ಕಲಬುರಗಿ: ರಾಜ್ಯದ ಕೇಂದ್ರ ಕಾರಾಗೃಹಗಳು ಶಂಕಿತ ಉಗ್ರರ ಚಟುವಟಿಕೆ ಹಾಗೂ ಸಮಾಜಘಾತುಕ ಶಕ್ತಿಗಳ ತರಬೇತಿ ಕೇಂದ್ರಗಳಾಗಿ ರೂಪುಗೊಳ್ಳುತ್ತಿರುವುದಕ್ಕೆ ಹೊಸ ಪುರಾವೆ ಸಿಕ್ಕಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕುಳಿತು ವಿಧ್ವಂಸಕ ಕೃತ್ಯಕ್ಕೆ ಎಲ್ಇಟಿ ಉಗ್ರರು ಸಂಚು ರೂಪಿಸಿದ್ದ ಹಾಗೂ ಕೈದಿಗಳಿಗೆ ರಾಜಾತಿಥ್ಯ ದೊರೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಶಂಕಿತ ಉಗ್ರನೊಬ್ಬ ಜೈಲು ಅಧಿಕಾರಿಗಳಿಗೆ ಹಾಗೂ ಸಹ ಕೈದಿಗಳಿಗೆ ಬ್ಲಾ್ಯಕ್ವೆುೕಲ್ ಮಾಡಿ ಹಣ ವಸೂಲಿ ಮಾಡುತ್ತಿರುವ ದಂಧೆ ಬಯಲಾಗಿದೆ.
ಜೈಲಿನಲ್ಲಿದ್ದ ಮತ್ತೋರ್ವ ಕೈದಿ ಶಂಕಿತ ಉಗ್ರನ ಆಟಾಟೋಪದ ಕುರಿತು ತನ್ನ ಸಹೋದರನಿಗೆ ಕರೆ ಮಾಡಿ ಅಳಲು ತೋರಿಕೊಂಡಿರುವ ಆಡಿಯೋ ವೈರಲ್ ಆಗಿದ್ದು, ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಈ ಆಡಿಯೋ ಜಾಡು ಹಿಡಿದು ಕಲಬುರಗಿ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ ನೇತೃತ್ವದ ತಂಡ ಜೈಲಿನ ಮೇಲೆ ದಾಳಿ ನಡೆಸಿದಾಗ ಮಾದಕ ದ್ರವ್ಯ ಮತ್ತು ಮೊಬೈಲ್ಗಳು ಪತ್ತೆಯಾಗಿವೆ.
ಸ್ಮಾರ್ಟ್ಫೋನ್ ಅಸ್ತ್ರ: ಬೆಂಗಳೂರು ಮಲ್ಲೇಶ್ವರದ ಬಿಜೆಪಿ ಕಚೇರಿ ಸಮೀಪ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಂಕಿತ ಉಗ್ರ ಜುಲ್ಪಿಕರ್ ಅಲಿ ಕಲಬುರಗಿ ಜೈಲು ಸೇರಿದ್ದಾನೆ. ಈತನ ವಸೂಲಿ ದಂಧೆ ಕುರಿತು ಕೈದಿ ಸಾಗರ್ ಎಂಬಾತ ತನ್ನ ಸಹೋದರನ ಎದುರು ಹಲವು ಮಾಹಿತಿ ತೆರೆದಿಟ್ಟಿದ್ದಾನೆ. ಜೈಲಲ್ಲಿ ಸ್ಮಾರ್ಟ್ಫೋನ್ ಬಳಸುವ ಜುಲ್ಪಿಕರ್ ಅದೇ ಫೋನ್ನಲ್ಲಿ ಜೈಲು ಸಿಬ್ಬಂದಿಗಳಿಗೆ ಕೈದಿಗಳು ಲಂಚ ಕೊಡುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದ. ಬಳಿಕ ಇದೇ ವಿಡಿಯೋ ಮುಂದಿಟ್ಟುಕೊಂಡು 10ಕ್ಕೂ ಹೆಚ್ಚು ಅಧಿಕಾರಿಗಳಿಗೆ ಬ್ಲ್ಯಾಕ್ವೆುೕಲ್ ಮಾಡುತ್ತಿದ್ದಾನೆ. ಜುಲ್ಪಿಕರ್ಗೆ ಶಿವಮೊಗ್ಗದ ರೌಡಿಶೀಟರ್ ಬಚ್ಚನ್ ಸಾಥ್ ನೀಡುತ್ತಿದ್ದಾನೆಂದು ಹೇಳಲಾಗಿದೆ.
