ನ್ಯೂಸ್

ಜಾದವ್​ಪುರ ವಿಶ್ವವಿದ್ಯಾಲಯ ಪ್ರಕರಣ; ವಿದ್ಯಾರ್ಥಿ ಸಾವಿಗೆ ರ್‍ಯಾಗಿಂಗ್​, ಲೈಂಗಿಕ ದೌರ್ಜನ್ಯ ಕಾರಣ ಎಂದ ತನಿಖಾ ತಂಡ

ಕಲ್ಕತ್ತಾ: ಪಶ್ಚಿಮಬಂಗಾಳದ ಜಾದವ್​ಪುರ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸಾವಿಗೆ ರ್‍ಯಾಗಿಂಗ್​ ಹಾಗೂ ಲೈಂಗಿಕ ದೌರ್ಜನ್ಯ ಪ್ರಮುಖ ಕಾರಣ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಆಗಸ್ಟ್​ 9ರಂದು ವಿದ್ಯಾರ್ಥಿ ಹಾಸ್ಟೆಲ್​ನ ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ಪೊಲೀಸರು ಈವರೆಗೆ 12 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ವಿವಸ್ತ್ರಗೊಳಿಸಿ ರ್‍ಯಾಗಿಂಗ್​

ಈ ಕುರಿತು ಪ್ರತಿಕ್ರಿಯಸಿರುವ ತನಿಖಾ ತಂಡದ ಸದಸ್ಯರೊಬ್ಬರು ಪ್ರಕರಣ ಸಂಬಂಧ ಮೃತ ವಿದ್ಯಾರ್ಥಿಯ ಸಹಪಾಠಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೆಲವು ಸೀನಿಯರ್​ಗಳು ಆತನನ್ನು ವಿವಸ್ತ್ರಗೊಳಿಸಿ ಹಾಸ್ಟೆಲಿನಲ್ಲಿ ಮೆರವಣಿಗೆ ಮಾಡಿದ್ದರು. ಆತ ತಪ್ಪಿಸಿಕೊಳ್ಳಲು ರೂಮಿನೊಳಗೆ ಓಡಿ ಹೋದರು ಬಿಡದ ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಸಂತ್ರಸ್ತ ಹಾಸ್ಟೆಲ್​ನ ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ವಿದ್ಯಾರ್ಥಿ ಅಪ್ರಾಪ್ತ ವಯಸ್ಕನಾಗಿರುವ ಕಾರಣ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದ ಬಳಿಕ ಹಾಸ್ಟೆಲ್​ನಿಂದ ಸುಮಾರು 13 ವಿದ್ಯಾರ್ಥಿಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ 13 ಶಂಕಿತರ ಪೈಕಿ 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ಓರ್ವ ಆರೋಪಿ ತಲೆಮಾರಿಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತನಿಖಾ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.