ನ್ಯೂಸ್

DMK Poster | ಗುಲಾಮರ ದೇಹದಲ್ಲಿ ರಕ್ತ ಏಕೆ ಹರಿಯಬೇಕು...ಪೋಸ್ಟರ್​​ ಮೂಲಕ ಎಐಎಡಿಎಂಕೆ, ಟಿವಿಕೆ ಕಾಲೆಳೆದ ಡಿಎಂಕೆ

Chennai: ಸೆಪ್ಟೆಂಬರ್ 27 ರಂದು ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜಕೀಯ ವಲಯದಲ್ಲಿ ಟೀಕೆ ಟಿಪ್ಪಣಿ ಮುಂದುವರೆದಿದ್ದು, ಆಡಳಿತಾರೂಢ ಡಿಎಂಕೆ (DMK Poster), ಎಐಎಡಿಎಂಕೆ ಮುಖ್ಯಸ್ಥ ಇ ಪಳನಿಸ್ವಾಮಿ ಮತ್ತು ನಟ ಟಿವಿಕೆ ವಿಜಯರನ್ನು ಟೀಕಿಸಿದೆ.

ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಡಿಎಂಕೆಯ ಐಟಿ ವಿಭಾಗ, ವ್ಯಂಗ್ಯಚಿತ್ರದಲ್ಲಿ ಪಳನಿಸ್ವಾಮಿ ಮತ್ತು ವಿಜಯ್ ನಗುತ್ತಿರುವಂತೆ ಮತ್ತು ಪ್ರಧಾನಿ ನರೇಂದ್ರ ಮೋದಿ ಸಿಂಹಾಸನದ ಮೇಲೆ ಕುಳಿತಿರುವ ಪಲ್ಲಕ್ಕಿಯನ್ನು ಹಿಡಿದುಕೊಂಡಿರುವುದನ್ನು ತೋರಿಸಲಾಗಿದೆ.

ಪಳನಿಸ್ವಾಮಿ ಮತ್ತು ವಿಜಯ್ ಪ್ರಧಾನಿಯ ಸೇವಕರಂತೆ ಬಿಂಬಿಸುವ ಪೋಸ್ಟರ್, ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಮತ್ತು 1972 ರಲ್ಲಿ ಎಐಎಡಿಎಂಕೆ ಪಕ್ಷ ಸ್ಥಾಪಿಸಿದ ನಟ ಎಂಜಿಆರ್ ನಟಿಸಿದ ಜನಪ್ರಿಯ ತಮಿಳು ಹಾಡಿನ ಸಾಲನ್ನು ಸಹ ಉಲ್ಲೇಖಿಸುತ್ತದೆ. ತಮಿಳಿನಲ್ಲಿರುವ ಆ ಸಾಲು, 'ಗುಲಾಮರ ದೇಹದಲ್ಲಿ ರಕ್ತ ಏಕೆ ಹರಿಯಬೇಕು?' ಎನ್ನುವ ಅರ್ಥ ಹೊಂದಿದೆ. ಇದಕ್ಕೆ ತಿರುಗೇಟು ನೀಡಿರುವ ಟಿವಿಕೆ, ಈ ಆರೋಪವನ್ನು ಆಧಾರರಹಿತ ಎಂದು ಕರೆದಿದೆ ಮತ್ತು ವಾಸ್ತವವಾಗಿ 1999 ಮತ್ತು 2001 ರ ನಡುವೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಡಿಎಂಕೆ ಎಂದು ಉಲ್ಲೇಖಿಸಿದೆ. ನಾವು ಭಾರತೀಯ ಜನತಾ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಎಂದಿಗೂ ಹೇಳಿಲ್ಲ. ವಾಸ್ತವವಾಗಿ, ನಾವು ಅದನ್ನು ಯಾವಾಗಲೂ ನಮ್ಮ 'ಸೈದ್ಧಾಂತಿಕ' ಶತ್ರು ಎಂದು ಕರೆದಿದ್ದೇವೆ ಎಂದು ಟಿವಿಕೆ ವಕ್ತಾರೆ ಲೊಯೊಲಾ ಮಣಿ ಹೇಳಿದ್ದಾರೆ.

