ಬೆಂಗಳೂರು: ಚುನಾವಣೆ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ, ಸ್ವಾರಸ್ಯ ಸಾಮಾನ್ಯ. ರಾಜಕೀಯ ನಾಯಕರು ತಮ್ಮ ಮಾತು ಮತ್ತು ನಡವಳಿಕೆಯಿಂದ ಅನೇಕ ವೈರುಧ್ಯವನ್ನು ಎದುರಿಸುವುದು ಸಹಜ. ಈ ಬಾರಿ ಉಪ ಚುನಾವಣೆಯಲ್ಲೂ ಅಂತಹ ಒಂದು ಪ್ರಸಂಗವಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದರು. ಎಚ್.ಡಿ.ಕುಮಾರಸ್ವಾಮಿ ಈ ಚುನಾವಣೆಯನ್ನು ತಮ್ಮ ಪುತ್ರನ ರಾಜಕೀಯ ಪ್ರವೇಶಕ್ಕೆ ಲಾಂಚ್ ಪ್ಯಾಡ್ ಆಗಿ ಬಳಸಿದ್ದರು. ಅವರ ಎದುರಾಳಿಯಾಗಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ. ಅವರ ಬೆನ್ನಿಗೆ ಬಿಜೆಪಿ ಬಲವಾಗಿ ನಿಂತಿತ್ತು. ಬಿ.ಎಸ್.ಯಡಿಯೂರಪ್ಪ ಆದಿಯಾಗಿ ಪ್ರಮುಖ ನಾಯಕರೆಲ್ಲ ನಿಖಿಲ್ ಸೋಲಿಸಲು ಇನ್ನಿಲ್ಲದ ಸಾಹಸ ಪಟ್ಟಿದ್ದರು. ಸುಮಲತಾ ಗೆಲುವಿನಲ್ಲಿ ಬಿಜೆಪಿ ನಾಯಕರ ಶ್ರಮವೂ ಇತ್ತು. ಆದರಿಂದು ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ನಿಖಿಲ್ ಅವರನ್ನು ಗೆಲ್ಲಿಸುವ ಹೊಣೆ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರ ಮೇಲಿದೆ. ಅಂದು ನಿಖಿಲ್ ಬೆನ್ನಿಗೆ ನಿಂತವರು ಇಂದು ಸೋಲಿಸಲು ಟೊಂಕ ಕಟ್ಟಿದ್ದಾರೆ.
ಅದೇ ರೀತಿ 2024ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಶ್ರಮಿಸಿದವರಲ್ಲಿ ಸಿ.ಪಿ.ಯೋಗೇಶ್ವರ್ ಕೂಡ ಒಬ್ಬರು. ಈ ಬಾರಿ ಉಪ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಅವರನ್ನು ಗೆಲ್ಲಿಸಿಕೊಳ್ಳುವ ದಂಡ ನಾಯಕರ ಪೈಕಿ ಡಿ.ಕೆ.ಸುರೇಶ್ ಮುಂಚೂಣಿಯಲ್ಲಿದ್ದಾರೆಂಬುದು ವಿಶೇಷ. ಲೋಕಸಭೆ ಚುನಾವಣೆ ಪ್ರಚಾರದ ವೇಳೆ ‘ಡಿಕೆಶಿ ನೋಟು ಡಾ.ಮಂಜುನಾಥ್ಗೆ ಓಟು’ ಎಂಬ ಸಿ.ಪಿ.ಯೋಗೇಶ್ವರ್ ಕಾಯಿನ್ ಮಾಡಿದ್ದ ಘೋಷಣೆ ಅಂದಿಗೆ ಟ್ರೆಂಡ್ ಆಗಿತ್ತು. ಇಂದು ಡಿ.ಕೆ.ಶಿವಕುಮಾರ್ ಸಾರಥ್ಯದ ರಥದಲ್ಲಿ ಸಿ.ಪಿ.ಯೋಗೇಶ್ವರ್ ಉತ್ಸವಮೂರ್ತಿ ಎಂಬುದು ಗಮನಾರ್ಹ ಸಂಗತಿ.
