿಣಾಮವಾಗಿ ಭಾರತ ತಂಡ 5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಕೇವಲ 32 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ:ಸೋಶಿಯಲ್ ಮೀಡಿಯಾ ಮಾತು ಕೇಳಿ....ಪ್ಲೇಯಿಂಗ್ 11 ಅಂತಿಮ ನಿರ್ಧಾರ ಅವರಿಬ್ಬರದ್ದೇ ಎಂದ ಗೌತಿ! | Gautam Gambhir
ಬಳಿಕ 33 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಜಪಾನ್ ತಂಡದ ಆಟಗಾರರು, ಹಾಲಿ ವಿಶ್ವ ಚಾಂಪಿಯನ್ ಭಾರತದ ವಿರುದ್ಧ ಯಾವುದೇ ಭಯವಿಲ್ಲದೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪಂದ್ಯವನ್ನು ಕೊನೆಯ ಎಸೆತದವರೆಗೂ ಕೊಂಡೊಯ್ದ ಜಪಾನ್, ಅಂತಿಮವಾಗಿ ಕೇವಲ 2 ರನ್‌ಗಳ ಸಣ್ಣ ಅಂತರದಿಂದ ಸೋಲೊಪ್ಪಿಕೊಂಡಿತು. ಪಂದ್ಯದಲ್ಲಿ ಸೋತರೂ ಸಹ, ವಿಶ್ವದ ಅಗ್ರಮಾನ್ಯ ತಂಡಕ್ಕೆ ಕೊನೆಯವರೆಗೂ ಆತಂಕ ಹೆಚ್ಚಿಸಿದ ಜಪಾನ್ ತಂಡದ ಈ ಪ್ರದರ್ಶನ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಶಂಸೆಗೆ ಪಾತ್ರವಾಯಿತು.
ಪಂದ್ಯ ಆರಂಭವಾಗುವುದಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಜಪಾನ್ ತಂಡವನ್ನು ಹಗುರವಾಗಿ ಪರಿಗಣಿಸಿದ್ದರು. ಟೀಮ್ ಇಂಡಿಯಾ ಸುಲಭವಾಗಿ 400 ರನ್ ಗಳಿಸಿ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಳ್ಳುತ್ತದೆ ಎಂದು ಲೇವಡಿ ಮಾಡಿದ್ದರು. ಆದರೆ ಮೈದಾನದಲ್ಲಿ ಜಪಾನ್ ನೀಡಿದ ಕಠಿಣ ಸವಾಲು ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು. ಜಪಾನ್ ಕ್ರಿಕೆಟ್ ಅಸೋಸಿಯೇಷನ್ಗೆ ಈ ಸಣ್ಣ ಸೋಲು ದೊಡ್ಡ ವಿಜಯದಂತೆ ಕಂಡರೂ ಅದರಲ್ಲಿ ಅತಿಶಯೋಕ್ತಿ ಇಲ್ಲ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಜಪಾನ್ ಕ್ರಿಕೆಟ್ ಅಸೋಸಿಯೇಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲಾನ್ ಕರ್, ಈ ಪ್ರದರ್ಶನವು ಜಪಾನ್ ಕ್ರಿಕೆಟ್‌ಗೆ ಸಿಗಬೇಕಾದ ನೈಜ ವಿಶ್ವಾಸಾರ್ಹತೆ ಹಾಗೂ ಗೌರವವನ್ನು ತಂದುಕೊಟ್ಟಿದೆ ಎಂದು ಹೇಳಿದ್ದಾರೆ. ಸಣ್ಣ ಮತ್ತು ಬೆಳವಣಿಗೆಯ ಹಂತದಲ್ಲಿರುವ ಕ್ರಿಕೆಟ್ ರಾಷ್ಟ್ರಗಳಲ್ಲೂ ಅದ್ಭುತ ಪ್ರತಿಭೆಗಳಿವೆ ಎಂಬುದನ್ನು ಈ ಪಂದ್ಯ ಸಾಬೀತುಪಡಿಸಿದೆ. ಸಾಂಪ್ರದಾಯಿಕ ಕ್ರಿಕೆಟ್ ರಾಷ್ಟ್ರಗಳ ಹೊರತಾಗಿಯೂ ಕ್ರಿಕೆಟ್ ಜಗತ್ತು ವಿಸ್ತರಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.
ಈ ಐತಿಹಾಸಿಕ ಪಂದ್ಯವು ಜಪಾನ್‌ನಲ್ಲಿ ಕ್ರಿಕೆಟ್ನ ಜನಪ್ರಿಯತೆಯನ್ನು ಹೆಚ್ಚಿಸಲಿದ್ದು, ಮುಂಬರುವ ಪೀಳಿಗೆಯ ಯುವಕರು ಬ್ಯಾಟ್ ಮತ್ತು ಬಾಲ್ ಹಿಡಿದು ಮೈದಾನಕ್ಕೆ ಇಳಿಯಲು ಪ್ರೇರಣೆಯಾಗಲಿದೆ. ಇದರ ಜೊತೆಗೆ, ಇತರ ಸಣ್ಣ ಕ್ರಿಕೆಟ್ ರಾಷ್ಟ್ರಗಳು ಸಹ ವಿಶ್ವದ ಬಲಿಷ್ಠ ತಂಡಗಳ ವಿರುದ್ಧ ಪಂದ್ಯಗಳನ್ನು ಆಡಲು ಧೈರ್ಯವಾಗಿ ಮುಂದೆ ಬರಲು ಈ ಪ್ರದರ್ಶನವು ಸ್ಫೂರ್ತಿ ನೀಡಲಿದೆ ಎಂದು ಅಲಾನ್ ಕರ್ ಹರ್ಷ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್).