ನ್ಯೂಸ್

ಲಷ್ಕರ್-ಎ-ತೊಯ್ಬಾ ಬಾ ಜೊತೆ ಸಂಪರ್ಕ: ಜಮ್ಮುವಿನಲ್ಲಿ ಇಬ್ಬರು ಶಿಕ್ಷಕರನ್ನು ವಜಾಗೊಳಿಸಿದ ಗವರ್ನರ್ ಮನೋಜ್ ಸಿನ್ಹಾ | Manoj Sinha

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಮತ್ತು ಆಂತರಿಕ ವಿಚಾರಣೆಯಲ್ಲಿ ದೃಢವಾದ ಹಿನ್ನೆಲೆ ಜಮ್ಮು ವಿಭಾಗದ ರಿಯಾಸಿ ಮತ್ತು ರಾಜೌರಿ ಜಿಲ್ಲೆಗಳಲ್ಲಿ ಇಬ್ಬರು ಸರ್ಕಾರಿ ಶಿಕ್ಷಕರನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ(Manoj Sinha) ವಜಾಗೊಳಿಸಿದ್ದಾರೆ ಎಂದು ಶುಕ್ರವಾರ(ಅ. 31) ವರದಿಯಾಗಿದೆ.

2004ರಲ್ಲಿ ಜೆ & ಕೆ ಶಿಕ್ಷಣ ಇಲಾಖೆಗೆ ಸೇರಿದ ಗುಲಾಮ್ ಹುಸೇನ್ ಮತ್ತು 2009ರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಮಜೀದ್ ಇಕ್ಬಾಲ್ ದಾರ್ ಎಂಬ ಇಬ್ಬರು ಶಿಕ್ಷಕರನ್ನು ಭಯೋತ್ಪಾದಕರ ಜೊತೆಗಿನ ಸಂಪರ್ಕ ಹಿನ್ನೆಲೆ ಭಾರತದ ಸಂವಿಧಾನದ 311(2)(ಸಿ) ವಿಧಿಯನ್ನು ಅನ್ವಯಿಸಿ ವಜಾಗೊಳಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಪ್ರಸ್ತುತವಾಗಿ ಹುಸೇನ್ ಮತ್ತು ದಾರ್ ಇಬ್ಬರೂ ಪ್ರತ್ಯೇಕ ಭಯೋತ್ಪಾದನಾ ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾರೆ ಎನ್ನಲಾಗಿದೆ. ಗುಲಾಮ್ ಹುಸೇನ್ ಅವರನ್ನು ರಿಯಾಸಿಯ ಕಲ್ವಾ, ಮಹೋರ್​​ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷರಾಗಿದ್ದರು. ಈ ವೇಳೆ ರಹಸ್ಯವಾಗಿ ಎಲ್​ಇಟಿ ಬಲಪಡಿಸಲು ಕೆಲಸ ಮಾಡಿದ ಆರೋಪ ಅವರ ಮೇಲಿದೆ.

ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆ ಹುಸೇನ್ ಅವರನ್ನು ಟ್ರ್ಯಾಕ್ ಮಾಡಿದ್ದು, ಆತ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳ ಮೂಲಕ ಎಲ್‌ಇಟಿ ಭಯೋತ್ಪಾದಕರಾದ ಮೊಹಮ್ಮದ್ ಖಾಸಿಮ್ ಮತ್ತು ಗುಲಾಮ್ ಮುಸ್ತಫಾ ಅವರೊಂದಿಗೆ ಸಂಪರ್ಕದಲ್ಲಿದ್ದು, ಅವರ ಆಜ್ಞೆಯ ಮೇರೆಗೆ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದನು ಎಂದು ಬಹಿರಂಗಪಡಿಸಿವೆ. ಯುವಕರನ್ನು ಭಯೋತ್ಪಾದಕ ಸಂಘಟನೆಗೆ ಸೇರಿಸುವ ಕೆಲಸ ಮಾಡ್ತಿದ್ದ ಎನ್ನಲಾಗಿದ್ದು, ಅವನನ್ನು 2023ರಲ್ಲಿ ಬಂಧಿಸಲಾಯಿತು.

ಇನ್ನೂ ಮಜೀದ್ ಇಕ್ಬಾಲ್ ದಾರ್ 2009ರಲ್ಲಿ ಪ್ರಯೋಗಾಲಯ ಸಹಾಯಕರಾಗಿ ನೇಮಕಗೊಂಡು 2019 ರಲ್ಲಿ ಶಿಕ್ಷಕನಾಗಿ ಬಡ್ತಿ ಪಡೆದಿದ್ದನು. ಎಲ್‌ಇಟಿಯಲ್ಲಿ ಒಜಿಡಬ್ಲ್ಯೂ ಆಗಿ ಕೆಲಸ ಮಾಡುತ್ತಿದ್ದು, ರಾಜೌರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯುವಕರನ್ನು ಉಗ್ರರಾಗಿ ಪರಿವರ್ತಿಸುವಲ್ಲಿ ಭಾಗಿಯಾಗಿದ್ದನು. ಎಲ್‌ಇಟಿ ಭಯೋತ್ಪಾದಕ ಮಾಡ್ ಜಬರ್‌ನೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದ ಎಂದು ಅಧಕಾರಿಗಳು ತಿಳಿಸಿದ್ದಾರೆ.

2023 ಜನವರಿಯಲ್ಲಿ ರಾಜೌರಿಯ ಜೆ & ಕೆ ಬ್ಯಾಂಕ್ ಬಳಿ ಇರಿಸಲಾಗಿದ್ದ ಐಇಡಿಯನ್ನು ಪೊಲೀಸರು ವಶಪಡಿಸಿಕೊಂಡಾಗ ದಾರ್ ನ ಭಯೋತ್ಪಾದನಾ ನಂಟು ಬಹಿರಂಗವಾಗಿತ್ತು. ತನಿಖೆಯ ಸಮಯದಲ್ಲಿ, ದಾರ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು. (ಏಜೆನ್ಸೀಸ್)