ನ್ಯೂಸ್

ಆಯ್ತು ಕ್ಷಮಿಸಿ! ಇನ್ಯಾವತ್ತು ಈ ರೀತಿ ಆಗಲ್ಲ... ಕಡೆಗೂ ಕ್ಷಮೆ ಕೋರಿದ ಜೋತಿಷಿ ವೇಣು ಸ್ವಾಮಿ | Venu Swamy

Venu Swamy​: ಕಳೆದ ವರ್ಷದ ಆಗಸ್ಟ್​ ತಿಂಗಳಲ್ಲಿ ತೆಲುಗು ನಟ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಎಂಗೇಜ್​ಮೆಂಟ್​ ಬಹಳ ಸರಳವಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನೆರವೇರಿತು. ಇದು ನಟನ ಎರಡನೇ ವಿವಾಹವಾಗಿದ್ದು, ಈ ಹಿಂದೆ ನಟಿ ಸಮಂತಾ ಅವರಿಗೆ ವಿಚ್ಛೇದನ ಕೊಡುವ ಮೂಲಕ ತಮ್ಮ ಮೊದಲನೇ ಮದುವೆಗೆ ಗುಡ್​ಬೈ ಹೇಳಿದರು. ಶೋಭಿತಾ ಜತೆ ಖುಷಿ ಕ್ಷಣಗಳನ್ನು ಕಳೆಯುತ್ತಿದ್ದ ‘ಚೈ’ ಹೊಸ ದಾಂಪತ್ಯ ಜೀವನ ಆರಂಭಕ್ಕೂ ಮುನ್ನವೇ ಸ್ಫೋಟಕ ಭವಿಷ್ಯ ನುಡಿದಿದ್ದ ಹೆಸರಾಂತ ಜೋತಿಷಿ ವೇಣು ಸ್ವಾಮಿ (Venu Swamy), ನಿಮ್ಮಿಬ್ಬರ ಸಂಬಂಧವು ಒಂದು ಹೆಣ್ಣಿನ ವಿಷಯಕ್ಕಾಗಿಯೇ 2027ರಲ್ಲಿ ಮುರಿದುಬೀಳಲಿದೆ ಎಂದು ವಿಡಿಯೋ ಮೂಲಕ ತಿಳಿಸಿದ್ದರು. ಈ ವಿಷಯ ಅಂದು ಟಾಲಿವುಡ್​ನಲ್ಲಿ ದೊಡ್ಡ ವಿವಾದಕ್ಕೆ ತಿರುಗಿ, ಪ್ರಕರಣ ಕೋರ್ಟ್​ ಮೆಟ್ಟಿಲೇರಿದ್ದು ಅನೇಕರಿಗೆ ಗೊತ್ತೇ ಇದೆ.

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಜೋಡಿಗೆ ಮದುವೆ ಮುನ್ನವೇ ವಿಚ್ಛೇದನದ ಸುದ್ದಿ ತೀರ ಬೇಸರಕ್ಕೆ ದೂಡಿತ್ತು. ಅದು ಒಂದು ಹೆಣ್ಣಿನ ವಿಷಯಕ್ಕೆ ಎಂದು ವೇಣು ಸ್ವಾಮಿ ನುಡಿದ ಭವಿಷ್ಯಕ್ಕೆ ಟಾಲಿವುಡ್​ನಲ್ಲಿ ದೊಡ್ಡ ವಿವಾದವೇ ಭುಗಿಲೇದ್ದಿತ್ತು. ವೇಣು ವಿರುದ್ಧ ತೆಲುಗು ಚಲನಚಿತ್ರ ಪತ್ರಕರ್ತರ ಸಂಘ ಮಹಿಳಾ ಆಯೋಗಕ್ಕೆ ದೂರು ನೀಡಿ, ಖಂಡನೆ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಮಹಿಳಾ ಸಂಘವು ವೇಣು ವಿರುದ್ಧ ದೂರು ದಾಖಲಿಸಿ, ಕ್ಷಮೆಯಾಚಿಸುವಂತೆ ಎಚ್ಚರಿಕೆ ರವಾನಿಸಿತ್ತು. ಇದಕ್ಕೆ ಒಪ್ಪದ ವೇಣು ಸ್ವಾಮಿ, ಮಹಿಳಾ ಸಂಘದ ನೋಟಿಸ್​ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.

ಕಡೆಗೂ ಕ್ಷಮೆಯಾಚನೆ

ಆದಾಗ್ಯೂ, ಮಹಿಳಾ ಆಯೋಗದ ಮುಂದೆ ಹಾಜರಾಗಬೇಕೆಂದು ನ್ಯಾಯಾಲಯವೂ ತೀರ್ಪು ನೀಡಿತ್ತು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಮಹಿಳಾ ಆಯೋಗವು ಮತ್ತೊಮ್ಮೆ ವೇಣು ಸ್ವಾಮಿಗೆ ಎರಡನೇ ಬಾರಿಗೆ ನೋಟಿಸ್ ಜಾರಿಗೊಳಿಸಿ, ಮುಂದಿನ ಕ್ರಮ ಎದುರಿಸುವುದು ಬೇಡ ಎಂದಾದರೆ ನಿಮ್ಮ ಮಾತುಗಳನ್ನು ಹಿಂಪಡೆದು, ಕ್ಷಮೆಯಾಚಿಸಿ ಎಂದು ಒತ್ತಾಯಿಸಿತು. ಈ ಹಿನ್ನಲೆ ಇಂದು (ಜ.21) ಮಹಿಳಾ ಆಯೋಗದ ಕಚೇರಿಗೆ ಹಾಜರಾದ ವೇಣು ಸ್ವಾಮಿ, "ನಾಗಚೈತನ್ಯ ಮತ್ತು ಶೋಭಿತಾ ಬಗ್ಗೆ ನುಡಿದ ಭವಿಷ್ಯ ಮತ್ತು ಕಹಿ ಮಾತುಗಳಿಗೆ ಕ್ಷಮೆಯಾಚಿಸುತ್ತೇನೆ. ನನ್ನ ಮಾತುಗಳನ್ನು ನಾನು ಹಿಂಪಡೆಯುತ್ತೇನೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).