ಮುಂಬೈ: ಕರೊನಾ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿ ಅಭಿಮಾನ ಗಳಿಸಿರುವ ನಟ ಸೋನು ಸೂದ್ ಅವರ ಆದಾಯ ಮೂಲ ಮತ್ತು ಖರ್ಚಿನ ವೈಖರಿ ಬಗ್ಗೆ ಇದೀಗ ಐಟಿ ಅಧಿಕಾರಿಗಳ ದೃಷ್ಟಿ ಬಿದ್ದಿದೆ. ಸೋನು ಸೂದ್ ಅವರ ಮುಂಬೈನ ಕಾಸಾ ಬ್ಲಾಂಕಾ ನಿವಾಸಕ್ಕೆ ಭೇಟಿ ನೀಡುವುದರೊಂದಿಗೆ, ಅವರಿಗೆ ಸಂಬಂಧಿಸಿದ ಇತರ 6 ಸ್ಥಳಗಳನ್ನು ಆದಾಯ ತೆರಿಗೆ ಇಲಾಖೆಯ ತಂಡ ಸರ್ವೇ ಮಾಡುತ್ತಿದೆ ಎನ್ನಲಾಗಿದೆ.
ಐಟಿ ಅಧಿಕಾರಿಗಳ ಈ ಭೇಟಿಯು ಐಟಿ ದಾಳಿಯಲ್ಲ. ಬದಲಿಗೆ ಸೂದ್ ಅವರ ಆದಾಯಗಳ ಮೂಲಗಳ ಬಗ್ಗೆ ಮತ್ತು ಅವರು ಅದನ್ನು ಎಲ್ಲೆಲ್ಲಿ ವ್ಯಯಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನವಷ್ಟೇ ಆಗಿದೆ ಎಂದು ಮೂಲಗಳು ತಿಳಿಸಿವೆ. ಕರೊನಾ ಸಮಯದಲ್ಲಿ ಹಲವಾರು ಜನರಿಗೆ ಧನಸಹಾಯ ಮಾಡಿರುವ ಸೂದ್, ಎಲ್ಲೆಲ್ಲಿಂದ ಹಣ ಪಡೆದರು ಮತ್ತು ಹೇಗೆಲ್ಲಾ ಅದನ್ನು ಖರ್ಚು ಮಾಡಿದರು ಎಂಬುದರ ಸಮೀಕ್ಷೆ ನಡೆಯುತ್ತಿದೆ ಎನ್ನಲಾಗಿದೆ.
ಸೋನು ಸೂದ್ ಅವರು ದೆಹಲಿ ಸರ್ಕಾರದ ಶಾಲಾ ಮಕ್ಕಳ ಪ್ರೋತ್ಸಾಹ ಯೋಜನೆಯ ಬ್ರ್ಯಾಂಡ್ ಅಂಬಾಸಿಡಾರ್ ಆದ ಬೆನ್ನಲ್ಲೇ ಈ ಬೆಳವಣಿಗೆಯಾಗಿರುವುದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಾರ್ಟಿಯ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದ ಸೋನು ಸೂದ್, ರಾಜಕೀಯ ಕ್ಷೇತ್ರಕ್ಕೆ ಕಾಲಿಡಬಹುದೆಂಬ ಊಹೆಗಳೂ ಹರಿದಾಡುತ್ತಿವೆ ಎನ್ನಲಾಗಿದೆ. (ಏಜೆನ್ಸೀಸ್)