ಖಾನ್ ಯೂನಿಸ್ (ಗಾಜಾ ಪಟ್ಟಿ): ತಾತ್ಕಾಲಿಕ ಕದನ ವಿರಾಮ ಅಂತ್ಯಗೊಂಡ ಶುಕ್ರವಾರವೇ ಗಾಜಾ ಪಟ್ಟಿ ಮೇಲೆ ಆರಂಭಿಸಿದ ಆಕ್ರಮಣವನ್ನು ಇಸ್ರೇಲ್ ಶನಿವಾರ ತೀವ್ರಗೊಳಿಸಿದ್ದು ನಾಗರಿಕರ ಸಾವು ಹೆಚ್ಚಿ ಮಾನವೀಯ ದುರಂತದ ಆತಂಕ ಎದುರಾಗಿದೆ. ಅಲ್ಲಿ ಮಾನವೀಯ ‘ಸುನಾಮಿ’ ಸೃಷ್ಟಿಯಾಗಲಿದೆ ಎಂದು ವಿಶ್ವ ಸಂಸ್ಥೆ ಎಚ್ಚರಿಸಿದೆ. ಸಮರ ಪುನಾರಂಭ ಆದಾಗಿನಿಂದ ಕನಿಷ್ಠ 178 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಈ ನಡುವೆ, ನಾಗರಿಕರನ್ನು ರಕ್ಷಿಸಲು ಗರಿಷ್ಠ ಪ್ರಯತ್ನ ಮಾಡುವಂತೆ ಮಿತ್ರ ದೇಶ ಇಸ್ರೇಲ್ಗೆ ಅಮೆರಿಕ ಆಗ್ರಹಿಸಿದೆ. ಶುಕ್ರವಾರ ದುಬೈನಲ್ಲಿ ಅರಬ್ ದೇಶಗಳ ವಿದೇಶಾಂಗ ಸಚಿವರೊಂದಿಗೆ ನಡೆಸಿದ ಸಭೆಯ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಅಂತೋನಿ ಬ್ಲಿಂಕೆನ್, ಗಾಜಾ ಯುದ್ಧದ ವೇಳೆ ಅಮಾಯಕ ನಾಗರಿಕರ ಪ್ರಾಣ ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಖಾನ್ ಯೂನಿಸ್ನಲ್ಲಿ ಜಾಸ್ತಿ: ಇಸ್ರೇಲ್ ಶನಿವಾರ ದಾಳಿಯನ್ನು ಖಾನ್ ಯೂನಿಸ್ ಪಟ್ಟಣದಲ್ಲಿ ಹೆಚ್ಚಾಗಿ ಕೇಂದ್ರೀಕರಿಸಿತ್ತು. ನಗರ ಬಿಟ್ಟು ಹೋಗುವಂತೆ ಬೆದರಿಸಿ ಅಲ್ಲಿ ಶುಕ್ರವಾರ ವಿಮಾನದ ಮೂಲಕ ಇಸ್ರೇಲ್ ಕರಪತ್ರಗಳನ್ನು ಹಾಕಿತ್ತು. ಶುಕ್ರವಾರ ಸಂಜೆವರೆಗೆ ರಕ್ಷಣೆಗಾಗಿ ಪಲಾಯನ ಮಾಡುವ ಜನರ ಸಂಖ್ಯೆ ದೊಡ್ಡದಿರಲಿಲ್ಲ ಎಂದು ವಿಶ್ವ ಸಂಸ್ಥೆ ಹೇಳಿದೆ. ‘ಸುರಕ್ಷತೆಗಾಗಿ ಹೋಗಲು ಸ್ಥಳವೇ ಇಲ್ಲ’ ಎಂದು ಒಂದು ತಿಂಗಳ ಹಿಂದೆ ರಕ್ಷಣೆಗಾಗಿ ಉತ್ತರದ ಬೀಟ್ ಲಾಹಿಯಾ ಪಟ್ಟಣದಿಂದ ಹೆಂಡತಿ ಹಾಗೂ ಮೂವರು ಮಕ್ಕಳೊಂದಿಗೆ ಖಾನ್ ಯೂನಿಸ್ಗೆ ಓಡಿ ಬಂದಿರುವ ಎಮಾದ್ ಹಜಾರ್ ಅಳಲು ತೋಡಿಕೊಂಡಿದ್ದು ಅದು ಪ್ಯಾಲೆಸ್ತೀನಿ ಜನರ ಸಂಕಟವನ್ನು ಪ್ರತಿನಿಧಿಸುವಂತಿದೆ. ‘ಉತ್ತರ ಭಾಗದಿಂದ ನಮ್ಮನ್ನು ಓಡಿಸಿದ್ದ ಇಸ್ರೇಲ್ ಈಗ ದಕ್ಷಿಣವನ್ನೂ ತೊರೆಯುವಂತೆ ಒತ್ತಡ ಹೇರುತ್ತಿದೆ’ ಎಂದವರು ಹೇಳಿದರು.
