ನ್ಯೂಸ್

ಜಲಮಂಡಳಿ ನಷ್ಟದಲ್ಲಿದೆ, ಸಂಬಳ ಕೊಡೋಕೆ‌ ದುಡ್ಡಿಲ್ಲ; ನೀರಿನ ದರ ಹೆಚ್ಚಳ ಮಾಡುತ್ತೇನೆ ಎಂದ ಡಿಕೆಶಿ

ಬೆಂಗಳೂರು: ಸಾರ್ವಜನಿಕರು ಬೈದರೂ, ವಿರೋಧ ಪಕ್ಷದವರಾದರು ವಿರೋಧ ಮಾಡಿದರೂ ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಗುರುವಾರ ನಡೆದ ಕಾವೇರಿ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಧ್ಯಮದವರು ಬೈಯಲಿ, ಜನ ವಿರೋಧ ವ್ಯಕ್ತಪಡಿಸಲಿ, ವಿಪಕ್ಷಗಳು ಟೀಕಿಸಲಿ, ತಲೆಕೆಡಿಸಿಕೊಳ್ಳುವುದಿಲ್ಲ. ನೀರಿನ ದರ ಹೆಚ್ಚಳ ಮಾಡುತ್ತೇವೆ ಎಂದು ಖಡಕ್​ ಆಗಿಯೇ ಉತ್ತರಿಸಿದರು.

ನಾಗರಿಕರಿಗೆ ಎಷ್ಟೇ ಮಾಡಿದರೂ ಉಪಕಾರ ಸ್ಮರಣೆ ಇಲ್ಲ: ನಾಗರಿಕರಿಗೆ ಎಷ್ಟೇ ಮಾಡಿದರೂ ಉಪಕಾರ ಸ್ಮರಣೆ ಇಲ್ಲ. ಎಷ್ಟೇ ಒಳ್ಳೆಯದು ಮಾಡಿದರೂ ಬೈತಾರೆ, ಕಮೆಂಟ್​ ಮಾಡುತ್ತಾರೆ. ಬಿಲ್ ಪಾವತಿಸುವರು ಪಾವತಿ ಮಾಡುತ್ತಾರೆ. ಕೆಲವರು ಪಾವತಿ ಮಾಡಲ್ಲ ನಂತರ ಮರೆತು ಬಿಡ್ತಾರೆ. ಕಂಪನಿ ಉಳಿಯಬೇಕಾಗಿದೆ ಅದಕ್ಕಾಗಿ ನಾವು ನೀರಿನ ದರ ಹೆಚ್ಚಳ‌ ಮಾಡಿಯೇ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.

ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡುತ್ತೇವೆ: ನೀರಿದ ದರ 8-9 ವರ್ಷದಿಂದ ಏರಿಕೆ ಮಾಡಿಲ್ಲ. ನೀರಿನ‌ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗಬೇಕು. ಜಲಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡೋಕೆ‌ ಆಗುತ್ತಿಲ್ಲ. ಮಂಡಳಿಯ ವಿದ್ಯುತ್ ದರವೂ ಪಾವತಿ ಮಾಡಲು ಆಗುತ್ತಿಲ್ಲ. ಕೆಲವು ಸೆಕ್ಷನ್‌ಗೆ ನೋಡಿ ದರ ನಿಗದಿ ಮಾಡಬೇಕು. ಎಷ್ಟು ದರ ಏರಿಕೆ ಮಾಡಬೇಕು ಅಂತ ನಿರ್ಧಾರ ಮಾಡಿಲ್ಲ. ಕಮಿಟಿ‌ ಸಭೆ ಮತ್ತು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡುತ್ತೇವೆ. ಆದರೆ ಇಂದಿನ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಈ ವಿಷಯ ಇಲ್ಲ ತಿಳಿಸಿದ್ದಾರೆ.

ಈ ವೇಳೆ ನೀರು ಮತ್ತು ಪವರ್ ಈ ಎರಡು ಪ್ರಮುಖವಾಗಿದ್ದು, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ನೀರು ಸರಬರಾಜು ಖಾಸಗೀಕರಣ ಚರ್ಚೆ ನಡೆದಿತ್ತು. ನಮ್ಮ ರಾಜ್ಯದಲ್ಲಿ ಇದು ಕಷ್ಟವಾಗಲಿದೆ ಎಂದು ಮಾಹಿತಿ ನೀಡಿದ್ದೆ. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ನಂತರ ಯೋಜನೆ ಕೈ ಬಿಟ್ಟಿದ್ದೆವು. ಈಗ ನಾನು ಸಚಿವನಾದ ಮೇಲೆ ಮತ್ತೆ ಕೆಲವರು ಖಾಸಗೀಕರಣದ ಬಗ್ಗೆ ಬಂದು ಮಾತಾಡಿದ್ದರು. ನಾನು ಇದು ಆಗಲ್ಲ ಎಂದು ಹೇಳಿದ್ದೇನೆ ಎಂದಿದ್ದಾರೆ.

ಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ: 110 ಹಳ್ಳಿಗಳ ಕಾವೇರಿ ನೀರಿನ ಸಂಪರ್ಕ ಅಭಿಯಾನಕ್ಕೆ ಡಿಕೆಶಿ ಇಂದು ಚಾಲನೆ ನೀಡಿದರು. ವಿಧಾನ ಸೌಧದ ಮುಂಭಾಗದ ಗ್ರಾಂಡ್ ಸ್ಟೆಪ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಸಂಪರ್ಕದ ಜೊತೆಗೆ ಮಳೆ ನೀರು ಕೊಯ್ಲು ಜಾಗೃತಿ ಅಭಿಯಾನ, ವರುಣಮಿತ್ರ ತರಬೇತಿ ಹಾಗೂ ಯುನೈಟೆಡ್ ನೇಷನ್ ಇನೋವೇಷನ್ ಪ್ರಾಜೆಕ್ಟ್ ಫಾರ್ ವಾಟರ್ ಸೆಕ್ಯುರಿಟಿ ಇನ್ ಬೆಂಗಳೂರು ಸಿಟಿ ಯೋಜನೆಗಳಿಗೂ ಅವರು ಚಾಲನೆ ನೀಡಿದರು.

110 ಹಳ್ಳಿಗಳಿಗೆ ಕಾವೇರಿ ಸಂಪರ್ಕ ಅಭಿಯಾನದಡಿ ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಟಿ ದಾಸರಹಳ್ಳಿ, ಬ್ಯಾಟರಾಯನಪುರ ಹಾಗೂ ಮಹದೇವಪುರ ವಿಧಾನಸಭೆ ಕ್ಷೇತ್ರಗಳಿಗೆ ಸೇರಿರುವ ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ದೊರೆಯಲಿದೆ.