ನ್ಯೂಸ್

ಕಾಂಗ್ರೆಸ್ಸಿಗರು ಕೀಳು ರಾಜಕೀಯ ಅಭಿರುಚಿಯ ಹೇಳಿಕೆ ನೀಡುತ್ತಿರುವುದು ದುರ್ದೈವದ ಸಂಗತಿ: ಬಿ.ವೈ.ವಿಜಯೇಂದ್ರ | Vijayendra

Vijayendra : ಪಹಲ್ಗಾಮ್​ ಭಯೋತ್ಪಾದಕ ದಾಳಿ ಹಿನ್ನೆಲೆ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಇಂತಹ ಸಮಯದಲ್ಲಿ ಭಾರತದ ಏಕತೆಗೆ ದನಿಗೂಡಿಸಬೇಕಾದ ಕಾಂಗ್ರೆಸ್ಸಿಗರು ‘ಮೊಸರಲ್ಲಿ ಕಲ್ಲು ಹುಡುಕುವ ಕೀಳು ರಾಜಕೀಯ ಅಭಿರುಚಿಯ ಹೇಳಿಕೆಗಳನ್ನು ನೀಡುತ್ತಿರುವುದು ದುರ್ದೈವದ ಸಂಗತಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ವಿಜಯೇಂದ್ರ, '' ಇಡೀ ದೇಶವೇ ಕಾಶ್ಮೀರದಲ್ಲಿ ನಡೆದ ಹಿಂದುಗಳ ಹತ್ಯೆಗೆ ಮಮ್ಮಲ ಮರುಗುತ್ತಿದೆ. ಪಾಕಿಸ್ತಾನದ ಚಿತಾವಣೆ ಹಾಗೂ ಪಿತೂರಿಯ ಮುಖವಾಡಗಳೆನಿಸಿದ ರಣಹೇಡಿ ಉಗ್ರರ ಪೈಶಾಚಿಕ ವರ್ತನೆಯಿಂದ ಶತಕೋಟಿ ಭಾರತೀಯರು ಆಕ್ರೋಶಭರಿತರಾಗಿದ್ದಾರೆ. ಆದರೆ, ಕಾಂಗ್ರೆಸ್ಸಿಗರು ಒಬ್ಬರು ಭದ್ರತಾ ವೈಫಲ್ಯವೆಂದು ಟೀಕಿಸುವುದು, ಮತ್ತೊಬ್ಬರು ಆರ್ಟಿಕಲ್‌ 370 ರದ್ದುಪಡಿಸಿದ ಪರಿಣಾಮ ಎಂದು ಹೇಳುವುದು, ರಾಜ್ಯದ ಸಚಿವರೊಬ್ಬರು ಬಿಜೆಪಿ ಮುಸ್ಲಿಮರನ್ನು ದ್ವೇಷಿಸಿದ್ದೇ ಘಟನೆಗೆ ಕಾರಣ ಎಂಬ ಅರ್ಥದಲ್ಲಿ ದ್ವೇಷ ಬಿತ್ತುವ ಬೇಜವಾಬ್ದಾರಿತನದ ಬಾಲಿಶ ಹೇಳಿಕೆ ನೀಡುವುದು ಮುಂದುವರೆದಿದೆ. ಇದು ಭಾರತದ ಏಕತೆ ಹಾಗೂ ಸುರಕ್ಷತೆಗೆ ಭಂಗ ತರುವ ನಡವಳಿಕೆಯಲ್ಲದೇ ಬೇರೇನೂ ಅಲ್ಲ'' ಎಂದಿದ್ದಾರೆ.

ಉಗ್ರರಿಗೆ ಆಶ್ರಯ ತಾಣವಾಗಿರುವ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಸುರಕ್ಷತೆಗಾಗಿ ದಿಟ್ಟ ಹೆಜ್ಜೆ ಇಡಲು ಹೊರಟಿರುವ ಕ್ರಮವನ್ನು‘ತಾವು ಯುದ್ಧದ ಪರ ಅಲ್ಲ’ ಸಿಎಂ ಸಿದ್ದರಾಮಯ್ಯನವರು ಹೇಳುವ ಮೂಲಕ ಪಲಾಯನ ವಾದಿ ನಿಲುವು ಪ್ರಕಟಿಸಿ ಭಾರತೀಯ ಸೈನಿಕರ ನೈತಿಕ ಸ್ಥೈರ್ಯ ಕುಗ್ಗಿಸಲು ಹೊರಟಿದ್ದಾರೆ ಎಂದಿದ್ದಾರೆ.

ಈ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದ ಸಮಯದಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮರುವಶ ಪಡೆಸಿಕೊಳ್ಳುವ ಅವಕಾಶವಿತ್ತು. ಆದರೆ, ಆ ನಿಟ್ಟಿನಲ್ಲಿ ಇಂದಿರಾ ಗಾಂಧಿಯವರು ಬದ್ಧತೆ-ದಿಟ್ಟತೆ ತೋರದಿರುವುದು ಇತಿಹಾಸದ ಪುಟಗಳಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿರುವುದನ್ನು ಮುಖ್ಯಮಂತ್ರಿಗಳು ಒಮ್ಮೆ ನೋಡಿಕೊಳ್ಳಲಿ ಎಂದಿದ್ದಾರೆ.

ಮುಖ್ಯಮಂತ್ರಿಗಳ ಪ್ರಕಾರ ಎಷ್ಟೇ ನಮಗೆ ಉಪಟಳ ನೀಡಿದರೂ, ನಮ್ಮ ಜನರ ಮಾರಣಹೋಮ ಆದರೂ, ನಮ್ಮ ಸೈನಿಕರು ಸಾಲು ಸಾಲಾಗಿ ಪ್ರಾಣ ತೆತ್ತರೂ ಭಾರತ ಯುದ್ಧ ಮಾಡದೇ ಶಾಂತಿ ಮಂತ್ರ ಪಠಿಸಬೇಕೇ? ಯುದ್ಧ ಭಾರತದ ಆದ್ಯತೆಯಲ್ಲ ಎಂಬುದು ಎಷ್ಟು ಮುಖ್ಯವೋ ರಾಷ್ಟ್ರದ ಸುರಕ್ಷತೆ, ಭಾರತೀಯರ ಅಮೂಲ್ಯ ಜೀವಗಳ ರಕ್ಷಣೆ ಅದಕ್ಕಿಂತಲೂ ಮುಖ್ಯ ಎಂಬುದು ಕೇಂದ್ರ ಸರ್ಕಾರದ ಪರಮ ಧ್ಯೇಯವಾಗಿದೆ, ಇದಕ್ಕೆ ಸಮಗ್ರ ಭಾರತೀಯರೆಲ್ಲರ ಒಕ್ಕೊರಲಿನ ಬೆಂಬಲವೂ ದೇಶಾದ್ಯಂತ ಮೊಳಗುತ್ತಿದೆ ಎಂದಿದ್ದಾರೆ.

ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡು ದೇಶದ ಸುರಕ್ಷತೆಯ ವಿಷಯದಲ್ಲಿ ರಾಜಕೀಯ ಪ್ರೇರಿತ ಟೊಳ್ಳು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ಕಿಡಿ ಕಾರಿದ್ದಾರೆ.