ಬೊಂಬೆನಾಡಲ್ಲಿ ಸಿಪಿವೈ ಶಕ್ತಿ ಪ್ರದರ್ಶನ: ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ಬಿನೋಯ್ಗೆ 2 ಸೆಟ್ನಲ್ಲಿ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ , ಪಕ್ಷದ ಜಿಲ್ಲಾಧ್ಯಕ್ಷ ಎಸ್. ಗಂಗಾಧರ್ ಸಾಥ್ ನೀಡಿದರು.
ಬೃಹತ್ ಶಕ್ತಿ ಪ್ರದರ್ಶನ!: ನಾಮಪತ್ರ ಸಲ್ಲಿಕೆಗೂ ಮುನ್ನ ಸಿ.ಪಿ.ಯೋಗೇಶ್ವರ್ ನಗರದಲ್ಲಿ ಬೃಹತ್ ರೋಡ್ ಷೋ ನಡೆಸಿದರು. ನಗರದ ಮಂಗಳವಾರಪೇಟೆ ಬಸವನಗುಡಿಯಿಂದ ತಾಲೂಕು ಕಚೇರಿವರೆಗೂ ನಡೆದ ರೋಡ್ ಷೋನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಯೋಗೇಶ್ವರ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ತಮಟೆ ಹಾಗೂ ಕಲಾತಂಡಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು. ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿ ಬಂದರು. ತೆರೆದ ವಾಹನದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಸೇರಿ ಕಾಂಗ್ರೆಸ್ ನಾಯಕರು ನೆರೆದಿದ್ದ ಜನರನ್ನು ಹುರಿದುಂಬಿಸಿದರು. ರೋಡ್ ಷೋ ಮಧ್ಯದಲ್ಲಿಯೇ ನಗರದ ಗಾಂಧಿಭವನದ ಬಳಿ ಸಿಎಂ ಸೇರಿ ಕಾಂಗ್ರೆಸ್ ನಾಯಕರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಅಭ್ಯರ್ಥಿ: ಸಿ.ಪಿ.ಯೋಗೇಶ್ವರ್ಕ್ಷೇತ್ರ: ಚನ್ನಪಟ್ಟಣ, ರಾಮನಗರ ಜಿಲ್ಲೆಪಕ್ಷ: ಕಾಂಗ್ರೆಸ್ಒಟ್ಟು ಆಸ್ತಿ: 35.09 ಕೋಟಿ ರೂ.
ಯೋಗೇಶ್ವರ್ ಹೆಸರಲ್ಲಿ 250 ಗ್ರಾಂ ಚಿನ್ನ ಇದ್ದರೆ, ತಲಾ 70 ಲಕ್ಷದ ಒಂದು ಬೆಂಜ್ ಮತ್ತು ಬಿಎಂಡಬ್ಲ್ಯು ಕಾರು ಇದೆ. ಸಾರ್ವಜನಿಕರಿಂದ ಉಡುಗೊರೆಯಾಗಿ ದೊರೆತ 1 ಕೆಜಿ ಚಿನ್ನ ಮತ್ತು 50 ಕೆಜಿ ಬೆಳ್ಳಿಯನ್ನು ಪತ್ನಿ ಶೀಲಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಶೀಲಾ ಬಳಿ 1.5 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಇದೆ. ಉಳಿದಂತೆ ಯೋಗೇಶ್ವರ್ ಅವರ ಬಳಿ 54.2 ಎಕರೆ ಕೃಷಿ ಭೂಮಿ, ಚನ್ನಪಟ್ಟಣ, ಬೆಂಗಳೂರಿನಲ್ಲಿ 5 ಮನೆಗಳು, ಬಿಡದಿಯ ಕೆಂಜಗರಹಳ್ಳಿಯಲ್ಲಿ ಕೃಷಿಯೇತರ ಜಮೀನು ಸೇರಿ ಒಟ್ಟು 27.94 ಕೋಟಿ ರೂ. ಸ್ಥಿರಾಸ್ತಿ ಇದೆ. ಪತ್ನಿ ಶೀಲಾ ಅವರ ಬಳಿ 14.19 ಎಕರೆ ಕೃಷಿ ಭೂಮಿ, ಬೆಂಗಳೂರಿನಲ್ಲಿ ಮೂರು ಮನೆಗಳು ಸೇರಿ ಒಟ್ಟು 25.35 ಕೋಟಿ ರೂ. ಮೌಲ್ಯದ ಸ್ತಿರಾಸ್ತಿ ಇದೆ. ಯೋಗೇಶ್ವರ್ಗೆ ಅವರಿಗೆ 25.46 ಕೋಟಿ ರೂ. ಸಾಲವಿದ್ದರೆ, ಶೀಲಾ 3.41 ಕೋಟಿ ರೂ. ಸಾಲ ಹೊಂದಿದ್ದಾರೆ. 