ಮುಂದಿನ ವರ್ಷದ ಚುನಾವಣೆಗೆ ತಮಿಳುನಾಡಿನಲ್ಲಿ ಸಿದ್ಧತೆ ನಡೆದಿದ್ದು, ತಮಿಳಗ ವೆಟ್ರಿ ಕಳಗಂ ಜೊತೆ ಮೈತ್ರಿ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಪಕ್ಷವು ತನ್ನ ರಾಜಕೀಯ ಶತ್ರು ಅಂದರೆ ಡಿಎಂಕೆ ಮತ್ತು 'ಸೈದ್ಧಾಂತಿಕ ಶತ್ರು ಬಿಜೆಪಿ ಜೊತೆ ಯಾವುದೇ ಒಪ್ಪಂದ ಇಲ್ಲ ಎಂದ ಮೈತ್ರಿ ಊಹಾಪೋಹಗಳನ್ನು ತಳ್ಳಿಹಾಕಿದೆ. ಸದ್ಯ ಮೈತ್ರಿಗೆ ಉಳಿದಿರುವುದು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಮಾತ್ರ.

ಕರೂರು ದುರಂತದ ಬಳಿಕ ಟಿವಿಕೆ-ಎಐಎಡಿಎಂಕೆ ಒಪ್ಪಂದದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದು, ಎಐಎಡಿಎಂಕೆ ಮುಖ್ಯಸ್ಥ ಪಳನಿಸ್ವಾಮಿ ತಮ್ಮ ಪ್ರಚಾರದಲ್ಲಿ ಟಿವಿಕೆ ಪಕ್ಷದ ಧ್ವಜಗಳು ಸಹ ಸೇರಿವೆ ಎಂದು ವರದಿಯಾಗಿದೆ. ಎಐಎಡಿಎಂಕೆ-ಟಿವಿಕೆ ಒಪ್ಪಂದವು ಎಷ್ಟೇ ಅನಧಿಕೃತವಾಗಿದ್ದರೂ, ಬಿಜೆಪಿ ಮತ್ತು ಎಐಎಡಿಎಂಕೆ ಒಪ್ಪಂದವು ರದ್ದಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಬಿಜೆಪಿಯನ್ನು ತನ್ನ ಸೈದ್ಧಾಂತಿಕ ಶತ್ರು ಎಂದು ಹೇಳಿಕೊಳ್ಳುವ ಟಿವಿಕೆ, ಅಂತಹ ಪಕ್ಷದೊಂದಿಗೆ ಒಟ್ಟಿಗೆ ಹೆಜ್ಜೆ ಹಾಕುವುದು ಅಸಾಧ್ಯ ಎನ್ನಲಾಗಿದೆ.

ಡಿಎಂಕೆ ಮೈತ್ರಿಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ವಿಸಿಕೆ, ವಿಜಯ್​ರನ್ನು ಎಚ್ಚರಿಕೆಯೊಂದನ್ನು ನೀಡಿದ್ದು, ಬಿಜೆಪಿ ಸಿಬಿಐ ಬಳಸಿಕೊಂಡು ನಟನ ಮೇಲೆ ಒತ್ತಡ ಹೇರಬಹುದು ಎಂದು ಹೇಳುತ್ತಿದೆ. ವಿಜಯ್ ಈ ವಿಷಯದಲ್ಲಿ ಜಾಗರೂಕರಾಗಿರಬೇಕು. ಸಿಬಿಐ ತನಿಖೆ ಒಂದು ಬಲೆ. ಬಿಜೆಪಿ ಅವರನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತದೆ. ಇದರಿಂದ ಡಿಎಂಕೆ ಸರ್ಕಾರಕ್ಕಲ್ಲ, ವಿಜಯ್‌ಗೆ ಹಿನ್ನಡೆಯಾಗಲಿದೆ ಎಂದು ವಿಸಿಕೆ ಮುಖ್ಯಸ್ಥ ತಿರುಮಾವಲವನ್ ಹೇಳಿದ್ದಾರೆ.(ಏಜೆನ್ಸೀಸ್​)