ನ್ಯೂಸ್

ಅಂತಿಮ ವರ್ಷ, ಸೆಮಿಸ್ಟರ್​ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲವೆಂದ ವಿಶ್ವವಿದ್ಯಾಲಯ

ಬೆಂಗಳೂರು: ಕರೊನಾ ಸೋಂಕು ತಡೆಗಟ್ಟಲು ವಿಧಿಸಲಾಗಿದ್ದ ಲಾಕ್​ಡೌನ್​ ತೆರವಾಗುತ್ತಿದ್ದಂತೆ ಶೈಕ್ಷಣಿಕ ಚಟುವಟಿಕೆಗಳಿಗೂ ಅವಕಾಶ ದೊರೆಯಲಿದೆ ಎಂದೇ ಹೇಳಲಾಗಿತ್ತು. ಇದೇ ಕಾರಣಕ್ಕೆ ಹಲವು ರಾಜ್ಯ ಶಿಕ್ಷಣ ಮಂಡಳಿಗಳು ಹಾಗೂ ಸಂಸ್ಥೆಗಳು ಪರೀಕ್ಷೆ ದಿನಾಂಕ ಪ್ರಕಟಿಸಿದ್ದವು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ನಿಗದಿಯಂತೆ ಪರೀಕ್ಷೆ ನಡೆಸುವುದು ಸಾಧ್ಯವೇ ಎಂಬ ಪರಿಸ್ಥಿತಿ ಎದುರಾಗಿದೆ.

ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬೇಡ ಎಂದು ದೊಡ್ಡ ಕೂಗೆದ್ದಿದೆ. ಈ ನಡುವೆ ಹಲವು ರಾಜ್ಯಗಳಲ್ಲಿ ಪರೀಕ್ಷೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಹಲವು ವಿಶ್ವವಿದ್ಯಾಲಯಗಳು ಕೂಡ ಇದೇ ಹಾದಿ ಹಿಡಿದಿವೆ.

ಅಂತೆಯೇ, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಅಂತಿಮ ವರ್ಷ ಹಾಗೂ ಸೆಮಿಸ್ಟರ್​ಗಳ ಆಫ್​ಲೈನ್​ ಪರೀಕ್ಷೆಗಳನ್ನು ರದ್ದುಪಡಿಸಿದೆ.

ಕರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಪರಿಸ್ಥಿತಿ ಪೂರಕವಾಗಿಲ್ಲ. ಹೀಗಾಗಿ ಆನ್​ಲೈನ್​ ಪರೀಕ್ಷೆ ಹಾಗೂ ಅಸೈನ್​ಮೆಂಟ್​ ಆಧಾರದಲ್ಲಿ ಮೌಲ್ಯಮಾಪನ ನಡೆಸಲಾಗುವುದು. ಹೀಗಾಗಿ ವಿದ್ಯಾರ್ಥಿಗಳು ಆದಷ್ಟು ಬೇಗ ಆನ್​ಲೈನ್​ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕೆಂದು ವಿವಿ ಸೂಚಿಸಿದೆ.

ವಿಶ್ವವಿದ್ಯಾಲಯವು ಜೂನ್​ 1ರಿಂದ 15ರ ವರೆಗೆ ಬೇಸಿಗೆ ರಜೆಯನ್ನು ಘೋಷಿಸಿತ್ತು. ಬಳಿಕ ಅದನ್ನು ಜೂನ್​ 30ರವರೆಗೆ ವಿಸ್ತರಿಸಿದೆ. ಜುಲೈ 1ರಿಂದ ನಡೆಸಲುದ್ದೇಶಿಸಲಾಗಿದ್ದ ಆಫ್​​ಲೈನ್​ ಪರೀಕ್ಷೆಯನ್ನು ರದ್ದುಪಡಿಸುವುದಾಗಿ ಘೋಷಿಸಿದೆ.