ಚಿಕ್ಕಬಳ್ಳಾಪುರ: ಚುನಾವಣಾ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಅಭಿಯಾನ ಹಾಗೂ ಮಾಜಿ ಶಾಸಕ ದಿ. ಜಿ.ವಿ.ಶ್ರೀರಾಮರೆಡ್ಡಿ ಜೀವನಚರಿತ್ರೆಯ ಕಿರುಚಿತ್ರ ಪ್ರದರ್ಶನ ಮಾಡುತ್ತಿದ್ದ ಎಲ್ಇಡಿ ಸ್ಕ್ರೀನ್ ವಾಹನಕ್ಕೆ ಮೂರ್ನಾಲ್ಕು ಮಂದಿ ಕಲ್ಲು ತೂರಾಟ ನಡೆಸಿದ್ದು, ಲಕ್ಷಾಂತರ ರೂ. ಮೌಲ್ಯದ ಡಿಜಿಟಲ್ ಎಲ್ಇಡಿ ಸ್ಕ್ರೀನ್ ಪರದೆ ಹಾನಿಯಾಗಿದೆ.
ಇಂತಹ ಘಟನೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿಯ ರೇಚನಾಯಕನಹಳ್ಳಿಯಲ್ಲಿ ಗುರುವಾರ ನಡೆದಿದೆ. ಸ್ವಾಭಿಮಾನಿ ಜಿ.ವಿ.ಎಸ್. ಅಭಿಮಾನಿ ಬಳಗ ವತಿಯಿಂದ ರೇಚನಾಯಕನಹಳ್ಳಿ ಗ್ರಾಮದಲ್ಲಿ ಚುನಾವಣಾ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಅಭಿಯಾನ ಹಾಗೂ ಜಿ.ವಿ.ಶ್ರೀರಾಮರೆಡ್ಡಿ ಜೀವನ ಚರಿತ್ರೆಯ ಕಿರುಚಿತ್ರ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕಲ್ಲು ತೂರಿ ಪುಂಡಾಟ ಮೆರೆದಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಜಿವಿಎಸ್ ಅಭಿಮಾನಿ ಬಳಗದ ಕಾರ್ಯಕರ್ತರು ರೇಚನಾಯಕನಹಳ್ಳಿ ಗ್ರಾಮದ ಚೌಡರೆಡ್ಡಿ, ಆದಿನಾರಾಯಣಪ್ಪ ಮತ್ತು ಇತರರ ವಿರುದ್ಧ ದೂರು ನೀಡಿದ್ದಾರೆ. ಸಿಪಿಐ(ಎಂ) ಪಕ್ಷದ ಮುಖಂಡ ಡಾ.ಅನಿಲ್ ಕುಮಾರ್ ಬೆಂಬಲಿಗರಿಂದ ಕೃತ್ಯವೆಸಗಲಾಗಿದೆ ಎಂದು ಜಿವಿಎಸ್ ಅಭಿಮಾನಿ ಬಳಗದ ಸಂಚಾಲಕ ಡಾ.ಮಧುಸೀತಪ್ಪ ಆರೋಪಿಸಿದ್ದಾರೆ.