2022-23ರಲ್ಲಿ 46.23 ಲಕ್ಷ ರೂ. ವಾರ್ಷಿಕ ಆದಾಯ ಯೋಗೇಶ್ವರ್ ಹೊಂದಿದ್ದರೆ, ಶೀಲಾ 19.36 ಲಕ್ಷ ರೂ. ಆದಾಯ ಹೊಂದಿದ್ದಾರೆ. ಇನ್ನು ಯೋಗೇಶ್ವರ್ ಅವರ ವಿರುದ್ಧ 10 ಪ್ರಕರಣಗಳು ಬಾಕಿ ಇವೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಯೋಗೇಶ್ವರ್, ಶೀಲಾ ಅವರ ಒಟ್ಟು ಆಸ್ತಿ ಮೌಲ್ಯ 35.28 ಕೋಟಿ ಇತ್ತು. ಈ ಬಾರಿ 67.55 ಕೋಟಿ ರೂ. ಘೋಷಣೆ ಮಾಡಿದ್ದಾರೆ.
ಅಭ್ಯರ್ಥಿ: ಭರತ್ ಬೊಮ್ಮಾಯಿ ಕ್ಷೇತ್ರ: ಶಿಗ್ಗಾಂವಿ, ಹಾವೇರಿ ಜಿಲ್ಲೆ ಪಕ್ಷ: ಬಿಜೆಪಿ ಒಟ್ಟು ಆಸ್ತಿ: 9.29 ಕೋಟಿ ರೂ. ಸ್ಥಿರಾಸ್ತಿ: 3.79 ಕೋಟಿ ರೂ.
(₹2.03 ಲಕ್ಷ ನಗದು, 4.05 ಲಕ್ಷ ರೂ. ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ 1.19 ಕೋಟಿ ರೂ. ಸಾರ್ವಜನಿಕ-ಖಾಸಗಿ ಕಂಪನಿಗಳಲ್ಲಿ 2.24 ಲಕ್ಷ ರೂ., ಪಾಲುದಾರಿಕೆಯಲ್ಲಿ 1.23 ಕೋಟಿ ರೂ. ಬಂಡವಾಳ, ಗೋಲ್ಡ್ ಚಿಟ್ ಫಂಡ್ನಲ್ಲಿ 70 ಸಾವಿರ, ಮ್ಯೂಚು ವಲ್ ಫಂಡ್ನಲ್ಲಿ 10.20 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. 81.61ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದು, ಯಾವುದೇ ವಾಹನವಿಲ್ಲ.) ಸ್ಥಿರಾಸ್ತಿ: 5.50 ಕೋಟಿ ರೂ.: (ಬೆಂಗಳೂರಿನಲ್ಲಿ ಒಂದು ಮನೆ, ಫ್ಲ್ಯಾಟ್ ಸೇರಿ 5.50 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಇಬ್ಬನಿ ಬಳಿ 1.43 ಲಕ್ಷ ನಗದು, ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ 56.32 ಲಕ್ಷ ರೂ. ಇದೆ. ವಿವಿಧ ಕಂಪನಿಗಳಲ್ಲಿ 33.75 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದ್ದು, ಪಾಲುದಾರಿಕೆ ವ್ಯವಹಾರದಲ್ಲಿ 31.12 ಲಕ್ಷ ರೂ. ತೊಡಗಿಸಿದ್ದಾರೆ. ಮಾರುತಿ ಸ್ವಿಫ್ಟ್ ಕಾರು, 8.16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು 3.64 ಕೋಟಿ ರೂ. ಮೌಲ್ಯದ ಚರಾಸ್ತಿಯಿದೆ. ಬೆಂಗಳೂರಿನಲ್ಲಿ ಒಂದು ಸೈಟ್, ಕೆಎಚ್ಬಿ ನಿವೇಶನ, ಫ್ಲ್ಯಾಟ್ ಸೇರಿ 2.83 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪುತ್ರ ಇದ್ಯಾನ್ ಬಳಿ 40.47 ಲಕ್ಷ ರೂ. ಮೌಲ್ಯದ ಚರಾಸ್ತಿಯಿದೆ.)
