ನ್ಯೂಸ್

ಕಳೆದ 5 ವರ್ಷಗಳಿಂದ… ತಿರುಪತಿ ಲಡ್ಡು ಬಗ್ಗೆ ಸ್ಫೋಟಕ ಸಂಗತಿ ಬಿಚ್ಚಿಟ್ಟ ರಮಣ ದೀಕ್ಷಿತಲು

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ವಿಶ್ವದ ಮೂಲೆ ಮೂಲಗಳಿಂದ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಆಗಮಿಸುವ ಲಕ್ಷಾಂತರ ಭಕ್ತಾಧಿಗಳು, ಭಗವಂತನ ದರ್ಶನ ಪಡೆಯುವುದು ಎಷ್ಟು ಮುಖ್ಯ ಎಂದು ಭಾವಿಸುತ್ತಾರೋ, ಅಲ್ಲಿ ಕೊಡುವ ಲಡ್ಡು ಪ್ರಸಾದವನ್ನು ಸೇವಿಸುವುದು ಕೂಡ ಅಷ್ಟೇ ಮುಖ್ಯ ಎನ್ನುತ್ತಾರೆ. ಪ್ರಸಿದ್ಧ ತಿರುಮಲ ದೇವಾಸ್ಥಾನದಲ್ಲಿ ವಿತರಿಸಲಾಗುತ್ತಿರುವ ಲಡ್ಡುವಿನಲ್ಲಿ ದನದ ಕೊಬ್ಬು ಬಳಸಿರುವುದು ದೃಢ ಎನ್ನಲಾಗುತ್ತಿದೆ. ಆದ್ರೆ, ಈ ಆರೋಪ ಎಷ್ಟು ನಿಜ? ಎಷ್ಟು ಸುಳ್ಳು? ಎಂಬ ಗೊಂದಲ ಮಾತ್ರ ಸದ್ಯ ನಿರಂತರವಾಗಿ ಕಾಡುತ್ತಿದೆ. ಈ ಪ್ರಕರಣ ಇದೀಗ ಹೈಕೋರ್ಟ್​ ಮೆಟ್ಟಿಲೇರಿದ್ದು, ಶೀಘ್ರವೇ ನ್ಯಾಯಾಲಯ ವಿಚಾರಣೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಲಿದೆ.

ಇನ್ನು ಮಾಜಿ ಸಿಎಂ ಜಗನ್ ಮೋಹನ್​ ರೆಡ್ಡಿ ಆಡಳಿತಾವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಗೆ ದನದ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ತಿರುಮಲ ತಿರುಪತಿ ದೇವಾಲಯದ ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತುಲು ಪ್ರತಿಕ್ರಿಯಿಸಿದ್ದು, ಸ್ಫೋಟಕ ಸಂಗತಿಯೊಂದನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. "ನಾನು ಈ ಹಿಂದೆಯೇ ಲಡ್ಡು ಪ್ರಸಾದದ ಗುಣಮಟ್ಟದ ಬಗ್ಗೆ ಟಿಟಿಡಿ ಅಧ್ಯಕ್ಷರು ಮತ್ತು ಇಓ ಅವರಿಗೆ ದೂರು ನೀಡಿದ್ದೆ. ಆದ್ರೆ, ನನ್ನ ದೂರಿಗೆ ಕಿಂಚಿತ್ತು ಸ್ಪಂದನೆ ಇರಲಿಲ್ಲ" ಎಂದರು.

"ಈ ವಿಷಯದಲ್ಲಿ ನಾನೊಬ್ಬನೇ ಧ್ವನಿ ಎತ್ತಿದ್ದೆ. ಏಕಾಂಗಿ ಹೋರಾಟ ಮಾಡಿದೆ. ದೇವಾಲಯದ ಒಬ್ಬ ಪೂಜಾರಿ ಕೂಡ ನನ್ನೊಂದಿಗೆ ಕೈಜೋಡಿಸಲಿಲ್ಲ. ಇದಕ್ಕೆ ಅವರವರ ವೈಯಕ್ತಿಕ ಕಾರಣಗಳು ಅಡ್ಡಿಪಡಿಸಿತು. ಇದರಿಂದಾಗಿ ಕಳೆದ ಐದು ವರ್ಷಗಳಿಂದ ತಿರುಮಲ ಪ್ರಸಾದದ ಗುಣಮಟ್ಟವನ್ನು ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ ಎಂಬುದು ಸ್ಪಷ್ಟ. ವರದಿಗಳನ್ನು ಪರಿಶೀಲಿಸಿದ ಬಳಿಕ ಲಡ್ಡು ಪ್ರಸಾದದಲ್ಲಿ ಬಳಸಿರುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮತ್ತು ತಾಳೆ ಎಣ್ಣೆ ಇರುವುದು ಸತ್ಯ" ಎಂದಿದ್ದಾರೆ.

"ಪವಿತ್ರ ತಿರುಪತಿ ಲಡ್ಡು ಪ್ರಸಾದ ಇದೀಗ ಅಪವಿತ್ರಗೊಂಡಿದೆ. ಇದೆಲ್ಲವೂ ಅಧಿಕಾರಿಗಳ ಕಣ್ಗಾವಲಿನಲ್ಲಿಯೇ ನಡೆದಿದೆ. ಲಡ್ಡು ತಯಾರಿಕೆಯಲ್ಲಿ ತುಪ್ಪವೇ ನಿರ್ಣಾಯಕ ಅಂಶ. ತುಪ್ಪ ಮಾತ್ರವಲ್ಲದೆ ಗೋಡಂಬಿ ಮತ್ತು ಬೇಳೆಕಾಳುಗಳಂತಹ ಇತರ ಪದಾರ್ಥಗಳು ಕೂಡ ಉತ್ತಮ ಗುಣಮಟ್ಟದ್ದಲ್ಲ. ಹೀಗಾಗಿ ಮಂಡಳಿಯಿಂದ ಕಟ್ಟುನಿಟ್ಟಾಗಿ ಪರಿಶೀಲಿಸಿ ಅನುಮೋದನೆ ಪಡೆಯುವುದು ಒಳಿತು" ಎಂದು ರಮಣ ಹೇಳಿದ್ದಾರೆ,(ಏಜೆನ್ಸೀಸ್).