ನ್ಯೂಸ್

'ಸಮಾಜದಲ್ಲಿ ಅನೇಕ ಕಾಡುಪ್ರಾಣಿ ರೂಪದ ಜನ ಹೆಚ್ಚಿದ್ದಾರೆ, ಅಂಥ ಕೊಳಕರ ಬೆತ್ತಲುಮಾಡಿ': ನಟ ಜಗ್ಗೇಶ್​

ಬೆಂಗಳೂರು: ಬಿಗ್​​ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರು ತಮ್ಮ ಕೊರಳಿಗೆ ಹುಲಿ ಉಗುರು ಪೆಂಡೆಂಟ್ ಧರಿಸಿದ್ದರು ಎಂಬ ಆರೋಪದಡಿ ಅರಣ್ಯಾಧಿಕಾರಿಗಳು ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದರು. ಇದರ ಬೆನ್ನಲ್ಲೇ ಈಗ ಸ್ಯಾಂಡಲ್​ವುಡ್​ನ ಕೆಲವು ನಟರು ಸಹ ಇದೇ ರೀತಿಯಲ್ಲಿ ಹುಲಿ ಉಗುರು ಮಾದರಿಯ ಪೆಂಡೆಂಟ್​​ ಧರಿಸಿರುವ ಕುರಿತು ಪೊಲೀಸರು ಈಗಾಗಲೇ ಹಲವರಿಗೆ ನೋಟಿಸ್​ ಜಾರಿಗೊಳಿಸಿದ್ದಾರೆ.

ಸದ್ಯ ಸ್ಯಾಂಡಲ್​ವುಡ್​​ನ ಕೆಲವು ಸೆಲೆಬ್ರೆಟಿಗಳಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಈ ಪ್ರಕರಣದಲ್ಲಿ ನಟ ಜಗ್ಗೇಶ್ ಕೂಡ ಸಿಲುಕಿಕೊಂಡಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳ ಕ್ರಮವನ್ನು ಪ್ರಶ್ನೆ ಮಾಡಿ ಕೋರ್ಟ್​​ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಹುಲಿ ಉಗುರಿನ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ಪ್ರಕರಣದಲ್ಲಿ ಅನೇಕ ಸೆಲೆಬ್ರಿಟಿಗಳು ಹಾಗೂ ಕೆಲವು ಪ್ರಭಾವಿಗಳಿಗೂ ಸಂಕಷ್ಟ ಎದುರಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ದೂರು ಕೂಡ ದಾಖಲಾಗಿದ್ದು, ಸೂಕ್ತ ಕ್ರಮ ಕೈಗೊಂಡು, ಪರಿಶೀಲನೆ ನಡೆಸುತ್ತಿದ್ದಾರೆ.

ಇದರ ಬೆನ್ನಲ್ಲೇ ನಟ ಜಗ್ಗೇಶ್​ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ, "ಹೋರಾಡುವ ಸಹೋದರ ಸಹೋದರಿಯರೆ ಖಂಡಿತ ನಿಮ್ಮ ಅವಶ್ಯ ಸಮಾಜಕ್ಕೆ ಇದೆ ಸಮಾಜದಲ್ಲಿ ಅನೇಕ ಕಾಡುಪ್ರಾಣಿ ರೂಪದ ಜನ ಹೆಚ್ಚಿದ್ದಾರೆ ಅಂಥ ಕೊಳಕರ ಬೆತ್ತಲುಮಾಡಿ! ಭಾಷೆ, ಭ್ರಷ್ಟಾಚಾರ, ಪಾಪಕೃತ್ಯ ನೋಡಿದರು ಮೌನಮುನಿಗಳು ಅದೆ ಕಲಾವಿದರ ವಿಷಯ ಬಂದರೆ ಆರ್ಭಟವೇಕೆ? ಇದು ನಿಮ್ಮ ರಂಜಿಸಿದಕ್ಕೆ ನೀಡುವ ಉಡುಗೊರೆಯೇ? ಆದರು ನಿಮಗೆ ಶುಭಕೋರುವೆ ಗಾಡ್​ಬ್ಲೆಸ್"​ ಎಂದು ಬರೆದು ಹಂಚಿಕೊಂಡಿದ್ದಾರೆ.