ಇಟಲಿ: 24 ವರ್ಷಗಳ ಸೇವೆಯಲ್ಲಿ ಅನಾರೋಗ್ಯ ಎಂದು ಹೇಳಿ 20 ವರ್ಷ ರಜೆ ಹಾಕಿರುವ ಶಿಕ್ಷಕಿಯನ್ನು ವಜಾ ಮಾಡಿರುವ ಘಟನೆ ಇಟಲಿಯ ವೆನಿಸ್ನಲ್ಲಿ ನಡೆದಿದೆ.
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಉದ್ಯೋಗ: 2.74 ಹುದ್ದೆಗಳ ಭರ್ತಿಗೆ ಸಿಕ್ಕಿದೆ ಮಹತ್ವದ ಸುಳಿವು
ಸಿಂಜಿಯಾ ಪಾವೊಲಿನಾ ಡಿ ಲಿಯೊ ಎಂಬ ಮಹಿಳೆಯೇ ಸರ್ಕಾರದ ಸವಲತ್ತನ್ನು ದುರ್ಬಳಕೆ ಮಾಡಿಕೊಂಡಿದ್ದು, ಆಕೆ ವೆನಿಸ್ ನಗರದ ಮಾಧ್ಯಮಿಕ ಶಾಲೆಯಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತ್ರವನ್ನು ಕಲಿಸುತ್ತಿದ್ದಳು. ಈ ಕೃತ್ಯಕ್ಕೆ ಆಕೆಗೆ ಇಟಲಿಯ ಅತ್ಯಂತ ಕೆಟ್ಟ ಉದ್ಯೋಗಿ ಎಂಬ ಪಟ್ಟವನ್ನು ನೀಡಲಾಗಿದೆ.
ಶಿಕ್ಷಣ ಸಚಿವಾಲಯವು, ಸಿಂಜಿಯಾವು ತನ್ನ 24 ವರ್ಷಗಳ ಸೇವೆಯಲ್ಲಿ 20 ವರ್ಷ ತರಗತಿಯಿಂದ ಹೊರಗುಳಿದಿದ್ದಾಳೆ. ಮೊದಲ 10 ವರ್ಷಗಳಲ್ಲಿ ಆಕೆ ಸಂಪೂರ್ಣವಾಗಿ ಗೈರುಹಾಜರಾಗಿದ್ದಳು, ಇತರ 14 ವರ್ಷಗಳಲ್ಲಿ ಆಕೆ ಅನಾರೋಗ್ಯ, ವೈಯಕ್ತಿಕ ಅಥವಾ ಕೌಟುಂಬಿಕ ಕಾರಣ ನೀಡಿ ರಜೆ ತೆಗೆದುಕೊಂಡಿದ್ದಳು. ಕೆಲಸಕ್ಕೆ ಗೈರುಹಾಜರಾಗಿರುವಾಗಲೂ ಆಕೆ ವೇತನವನ್ನು ಪಡೆದಿದ್ದಳು ಎಂದು ಹೇಳಿದೆ.
ಪರೀಕ್ಷೆ ಸಂದರ್ಭಗಳಲ್ಲಿಯೂ ಶಾಲೆಗೆ ಚಕ್ಕರ್ ಹಾಕುತ್ತಿದ್ದ ಶಿಕ್ಷಕಿಯು ವಿದ್ಯಾರ್ಥಿಗಳು ಗೋಗರೆದರೂ ಪಾಠ ಮಾಡುತ್ತಿರಲಿಲ್ಲ. ಆಕೆಗೆ ಮೇಸೆಜ್ ಕಳುಹಿಸಿದರೆ ಪಠ್ಯವನ್ನು ತಾವೇ ಓದುವಂತೆ ವಿದ್ಯಾರ್ಥಿಗಳ ಮೇಲೆ ರೇಗಾಡುತ್ತಿದ್ದಳು. ಅಲ್ಲದೇ, ಪರೀಕ್ಷಾ ಮೌಲ್ಯಮಾಪನದ ವೇಳೆ ವಿದ್ಯಾರ್ಥಿಗಳಿಗೆ ಮನಬಂದಂತೆ ಅಂಕ ನೀಡಿದ್ದು, ಮೊನ್ನೆ ಜೂನ್ 22ರಂದು ಶಾಲೆಯ ವಿದ್ಯಾರ್ಥಿಗಳು ಮುಷ್ಕರ ನಡೆಸಿದ ನಂತರ ಶಿಕ್ಷಕಿಯನ್ನು ವಜಾಗೊಳಿಸಲಾಗಿದೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ: ಶಾಸಕ ಬಸನಗೌಡ ತುರ್ವಿಹಾಳ ಹೇಳಿಕೆ
ಈ ಪ್ರಕರಣವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ತನ್ನ ಕೆಲಸವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದ ಸಿಂಜಿಯಾ, ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದಳು. ಆದರೆ ಕೊನೆಗೆ ಈ ತೀರ್ಪನ್ನು ಮರುಪರಿಶೀಲಿಸಿದ ನ್ಯಾಯಾಲಯವು ಮಹಿಳೆಯ ಹಾಜರಿ ಪುಸ್ತಕ ಕಂಡು ತನ್ನ ತೀರ್ಪನ್ನು ಬದಲಿಸಿ. ಆಕೆಯನ್ನು ಕೆಲಸದಿಂದ ತೆಗೆದು ಹಾಕುವಂತೆ ತಾಕೀತು ಮಾಡಿದೆ.
ಕಳೆದ ಎರಡು ದಶಕಗಳಲ್ಲಿ 67 ಅನಾರೋಗ್ಯ ರಜೆ ಪ್ರಮಾಣಪತ್ರಗಳನ್ನು ಸಲ್ಲಿಸಿರುವ ಆಕೆ, ಅಪಘಾತಗಳ ಕಾರಣದಿಂದಾಗಿ ಸುದೀರ್ಘ ರಜೆಯನ್ನು ಪಡೆದಿದ್ದಳು. ಜತೆಗೆ ತನ್ನ ಮಗುವನ್ನು ನೋಡಿಕೊಳ್ಳಲು ಮಾತೃತ್ವ ರಜೆ, ಮಗುವಿನ ಅನಾರೋಗ್ಯ, ಅಂಗವೈಕಲ್ಯ ಹೊಂದಿರುವ ಸಂಬಂಧಿಕರಿಗೆ ಸಹಾಯ, ವೃತ್ತಿಗೆ ಸಂಬಂಧಿಸಿದ ತರಬೇತಿ ಪಡೆಯಲು ಸಹ ರಜೆಯನ್ನು ಪಡೆದಿದ್ದಳು. ಇಟಾಲಿಯನ್ ಸರ್ವೋಚ್ಚ ನ್ಯಾಯಾಲಯವು ಆಕೆ ಶಿಕ್ಷಕ ವೃತ್ತಿಗೆ ಯೋಗ್ಯವಾದ ವ್ಯಕ್ತಿಯಲ್ಲ ಎಂದು ಹೇಳಿದೆ.(ಏಜೆನ್ಸೀಸ್)