Tanker Crash: ನಿನ್ನೆ (ಡಿ.20) ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಸಂಭವಿಸಿದ ಎಲ್ಪಿಜಿ ಗ್ಯಾಸ್ ಸಾಗಿಸುತ್ತಿದ್ದ ಟ್ರಕ್ ಭೀಕರ ಅಪಘಾತದಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದು, 40 ವಾಹನಗಳು ಸುಟ್ಟು ಕರಕಲಾಗಿದೆ. ಸ್ಫೋಟದ ಬೆನ್ನಲ್ಲೇ ಹೆದ್ದಾರಿಯಲ್ಲಿದ್ದ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಜ್ವಾಲೆಯಾಗಿ ಹಬ್ಬಿ, ದೊಡ್ಡ ದುರಂತಕ್ಕೆ ಸಾಕ್ಷಿಯಾಗಿದೆ.
ಜೈಪುರ-ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯ 800 ಮೀಟರ್ ವಿಸ್ತಾರವಾದ ರಸ್ತೆ ಪೂರ ದುರಂತಕ್ಕೆ ಸಾಕ್ಷಿಯಾಗಿದ್ದು, ವಾಹನಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿರುವ ಭೀಕರ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಪ್ರಾರಂಭದಲ್ಲಿ 4 ಜನರು ಸಾವಿಗೀಡಾಗಿದ್ದಾರೆ ಎಂದು ವರದಿ ಉಲ್ಲೇಖಿಸಿತ್ತು. ಆದರೆ, ದುರಂತದ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳು ಭೀಕರ ದುರಂತದಲ್ಲಿ ಒಟ್ಟು 12 ಜನರು ಮೃತಪಟ್ಟರೆ, ಕನಿಷ್ಠ 33 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿರುವುದಾಗಿ ಹೊಸ ವರದಿ ಉಲ್ಲೇಖಿಸಿದೆ.
ಟ್ಯಾಂಕರ್ ಸ್ಫೋಟದ ತೀವ್ರತೆಗೆ ಹೆದ್ದಾರಿಯಲ್ಲಿದ್ದ ಕಾರುಗಳು, ಸ್ಲೀಪರ್ ಬಸ್‌ಗಳು ಸುಟ್ಟು ಭಸ್ಮವಾಗಿವೆ. ಈ ಕುರಿತು ರಾಜಸ್ಥಾನ ಸಿಎಂ ಭಜನ್ಲಾಲ್ ಶರ್ಮಾ ಮತ್ತು ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವಂತೆ ಹೇಳಿ, ದುರಂತದಲ್ಲಿ ಸಾವಿಗೀಡಾದವರಿಗೆ ಸಂತಾಪ ಸೂಚಿಸಿದ್ದಾರೆ.
ಟ್ಯಾಂಕರ್ ಗ್ಯಾಸ್ ಮೈದುಂಬಿ ಹರಿಯುತ್ತಿರುವ ಅಣೆಕಟ್ಟಿನ ನೀರಿನಂತೆ ಹೊರಹೊಮ್ಮಿತು. ಸಿಸಿಟಿವಿ ದೃಶ್ಯಾವಳಿಗಳು 5.45 ಕ್ಕೆ ಸರಿಯಾಗಿ ಟ್ಯಾಂಕರ್ ಸ್ಫೋಟದ ದೃಶ್ಯವನ್ನು ಸೆರೆಹಿಡಿದಿದೆ. ಮೃತರಲ್ಲಿ ಹರ್ಲಾಲ್ (32), ರಾಧೇಶ್ಯಾಮ್ ಚೌಧರಿ (32), ಶಹಬುದ್ದೀನ್ (34), ಶಾಹಿದ್ (34) ಮತ್ತು ಫೈಜಾನ್ (20), ಮಹೇಂದ್ರ (27) ಮತ್ತು ಅನಿತಾ ಮೀನಾ (28) ಸೇರಿದಂತೆ ಒಟ್ಟು 7 ಮಂದಿಯ ಗುರುತನ್ನು ಮಾತ್ರ ಸದ್ಯದ ಮಟ್ಟಿಗೆ ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).