ನ್ಯೂಸ್

ರಸ್ತೆಬದಿ ಕುಳಿತಿದ್ದವರ ಮೇಲೆ ನರಿಯ ದಾಳಿ; ರಕ್ಷಣೆಗಾಗಿ ವ್ಯಕ್ತಿ ಪಟ್ಟ ಹರಸಾಹಸದ ವಿಡಿಯೋ ವೈರಲ್​​​​

ಭೋಪಾಲ್​: ಇತ್ತೀಚೆಗಷ್ಟೆ ಉತ್ತರ ಪ್ರದೇಶದಲ್ಲಿ ತೋಳಗಳ ದಾಳಿಗೆ ಜನರು ಭಯಭೀತರಾಗದ್ದರು. ಈಗ ಮನುಷ್ಯರ ಮೇಲೆ ನರಿ ದಾಳಿ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ನರಿ ದಾಳಿ ಮಾಡುವ ಹಾಗೂ ಅದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವ್ಯಕ್ತಿಗಳು ಮಾಡುವ ಹರಸಾಹಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೈರಲ್​ ವಿಡಿಯೋದಲ್ಲಿ ವಸತಿ ಪ್ರದೇಶದಲ್ಲಿನ ರಸ್ತೆ ಬದಿಯಲ್ಲಿ ಇಬ್ಬರು ವ್ಯಕ್ತಿಗಳು ಮಾತನಾಡುತ್ತ ಕುಳಿತಿದ್ದಾರೆ. ಹಿಂದೆಯಿಂದ ಬಂದ ನರಿ ಅವರ ಮೇಲೆ ಹಠಾತ್ತನೆ ದಾಳಿ ಮಾಡಿದೆ. ಆರಂಭದಲ್ಲಿ ನರಿಯನ್ನು ಓಡಿಸಲು ಕಲ್ಲು ಎಸೆಯುತ್ತಾರೆ. ಆದರೆ ನರಿಯೂ ಪದೇಪದೆ ದಾಳಿಗೆ ಮುಂದಾಗುತ್ತದೆ. ಇಬ್ಬರಲ್ಲಿ ಒಬ್ಬರು ಓಡಲು ಪ್ರಯತ್ನಿಸುತ್ತಾರೆ. ಮತ್ತೊಬ್ಬರ ಭಯದಿಂದಳೆ ನರಿಯನ್ನು ಎತ್ತಿ ಬೀಸಾಡುವುದನ್ನು ಕಾಣಬಹುದಾಗಿದೆ.

ರೆಹತಿ ತಹಸಿಲ್‌ನ ಸಗೋನಿಯಾ ಪಂಚಾಯತ್ ಪ್ರದೇಶದಲ್ಲಿ ಸೋಮವಾರ(ಸೆಪ್ಟೆಂಬರ್​ 9) ಸಂಜೆ ಸುಮಾರು 5 ಗಂಟೆಗೆ ಈ ದಾಳಿ ನಡೆದಿದೆ. ಗಾಯಾಳುಗಳಾದ ಶ್ಯಾಮ್ ಯಾದವ್ ಮತ್ತು ನರ್ಮದಾ ಪ್ರಸಾದ್ ಅವರು ನರ್ಮದಾಪುರಂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಘಟನೆಯು ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಾಡು ಪ್ರಾಣಿಗಳ ದಾಳಿಯ ಕುರಿತು ಆತಂಕವನ್ನು ಸೂಚಿಸುತ್ತದೆ. ಸ್ಥಳೀಯ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಕಾಡುಪ್ರಾಣಿಗಳ ದಾಳಿ ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಹಳ್ಳಿಯ ಸುತ್ತಲಿನ ದಟ್ಟವಾದ ಅರಣ್ಯವು ನರಿಗಳಿಗೆ ಅಡಗಿಕೊಳ್ಳಲು ಉತ್ತಮ ಸ್ಥಳವಾಗಿದೆ. ಅವುಗಳು ಮತ್ತಿ ಬರಬಹುದು ಆದ್ದರಿಂದ ಜನರು ಜಾಗರೂಕರಾಗಿರುವಂತೆ ಹಾಗೂ ಒಂಟಿಯಾಗಿ ಹೊರಹೋಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದಾರೆ. ಸೋಮವಾರ ನಡೆದ ಮತ್ತೊಂದು ಘಟನೆಯಲ್ಲಿ ಸಲ್ಕಾನ್‌ಪುರದಲ್ಲಿ ನರಿಯು ಐವರ ಮೇಲೆ ದಾಳಿ ಮಾಡಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿರುವುದಾಗಿ ವರದಿಯಾಗಿದೆ.(ಏಜೆನ್ಸೀಸ್​​)