ಬೃಹತ್ ಮೆರವಣಿಗೆ ಇಂದು: ಭರತ್ ಬೊಮ್ಮಾಯಿ ಗುರುವಾರ ಶಿಗ್ಗಾಂವಿಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ತಾಯಿಯ ಸೂಚನೆ ಯಂತೆ ಒಳ್ಳೆಯ ಮುಹೂರ್ತದಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಅ. 25ರಂದು ಹಿರಿಯ ನಾಯಕರೊಂದಿಗೆ ಬೃಹತ್ ಮೆರವಣಿಗೆ ನಡೆಸಿ ಇನ್ನೊಂದು ಸೆಟ್ ನಾಮಪತ್ರ ಸಲ್ಲಿಸುತ್ತೇನೆ ಎಂದು ಭರತ್ ಬೊಮ್ಮಾಯಿ ತಿಳಿಸಿದರು.
ದುಂಡಿಗೌಡ್ರ ತಟಸ್ಥ: ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀಕಾಂತ ದುಂಡಿಗೌಡ್ರ, ಸಂಸದ ಬಸವರಾಜ ಬೊಮ್ಮಾಯಿ ತಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದು, ಪ್ರಸಕ್ತ ಚುನಾವಣೆಯಲ್ಲಿ ತಟಸ್ಥರಾಗಿರಲು ನಿರ್ಧರಿಸಿದ್ದಾರೆ.
ಅಭ್ಯರ್ಥಿ: ಬಂಗಾರು ಹನುಮಂತುಕ್ಷೇತ್ರ: ಸಂಡೂರು, ಬಳ್ಳಾರಿ ಜಿಲ್ಲೆಪಕ್ಷ: ಬಿಜೆಪಿಒಟ್ಟು ಆಸ್ತಿ: 1.07 ಕೋಟಿ ರೂ
ಬಂಗಾರು ಹನುಮಂತು ಬಳಿ 2.5 ಕೆ.ಜಿ ಚಿನ್ನಾಭರಣವಿದ್ದು, ಅವರು ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ 17. 58 ಕೋಟಿ ರೂ. ಹೊಂದಿದ್ದಾರೆ. ವಿವಿಧ ಬ್ಯಾಂಕ್ಗಳಲ್ಲಿ 2.54 ಕೋಟಿ ರೂ. ಸಾಲ ಪಡೆದಿದ್ದಾರೆ. 25 ಕೆ.ಜಿ ಬೆಳ್ಳಿಯ ವಸ್ತುಗಳೂ ಇವೆ. ಹನುಮಂತು ಐದು ಲಕ್ಷ ರೂ. ಹೊಂದಿದ್ದಾರೆ. ಪತ್ನಿ ರೂಪಶ್ರೀ ಬಳಿ 500 ಗ್ರಾಂ ಬಂಗಾರ ಹಾಗೂ 15 ಕೆಜಿ ಬೆಳ್ಳಿ ವಸ್ತುಗಳು ಇದ್ದು, ಅವುಗಳ ಒಟ್ಟಾರೆ ಮೌಲ್ಯ 62 ಲಕ್ಷ ರೂ. ಆಗಿದೆ. ತಂದೆ ಬಂಗಾರು ಸೋಮಪ್ಪ ಬಳಿ 350 ಗ್ರಾಂ ಮತ್ತು ತಾಯಿ ಬಂಗಾರು ಹುಲಿಗೆಮ್ಮ ಬಳಿ 450 ಗ್ರಾಂ ಚಿನ್ನವಿದೆ. ತಂದೆ ಬಳಿ 5 ಕೆ.ಜಿ, ತಾಯಿ ಬಳಿ 15 ಕೆ.ಜಿ ಬೆಳ್ಳಿ ವಸ್ತುಗಳಿವೆ.
