ನ್ಯೂಸ್

ತೆಲಂಗಾಣ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದೇಕೆ ಶರ್ಮಿಳಾ?

ಹೈದರಾಬಾದ್: ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ, ಬದಲಿಗೆ ಕಾಂಗ್ರೆಸ್‌ಗೆ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ವೈಎಸ್‌ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥೆ ವೈ.ಎಸ್. ಶರ್ಮಿಳಾ ಹೇಳಿದ್ದಾರೆ.

ಇದನ್ನೂ ಓದಿ: ‘ನಾನು ಸಿಎಂ ಆಕಾಂಕ್ಷಿ, ಹೈಕಮಾಂಡ್ ಸೂಚಿಸಿದರೆ…’:ಪ್ರಿಯಾಂಕ್ ಖರ್ಗೆ
ವೈಎಸ್‌ಆರ್ ಪಕ್ಷವು ತೆಲಂಗಾಣದಲ್ಲಿ ಅಭ್ಯರ್ಥಿಗಳನ್ನು ಹಾಕುವುದರಿಂದ ಬಿಆರ್‌ಎಸ್‌ ಪಕ್ಷಕ್ಕೆ ಲಾಭವಾಗಲಿದೆ. ಕಾಂಗ್ರೆಸ್​ ಮತಗಳನ್ನೇ ವೈಎಸ್​ಆರ್​ ಅಭ್ಯರ್ಥಿಗಳು ಕೀಳುವುದರಿಂದ ಇವೆರಡೂ ಪಕ್ಷಗಳಿಗೆ ಸೋಲುಂಟಾಗಬಹುದಾಗಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ಲಾಭವಾಗಬಹುದಾದ ಸಾಧ್ಯತೆ ಹೆಚ್ಚಿಗೆ ಇರುವುದರಿಂದ ಚುನಾವಣೆಯಲ್ಲಿ ಮತಗಳ ವಿಭಜನೆಯನ್ನು ತಪ್ಪಿಸಲು ತಮ್ಮ ಪಕ್ಷವು ಕಾಂಗ್ರೆಸ್‌ಗೆ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಬಿಆರ್‌ಎಸ್‌ ಸೋಲು ಸನ್ನಿಹಿತವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಗೆಲುವಿಗೆ ಒಂದು ಅವಕಾಶವಿದೆ. ಈ ಹಂತದಲ್ಲಿ ಆಡಳಿತ ವಿರೋಧಿ ಮತಗಳ ವಿಭಜನೆಯು ಕೆಸಿಆರ್ ಅವರನ್ನು ಸೋಲಿಸಲು ಅಡ್ಡಿಯಾಗಲಿದೆ ಎಂದು ಶರ್ಮಿಳಾ ಹೇಳಿದ್ದಾರೆ.

ಕೆ.ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್‌ನ ಭ್ರಷ್ಟ ಮತ್ತು ಜನವಿರೋಧಿ ಆಡಳಿತ ಅಂತ್ಯಗೊಳಿಸಲು ತಮ್ಮ ಪಕ್ಷವು "ತ್ಯಾಗ" ಮಾಡಲು ನಿರ್ಧರಿಸಿದೆ. ಹಲವು ಸಮೀಕ್ಷೆಗಳು ಮತ್ತು ಗ್ರೌಂಡ್ ರಿಪೋರ್ಟ್‌ಗಳ ಪ್ರಕಾರ ಚುನಾವಣೆಯಲ್ಲಿ ನಮ್ಮ ಭಾಗವಹಿಸುವಿಕೆಯು ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಮತಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ, ವೈಎಸ್‌ಆರ್ ತೆಲಂಗಾಣ ಪಕ್ಷವು ಸ್ಪರ್ಧಿಸದಿರಲು ನಿರ್ಧರಿಸಿದೆ. ರಾಜ್ಯದ ಹಿತಾಸಕ್ತಿಯಿಂದ ಹಿಂದೆ ಸರಿಯಲು ಮತ್ತು ಜನರ ಸಮಸ್ಯೆಗೆ ಪರಿಹರರೋಪಾಯ ಕಂಡುಕೊಳ್ಳುವ ದೃಷ್ಟಿಯಿಂದ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಅವರು ಹೇಳಿದರು.

ಆಂಧ್ರ ಮುಖ್ಯಮಂತ್ರಿ ವೈ.ಎಸ್​.ಜಗನ್​ ಮೋಹನ ರೆಡ್ಡಿ ಅವರ ಕಿರಿಯ ಸಹೋದರಿ ವೈ.ಎಸ್. ಶರ್ಮಿಳಾ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ದಿ. ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಪುತ್ರಿ ಶರ್ಮಿಳಾ 'ರಾಜಣ್ಣ ರಾಜ್ಯ'(ವೈಎಸ್​ಆರ್​ ರಾಜ್ಯ) ಸ್ಥಾಪನೆಗಾಗಿ 2021 ರಲ್ಲಿ ವೈಎಸ್‌ಆರ್‌ಟಿಪಿಯನ್ನು ಸ್ಥಾಪಿಸಿದ್ದರು. ಪ್ರಾರಂಭಿಸಿದ್ದರು.
ತೆಲಂಗಾಣದಲ್ಲಿ ನ.30 ರಂದು ಮತದಾನ ನಡೆಯಲಿದ್ದು, ಡಿ.3 ರಂದು ಫಲಿತಾಂಶ ಪ್ರಕಟವಾಗಲಿದೆ.