ಪಾಕಿಸ್ತಾನಿಯರ ನಂಟು: ತನ್ನ ಸ್ಮಾರ್ಟ್ಫೋನ್ ಮೂಲಕವೇ ಜುಲ್ಪಿಕರ್ ಮುಂಬೈ, ಪಾಕಿಸ್ತಾನ ಕೈದಿಗಳೊಂದಿಗೆ ಮಾತನಾಡುತ್ತಿದ್ದ. ಶುಕ್ರವಾರ ಜೈಲಲ್ಲೇ ಭಾಷಣ ಮಾಡುವ ಆತ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಬೆದರಿಕೆ ಒಡ್ಡುತ್ತಿದ್ದನೆಂದು ಆಡಿಯೋ ಸಂಭಾಷಣೆಯಲ್ಲಿ ಚರ್ಚೆ ಆಗಿದೆ.
ಇಂದು ಜೈಲಿಗೆ ತನಿಖಾ ತಂಡ: ಕಲಬುರಗಿ ಜೈಲಿನ ರಾಜಾತಿಥ್ಯ ಮತ್ತು ಉಗ್ರ ಜುಲ್ಪಿಕರ್ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಲು ಶುಕ್ರವಾರ ಬೆಂಗಳೂರಿನಿಂದ ಮತ್ತೊಂದು ತನಿಖಾ ತಂಡ ಕಲಬುರಗಿ ಕಾರಾಗೃಹಕ್ಕೆ ಬರಲಿದೆ. ಈಗಾಗಲೇ ವರದಿ ಸಿದ್ಧಪಡಿಸಲು ಜೈಲು ಅಧೀಕ್ಷಕಿ ಅನಿತಾ ಸಿಬ್ಬಂದಿಗೆ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ.
ಆತ್ಮಹುತಿ ದಾಳಿ ಪ್ಲ್ಯಾನ್ ವಿಫಲ: 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ರೂವಾರಿ, ಎಲ್ಇಟಿ ಸದಸ್ಯ ಕೇರಳದ ಟಿ. ನಾಸೀರ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಇತ್ತೀಚೆಗೆ ಕೊಲೆ ಕೇಸಿನಲ್ಲಿ ಬಂಧನಕ್ಕೆ ಒಳಗಾಗಿದ್ದ ಯುವಕರಿಗೆ ಜಿಹಾದಿ ಬೋಧನೆ ಮಾಡಿ ಬಿಎಂಟಿಸಿ ಬಸ್ ಸ್ಫೋಟ ಮತ್ತು ಆತ್ಮಾಹುತಿ ದಾಳಿಗೆ ಸಜ್ಜುಗೊಳಿಸಿದ್ದ. ಈ ವಿಷಯ ತಿಳಿದ ಸಿಸಿಬಿ ಪೊಲೀಸರು 2023ರ ಜುಲೈ 18ರಂದು ಶಂಕಿತರನ್ನು ಬಂಧಿಸಿ 4 ಜೀವಂತ ಹ್ಯಾಂಡ್ ಗ್ರೆನೇಡ್, 7 ನಾಡ ಪಿಸ್ತೂಲ್ಗಳು, 45 ಜೀವಂತ ಗುಂಡುಗಳು, ವಾಕಿಟಾಕಿ ಜಪ್ತಿ ಮಾಡಿ ದೊಡ್ಡ ಅನಾಹುತ ತಪ್ಪಿಸಿದ್ದರು.