ಅಭ್ಯರ್ಥಿ: ಈ. ಅನ್ನಪೂರ್ಣ ಕ್ಷೇತ್ರ: ಸಂಡೂರು, ಬಳ್ಳಾರಿ ಜಿಲ್ಲೆ ಪಕ್ಷ: ಕಾಂಗ್ರೆಸ್ ಒಟ್ಟು ಆಸ್ತಿ: 1.07 ಕೋಟಿ ರೂ.
560 ಗ್ರಾಂ ಬಂಗಾರ, ಒಂದು ಹೋಂಡಾ ಆಕ್ಟಿವ, ಕಟ್ಟಡ ಸೇರಿ ಒಟ್ಟು ಚರಾಸ್ತಿ ಹಾಗೂ ಸ್ಥಿರಾಸ್ತಿ 1.07 ಕೋಟಿ ರೂ. ಪತಿ ಈ. ತುಕಾರಾಮ್ ಹಾಗೂ ಇತರರಿಂದ 1.02 ಕೋಟಿ ರೂ. ಸಾಲವಿದೆ. ಸಂಸದ, ಪತಿ ತುಕಾರಾಮ್ ಬಳಿ 350 ಗ್ರಾಂ ಚಿನ್ನಾಭರಣ, ಕಾರು ಹಾಗೂ ನಿವೇಶನ ಸೇರಿ ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ 1.09 ಕೋಟಿ ರೂ. ಆಸ್ತಿಯಿದೆ. ಬ್ಯಾಂಕ್ ಹಾಗೂ ಇತರ ವ್ಯಕ್ತಿಗಳಿಂದ 30 ಲಕ್ಷ ರೂ. ಸಾಲ ಪಡೆಯಲಾಗಿದೆ. ಅನ್ನಪೂರ್ಣ ಮಕ್ಕಳಾದ ವಂದನಾ, ಚೈತನ್ಯ, ರಘನಂದನಾ ಕ್ರಮವಾಗಿ 120 ಗ್ರಾಂ, 40 ಗ್ರಾಂ ಹಾಗೂ ವಿವಿಧ ಬ್ಯಾಂಕ್ಗಳಲ್ಲಿ 9.72 ಲಕ್ಷ ರೂ. ಖಾತೆಯಲ್ಲಿ ಜಮೆಯಾಗಿದೆ. ಕುಟುಂಬ ಯಾವುದೇ ಜಮೀನು ಹೊಂದಿಲ್ಲ.
ರಿಯಲ್ ಎಸ್ಟೇಟ್ ಉದ್ಯಮಿ ಪಠಾಣ: ಶಿಗ್ಗಾಂವಿ ಉಪಚುನಾವಣೆ ಅಖಾಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಅಲ್ಪಸಂಖ್ಯಾತರಿಗೇ ಮಣೆ ಹಾಕಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ 35978 ಮತಗಳ ಅಂತರದಿಂದ ಸೋತಿದ್ದ ಯಾಸೀರ್ಖಾನ್ ಪಠಾಣ ಅವರನ್ನೇ ಮತ್ತೊಮ್ಮೆ ಅಭ್ಯರ್ಥಿಯನ್ನಾಗಿಸಿದೆ. ಕ್ಷೇತ್ರದಿಂದ ಈಗಾಗಲೆ ಐದು ಬಾರಿ ಸತತವಾಗಿ ಮುಸ್ಲಿಮರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ವಿಶೇಷ. ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿ ಮೂಲದ ಯಾಸೀರ್ಖಾನ್ ಪಠಾಣ ರಿಯಲ್ ಎಸ್ಟೇಟ್, ಹೋಟೆಲ್ ಉದ್ಯಮಿ ಹಾಗೂ ಕೃಷಿಕ. ಬಿಎ, ಎಲ್ಎಲ್ಬಿ ವ್ಯಾಸಂಗ ಮಾಡಿರುವ ಯಾಸೀರ್, ಕಿಕ್ ಬಾಕ್ಸಿಂಗ್ನಲ್ಲಿ ಮೂರು ಬಾರಿ ನ್ಯಾಷನಲ್ ಚಾಂಪಿಯನ್ ಕೂಡ ಆಗಿದ್ದರು. ಕಾಂಗ್ರೆಸ್ನಲ್ಲಿ ಹಲವು ಜವಾಬ್ದಾರಿ ನಿಭಾಯಿಸಿದ್ದಾರೆ.
