ನ್ಯೂಸ್

ಜಮ್ಮುವಿನಲ್ಲಿ 'ಚಿಲ್ಲಾಯ್ ಕಾಲನ್' ಆರಂಭ; 50 ವರ್ಷಗಳ ದಾಖಲೆ ಮುರಿದ ಶೀತದ ಚಳಿ |Jammu and Kashmir

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ(Jammu and Kashmir) ಅತ್ಯಂತ ಶೀತಲ ಚಳಿಗಾಲ ಎಂದು ಕರೆಯಲ್ಪಡುವ 40 ದಿನಗಳ 'ಚಿಲ್ಲಾಯ್ ಕಾಲನ್' ಶನಿವಾರ(ಡಿಸೆಂಬರ್​​ 22) ತೀವ್ರ ಚಳಿಯೊಂದಿಗೆ ಪ್ರಾರಂಭವಾಯಿತು. ಈ ಬಾರಿ ಶ್ರೀನಗರವು ಐದು ದಶಕಗಳಲ್ಲೇ ಅತ್ಯಂತ ಶೀತ ಚಳಿಗೆ ಸಾಕ್ಷಿಯಾಯಿತು. ತಾಪಮಾನವು ಮೈನಸ್ 8.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಹಿಂದೆ 1934 ಡಿಸೆಂಬರ್ 13ರಂದು ಮೈನಸ್ 12.8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕನಿಷ್ಠ ತಾಪಮಾನ ದಾಖಲಾಗಿತ್ತು. ಶುಷ್ಕ ಋತುವಿನ ನಡುವೆ ನಿರಂತರವಾಗಿ ಶೂನ್ಯಕ್ಕಿಂತ ಕಡಿಮೆಯಿರುವ ಕನಿಷ್ಠ ತಾಪಮಾನವು ಶ್ರೀನಗರದಲ್ಲಿ ಮೈನಸ್ 8.5 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಸಾಮಾನ್ಯಕ್ಕಿಂತ 6.2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ತೀವ್ರ ಚಳಿಯಿಂದಾಗಿ ಪ್ರಸಿದ್ಧ ದಾಲ್ ಸರೋವರದ ಕೆಲವು ಭಾಗಗಳು ಸೇರಿದಂತೆ ಅನೇಕ ಜಲಮೂಲಗಳು ಹೆಪ್ಪುಗಟ್ಟಿದವು.

ಕಳೆದ 50 ವರ್ಷಗಳಲ್ಲಿ ಡಿಸೆಂಬರ್‌ನಲ್ಲಿ ಶ್ರೀನಗರದಲ್ಲಿ ಇದು ಮೊದಲ ಕಡಿಮೆ ತಾಪಮಾನ ಮತ್ತು ಕಳೆದ 133 ವರ್ಷಗಳಲ್ಲಿ ಮೂರನೇ ಕಡಿಮೆ ತಾಪಮಾನದ ರಾತ್ರಿಯಾಗಿದೆ. 1891 ರಿಂದ ಹವಾಮಾನ ಇಲಾಖೆಯು ದಾಖಲಿಸುತ್ತಿರುವ ತಾಪಮಾನವನ್ನು ಗಮನಿಸಿದರೆ ಶ್ರೀನಗರದಲ್ಲಿ ಕನಿಷ್ಠ ತಾಪಮಾನವು 13 ಡಿಸೆಂಬರ್ 1934 ರಂದು ಮೈನಸ್ 12.8 ಡಿಗ್ರಿ ಮತ್ತು 1974ರಲ್ಲಿ ಮೈನಸ್ 10.3 ಡಿಗ್ರಿ ಎಂದು ದಾಖಲಾಗಿದೆ.