ಯಾರು ಜುಲ್ಪಿಕರ್?: 2013ರ ಏ.17ರಂದು ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಸಂಭವಿಸಿದ್ದ ಬಾಂಬ್ ಸ್ಪೋಟದಲ್ಲಿ 11 ಪೊಲೀಸರು ಸೇರಿದಂತೆ 16 ಜನರು ಗಾಯಗೊಂಡಿದ್ದರು. ವ್ಯಾನ್ ಮತ್ತು ಕಾರಿನ ನಡುವೆ ನಿಲ್ಲಿಸಿದ್ದ ಮೋಟಾರ್ ಸೈಕಲ್ನಲ್ಲಿ ಬಾಂಬ್ ಇಡಲಾಗಿತ್ತು. ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್ ಉಮ್ಮಾ ಜತೆಗೆ ಕೈಜೋಡಿಸಿದ್ದ ತಮಿಳುನಾಡಿನ 20ಕ್ಕೂ ಹೆಚ್ಚು ಜನರು ಕೃತ್ಯದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಶಂಕಿತ ಉಗ್ರ ಜುಲ್ಪಿಕರ್ ಅಲಿ ಕೂಡ ಒಬ್ಬ. ಈತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿದ್ದ. ಈ ವೇಳೆ ಶಂಕಿತ ಉಗ್ರ ಸೈಯದ್ ಅಲಿ, ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡು ನ್ಯಾಯಾಧೀಶರಿಗೆ ಪತ್ರ ಬರೆದಿದ್ದ. ಇದನ್ನು ತಿಳಿದ ಜುಲ್ಪಿಕರ್ ತನ್ನ ಸಹಚರರ ಜತೆ ಸೇರಿ ಸೈಯದ್ ಅಲಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಜೈಲು ಅಧಿಕಾರಿಗಳು ಶಂಕಿತ 14 ಉಗ್ರರನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಿದ್ದರು. ಆಗ ಜುಲ್ಪಿಕರ್ನನ್ನು ಕಲುಬುರಗಿ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಬಾರ್ಗರ್ಲ್ಗಳಿಂದ ಖೆಡ್ಡಾ!: ಶಂಕಿತ ಉಗ್ರ ಜುಲ್ಪೀಕರ್ ತನ್ನ ಸ್ಮಾರ್ಟ್ಫೋನನ್ನು ಕೈದಿಗಳಿಗೆ ಬಾಡಿಗೆಗೆ ಕೊಡುತ್ತಿದ್ದ. ವಿಡಿಯೋ ಮತ್ತು ಆಡಿಯೋ ಕಾಲ್ಗಳಿಗೆ ಪ್ರತ್ಯೇಕ ದರ ಫಿಕ್ಸ್ ಮಾಡಿದ್ದ. ಮುಂಬೈನ ಬಾರ್ ಗರ್ಲ್ ಗಳೊಂದಿಗೆ ಸಂಪರ್ಕ ಹೊಂದಿರುವ ಈತ ವಿಡಿಯೋ ಕಾಲ್ ಮೂಲಕ ಸಹ ಕೈದಿಗಳಿಗೆ ಪರಿಚಯ ಮಾಡಿಸುತ್ತಿದ್ದ. ಬಾರ್ಗರ್ಲ್ಗಳು ವಿಡಿಯೋ ಕಾಲ್ನಲ್ಲಿ ಬೆತ್ತಲೆಯಾಗುವುದನ್ನು ಸ್ಕೀನ್ ವಿಡಿಯೋ ಮಾಡಿಟ್ಟುಕೊಳ್ಳುತ್ತಿದ್ದ. ಬಳಿಕ ಯಾರೆಲ್ಲ ಫೋನ್ ಬಳಸುತ್ತಿದ್ದರೋ ಅವರಿಗೆಲ್ಲ 50 ಸಾವಿರ ರೂ. ನೀಡುವಂತೆ ಬ್ಲಾಕ್ವೆುೕಲ್ ಮಾಡುತ್ತಿದ್ದ. ಹಣ ನೀಡದಿದ್ದಲ್ಲಿ ಕುಟುಂಬಸ್ಥರಿಗೆ ವಿಡಿಯೋ ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದನೆಂದು ಕೈದಿ ಸಾಗರ್ ಆಡಿಯೋದಲ್ಲಿ ಆರೋಪಿಸಿದ್ದಾನೆ.
ಇತ್ತೀಚೆಗೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ನಡೆದ ಗಾಂಜಾ, ವಿಡಿಯೋ ಕಾಲ್ ಪ್ರಕರಣದ ತನಿಖೆ ಸಿಸಿಬಿಗೆ ವಹಿಸಲಾಗಿದೆ. ಕೈದಿ ಜುಲ್ಪಿಕರ್ ಆಡಿಯೋ ಬಗ್ಗೆ ದೂರು ನೀಡಿದರೆ ತನಿಖೆ ನಡೆಸಲಾಗುವುದು.
| ಡಾ.ಶರಣಪ್ಪ ಎಸ್.ಡಿ. ಕಲಬುರಗಿ ನಗರ ಪೊಲೀಸ್ ಆಯುಕ್ತ