ನ್ಯೂಸ್

ತಂಬಾಕು ಉತ್ಪನ್ನ ಕಂಪನಿ ಮೇಲೆ ಐಟಿ ದಾಳಿ: ರೋಲ್ಸ್ ರಾಯ್ಸ್​ ಸಹಿತ ಐಷಾರಾಮಿ ಕಾರುಗಳು, ಕೋಟ್ಯಂತರ ರೂ. ನಗದು ವಶ

ನವದೆಹಲಿ: ಬಂಶೀಧರ್ ಟೊಬ್ಯಾಕೋ ಕಂಪನಿಯ ಮಾಲೀಕ ಶಿವಂ ಮಿಶ್ರಾರ ಹಲವು ನಿವಾಸ, ಕಚೇರಿ ಮುಂತಾದ ಕಟ್ಟಡಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅನೇಕ ಐಷಾರಾಮಿ ಕಾರುಗಳು ಮತ್ತು ಅಪಾರ ನಗದನ್ನು ವಶಪಡಿಸಿಕೊಂಡಿದ್ದಾರೆ. ಐದು ರಾಜ್ಯಗಳ 20 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿ ಶೋಧನೆ ನಡೆಸಲಾಗಿದೆ.

ರೋಲ್ಸ್ ರಾಯ್ಸ್​ ಲಂಬೋರ್ಘಿನಿ, ಪೋರ್ಶ್ ಮುಂತಾದ ಕಾರುಗಳು ವಶಪಡಿಸಿಕೊಂಡ ವಾಹನಗಳಲ್ಲಿ ಸೇರಿವೆ. ಈ ಮೂರೂ ಕಾರುಗಳು ಲೈಸೆನ್ಸ್ ಪ್ಲೇಟ್​ಗಳ ಮೇಲೆ ‘4018’ ಸಂಖ್ಯೆಯನ್ನು ಹೊಂದಿರುವುದು ವಿಶೇಷವಾಗಿದೆ. ಐಟಿ ಇಲಾಖೆಯ 15ರಿಂದ 20 ತಂಡಗಳು ದಾಳಿ ನಡೆಸಿದ್ದವು. ದಾಳಿ ವೇಳೆ ತೆರಿಗೆ ಇಲಾಖೆ ಅಧಿಕಾರಿಗಳು ತಂಬಾಕು ಉತ್ಪನ್ನ ಕಂಪನಿಯ ಹಣಕಾಸು ಅವ್ಯವಹಾರದ ಜಾಲವನ್ನು ಪತ್ತೆ ಮಾಡಿದ್ದಾರೆ. ನಾನಾ ರಾಜ್ಯಗಳು ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಅವ್ಯವಹಾರಗಳನ್ನು ನಡೆಸಿರುವುದು ಕಂಡು ಬಂದಿದೆ.

100 ಕೋಟಿ ಅಧಿಕ ವಹಿವಾಟು:  ಕಂಪನಿ 20ರಿಂದ 25 ಕೋಟಿ ರೂಪಾಯಿ ಆದಾಯವನ್ನು ಘೋಷಿಸಿಕೊಂಡಿದೆ. ಆದರೆ ನೈಜ ವಹಿವಾಟಿನ ಮೊತ್ತ 100ರಿಂದ 150 ಕೋಟಿ ರೂಪಾಯಿ ಆಗಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿಯ ವಸಂತ ವಿಹಾರ್​ನಲ್ಲಿರುವ ಮಿಶ್ರಾರ ಮನೆಯಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಐಷಾರಾಮಿ ಕಾರುಗಳಿದ್ದವು. ಅವುಗಳಲ್ಲಿ 16 ಕೋಟಿ ರೂಪಾಯಿಯ ರೋಲ್ಸ್ ರಾಯ್್ಸ ಫಾಂಟಂ ಕೂಡ ಸೇರಿದೆ. ತಲಾ ಒಂದು ಪೋರ್ಶ್, ಮೆಕ್​ಲಾರೆನ್ ಮತ್ತು ಲಂಬೋರ್ಘಿನಿ ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ದಾಳಿಗಳ ವೇಳೆ ಅಧಿಕಾರಿಗಳು 4.5 ಕೋಟಿ ರೂಪಾಯಿ ನಗದನ್ನು ಮುಟ್ಟುಗೋಲು ಹಾಕಿಕೊಂಡು ಅನೇಕ ದಾಖಲೆಪತ್ರಗಳನ್ನು ವಶಪಡಿಸಿ ಕೊಂಡಿದ್ದಾರೆ. ಕಂಪನಿ, ಜಿಎಸ್​ಟಿ ನಿಯಮಗಳನ್ನು ಉಲ್ಲಂಘಿಸಿರುವುದು ಕೂಡ ಪತ್ತೆಯಾಗಿದೆ. ತಂಬಾಕು ವ್ಯವಹಾರದ ದಿಗ್ಗಜ ಕೆ.ಕೆ. ಮಿಶ್ರಾ ಈ ಹಗರಣದ ಕೇಂದ್ರ ಬಿಂದುವಾಗಿದ್ದಾರೆ. ಬಂಶೀಧರ್ ಟೊಬ್ಯಾಕೋ ಕಂಪನಿ ಹಲವು ಪ್ರಮುಖ ಪಾನ್​ವುಸಾಲಾ ಸಮೂಹಗಳಿಗೆ ಉತ್ಪನ್ನಗಳನ್ನು ಸರಬರಾಜು ಮಾಡುತ್ತದೆ.

ಕಾನ್ಪುರ, ದೆಹಲಿ, ಮುಂಬೈ ಮತ್ತು ಗುಜರಾತ್ ಮೊದಲಾದ ಕಡೆ ದಾಳಿ ನಡೆಸಲಾಗಿದೆ. ಕಂಪನಿಯ ವಹಿವಾಟಿನ ವರದಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ದಾಳಿ ಕಾರ್ಯಾಚರಣೆಯನ್ನು ಆಯೋಜಿಸಲಾಗಿತ್ತು.