ನ್ಯೂಸ್

ಶಿವಮೊಗ್ಗದಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದವರ ಅರೆಸ್ಟ್

ಶಿವಮೊಗ್ಗ: ಸಿಇಟಿ ಹಾಗೂ ಅಂತಿಮ ವರ್ಷದ ಪದವಿ ಪರೀಕ್ಷೆ ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ವಿರೋಧಿಸಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ಬಂದ ಎಎಸ್​ಯುಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಇಲ್ಲಿನ ವಿನೋಬನಗರ ಬಡಾವಣೆಯಲ್ಲಿರುವ ಯಡಿಯೂರಪ್ಪರ ಮನೆ ಬಳಿಗೆ ಶನಿವಾರ ಬೆಳಗ್ಗೆ ಪಿಪಿಇ ಕಿಟ್ ಧರಿಸಿಕೊಂಡು ಬಂದ ಎಎಸ್​ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸುವಲ್ಲಿ ನಿರತರಾದರು.

ಕರೊನಾ ಸೋಂಕು ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೆಚ್ಚುತ್ತಿದ್ದರೂ ಸಿಇಟಿ ಹಾಗೂ ಪದವಿ ಪರೀಕ್ಷೆ ನಡೆಸುವುದಾಗಿ ಸರ್ಕಾರ ಘೋಷಿಸಿದೆ. ಇದು ಸೂಕ್ತ ನಿರ್ಧಾರವಲ್ಲ. ತಕ್ಷಣವೇ ತನ್ನ

ನಿರ್ಧಾರ ಬದಲಿಸಬೇಕು ಎಂದು ಎಎಸ್​ಯುಐ ಕಾರ್ಯಕರ್ತರು ಆಗ್ರಹಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆ ನಡೆಸುವುದನ್ನು ಅರಿತ ಪೊಲೀಸರು ಸಿಎಂ ಮನೆ ಮುಂದೆ ಬ್ಯಾರಿಕೇಡ್ ಅಳವಡಿಸಿ ಬಾರೀ ಬಂದೋಬಸ್ತ್ ಕಲ್ಪಿಸಿದ್ದರು. ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂಘಟನೆ ಕಾರ್ಯಕರ್ತರನ್ನ ಬಂಧಿಸಿದ ಪೊಲೀಸರು ವಾಹನದಲ್ಲಿ ಠಾಣೆಗೆ ಕರೆದೊಯ್ದರು.

ಎನ್​ಎಸ್​ಯುಐ ಮುಖಂಡರಾದ ಚೇತನ್ ಗೌಡ, ಬಾಲಾಜಿ, ವಿಜಯ್ ಕುಮಾರ್, ಮಧುಸೂದನ್ ಮತ್ತಿತರರು ಭಾಗವಹಿಸಿದ್ದರು.