ಎಂಟು ಶಾಸಕರು ಕಾಂಗ್ರೆಸ್ಗೆ: ಇಷ್ಟರಲ್ಲೇ ಬಿಜೆಪಿಯ ಎಂಟು ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ನನ್ನ ಮೇಲೆ ಯಾವುದೇ ಶಿಸ್ತು ಕ್ರಮ ಕೈಗೊಂಡರೂ ಭಯವಿಲ್ಲ. ನನಗೆ ನನ್ನ ಕ್ಷೇತ್ರದ ಅಭಿವೃದ್ಧಿಯಾಗಬೇಕು. ಹೀಗಾಗಿ ನಾನು ಬಿಜೆಪಿ ಶಾಸಕನಾಗಿದ್ದರೂ ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿ ಮತ್ತು ಡಿಸಿಎಂ ಅವರನ್ನು ಭೇಟಿಯಾಗುತ್ತಿರುತ್ತೇನೆ. ಶೀಘ್ರವೇ ಬೆಂಗಳೂರಿನ ಇಬ್ಬರು ಶಾಸಕರು ಸೇರಿ ಎಂಟು ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂದರು.
ಕ್ಷೇತ್ರದ ಜನ ಅಭಿವೃದ್ಧಿ ಕಡೆ ನೋಡುತ್ತಿದ್ದಾರೆ. ಮುಂದೆ ಚನ್ನಪಟ್ಟಣ ಬದಲಾವಣೆ ಕಾಣುತ್ತದೆ. ಯೋಗೇಶ್ವರ್ಗೆ ಅತಿಹೆಚ್ಚು ವೋಟ್ ಬರುವ ನಿರೀಕ್ಷೆ ಇದೆ. ಇಂದು ದೊಡ್ಡ ಸಂದೇಶ ದೇಶಕ್ಕೆ ಹೋಗಿದೆ.
| ಡಿ.ಕೆ.ಶಿವಕುಮಾರ್ ಡಿಸಿಎಂ
ಉಪ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನಾವು 136 ಮಂದಿ ಶಾಸಕರಿದ್ದೇವೆೆ. ಬಸ್ ತುಂಬಿ ತುಳುಕುತ್ತಿದೆ. ಉಪ ಚುನಾವಣೆಯಲ್ಲಿ 2-3 ಕ್ಷೇತ್ರ ಗೆದ್ದರೂ ಸಂಖ್ಯೆ ಹೆಚ್ಚಾಗಲಿದೆ. ಸೀರಿಯಸ್ ಏನಿಲ್ಲ, ಉಪ ಚುನಾವಣೆ ಮಾಡುತ್ತೇವೆ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ನಿರೀಕ್ಷಿತವಾಗಿತ್ತು. ಬಿಜೆಪಿಯಿಂದ ಸ್ಪರ್ಧೆ ಮಾಡಲು ಟಿಕೆಟ್ ಸಿಕ್ಕಿಲ್ಲ, ಹೀಗಾಗಿ ಕಾಂಗ್ರೆಸ್ ಸೇರಿದ್ದಾರೆ.
| ಸತೀಶ್ ಜಾರಕಿಹೊಳಿ ಸಚಿವ