ಕ್ಷಮೆಯಾಚನೆ: ಕಳೆದ ತಿಂಗಳು ನಡೆದ ಪ್ಯಾಲೆಸ್ತೀನಿಪರ ರ್ಯಾಲಿಯೊಂದರಲ್ಲಿ ಮಾಡಿದ ಟಿಪ್ಪಣಿಗಾಗಿ ಪ್ರಖ್ಯಾತ ಹಾಲಿವುಡ್ ನಟಿ ಸುಸಾನ್ ಸರಾಂಡನ್ ಕ್ಷಮೆಯಾಚಿಸಿದ್ದಾರೆ.
ಸತ್ತವರ ಸಂಖ್ಯೆ 15 ಸಾವಿರಕ್ಕೂ ಅಧಿಕ: ಕದನವಿರಾಮ ವಿಸ್ತರಿಸುವ ಮಾತುಕತೆ ಕಗ್ಗಂಟು ಆಗಿರುವುದರಿಂದ ಕತಾರ್ನಿಂದ ಸಂಧಾನಕಾರರನ್ನು ವಾಪಸ್ ಕರೆಸಿಕೊಳ್ಳುವುದಾಗಿ ಇಸ್ರೇಲ್ ಶನಿವಾರ ಘೋಷಿಸಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿರ್ದೇಶನದ ಮೇರೆಗೆ ದೋಹಾದಲ್ಲಿರುವ ತಮ್ಮ ತಂಡಕ್ಕೆ ವಾಪಸ್ ಬರಲು ಮೊಸ್ಸಾದ್ ಮುಖ್ಯಸ್ಥ ಡೇವಿಡ್ ಬರ್ನಿಯಾ ಸೂಚಿಸಿದ್ದಾರೆ. ಇದುವರೆಗೆ ಮೃತರ ಸಂಖ್ಯೆ 15,200ನ್ನು ದಾಟಿದೆ, ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳು ಎಂದು ಹಮಾಸ್ ಆಡಳಿತದ ಗಾಜಾದ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಅಮೆರಿಕದಿಂದ ಬಾಂಬ್ ಪೂರೈಕೆ: ಯುದ್ಧದಲ್ಲಿ ನಾಗರಿಕರನ್ನು ರಕ್ಷಿಸಬೇಕೆಂದು ಹೇಳುತ್ತಿರುವ ಅಮೆರಿಕ, ಮಿತ್ರ ದೇಶ ಇಸ್ರೇಲ್ಗೆ 2,000 ಪೌಂಡ್ ಬಂಕರ್ ಬಸ್ಟರ್ ಬಾಂಬ್ಗಳನ್ನು ಪೂರೈಸಿದೆ. ಅವುಗಳನ್ನು ನಿರಾಶ್ರಿತರ ಶಿಬಿರಗಳ ಮೇಲಿನ ದಾಳಿಯಲ್ಲಿ ಬಳಸಲಾಗಿದೆ ಎಂಬ ಆತಂಕಕಾರಿ ವರದಿ ಹೊರಬಿದ್ದಿದೆ.