ಜಮ್ಮು ವಿಭಾಗದಲ್ಲಿ ಉಧಂಪುರ, ರಜೌರಿ ಮತ್ತು ಭದೇರ್ವಾದಲ್ಲಿ ಕನಿಷ್ಠ ತಾಪಮಾನ ಶೂನ್ಯಕ್ಕಿಂತ ಕಡಿಮೆಯಾಗಿದೆ. ಜಮ್ಮು ನಗರದಲ್ಲಿ ಹಗಲಿನಲ್ಲಿ ಕೊಂಚ ಸಮಾಧಾನವಿದ್ದರೂ ಬೆಳಗ್ಗೆ ಮತ್ತು ರಾತ್ರಿ ನಡುಕ ಹೆಚ್ಚಿದೆ. ಜಮ್ಮುವಿನಲ್ಲಿ ಕನಿಷ್ಠ ತಾಪಮಾನ 5.4 ಡಿಗ್ರಿ ದಾಖಲಾಗಿದೆ.

ಭಾನುವಾರ(ಡಿಸೆಂಬರ್​​ 22) ಹೆಚ್ಚಿನ ಸಮಯ ಮೋಡ ಕವಿದ ವಾತಾವರಣ ಇರುತ್ತದೆ. ತಡರಾತ್ರಿಯಿಂದಲೇ ಮೇಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಹಿಮಪಾತ ಆರಂಭವಾಗಲಿದ್ದು, ಸೋಮವಾರ ಬೆಳಗಿನ ಜಾವದವರೆಗೂ ಹಿಮಪಾತ ಮುಂದುವರಿಯಲಿದೆ. ಕಾಶ್ಮೀರದ ಇತರ ಭಾಗಗಳಲ್ಲಿ ಕನಿಷ್ಠ ತಾಪಮಾನವು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪಂಪೋರ್ ಪಟ್ಟಣದ ಹೊರವಲಯದಲ್ಲಿರುವ ‘ಕೊನಿಬಾಲ್’ ಕಣಿವೆಯಲ್ಲಿನ ಅತ್ಯಂತ ಶೀತ ಪ್ರದೇಶವಾಗಿದ್ದು, ಕನಿಷ್ಠ ತಾಪಮಾನ 10.5 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. 1998 ರಿಂದ ಕುಪ್ವಾರದಲ್ಲಿ ಕನಿಷ್ಠ ತಾಪಮಾನ ಮೈನಸ್ 7.2 ದಾಖಲಾಗಿದೆ. ಹಿಂದಿನ ಡಿಸೆಂಬರ್ 31, 1998 ರಂದು ಕನಿಷ್ಠ ತಾಪಮಾನವು 9.4ಕ್ಕೆ ದಾಖಲಾಗಿತ್ತು.

26 ರಿಂದ ಜಮ್ಮು ವಿಭಾಗದ ಶಾಲೆಗಳಿಗೆ ಚಳಿಗಾಲದ ರಜೆ

ಜಮ್ಮು ವಿಭಾಗದ ಬೇಸಿಗೆ ವಲಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಚಳಿಗಾಲದ ರಜೆ ಘೋಷಿಸಲಾಗಿದೆ. ಜಮ್ಮು ಶಿಕ್ಷಣ ನಿರ್ದೇಶಕ ಅಶೋಕ್ ಕುಮಾರ್ ಶರ್ಮಾ ಆದೇಶ ಹೊರಡಿಸಿದ್ದಾರೆ. ಅದರ ಪ್ರಕಾರ ಡಿಸೆಂಬರ್ 26 ರಿಂದ 2025 ರ ಜನವರಿ 4 ರವರೆಗೆ ಶಾಲಾ ರಜೆಗಳು ಇರುತ್ತವೆ. ಸಿಬ್ಬಂದಿಯ ಸೇವೆ ಅಗತ್ಯವಿದ್ದರೆ ಇಲಾಖೆ ಅವರನ್ನು ಕರೆಯಬಹುದು ಎಂದು ತಿಳಿಸಲಾಗಿದೆ.(ಏಜೆನ್ಸೀಸ್​​)