ಗಾಜಾ: ಇಸ್ರೇಲ್(Israel) ಗಾಜಾದಲ್ಲಿ ಕದನ ವಿರಾಮವನ್ನು ಪುನಃ ಸ್ಥಾಪಿಸಿದೆ. ಅಲ್ಲದೆ, ಸೋಮವಾರದಿಂದ ಮಾನವೀಯ ನೆರವು ವಿತರಣೆ ಪುನರಾರಂಭಗೊಳ್ಳಲಿದೆ ಎಂದು ಘೋಷಿಸಿದೆ. ಹಮಾಸ್ ಉಗ್ರಗಾಮಿಗಳು ಇಸ್ರೇಲಿ ಸೈನಿಕರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿ ಇಸ್ರೇಲ್ ತಾತ್ಕಾಲಿಕವಾಗಿ ನೆರವು ಸಾಗಣೆಯನ್ನು ಸ್ಥಗಿತಗೊಳಿಸಿತ್ತು.
ಗಾಜಾದ ರಫಾದ ಮೇಲೆ ಭಾನುವಾರ ಇಸ್ರೇಲಿ ರಕ್ಷಣಾ ಪಡೆಗಳು (IDF) ಹಲವಾರು ಹಮಾಸ್ ನಲೆಗಳ ಮೇಲೆ ವೈಮಾನಿಕ ದಾಳಿ ಪ್ರಾರಂಭಿಸಿದವು. ಇಸ್ರೇಲಿ ಪಡೆಗಳ ಮೇಲೆ ನಡೆಸಿದ ಗುಂಡಿನ ದಾಳಿಗೆ ಪ್ರತೀಕಾರವಾಗಿ ಈ ದಾಳಿಗಳು ನಡೆದಿವೆ ಎಂದು IDF ದೃಢಪಡಿಸಿತು. ಅಲ್ಲದೆ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಉನ್ನತ ಭದ್ರತಾ ಅಧಿಕಾರಿಗಳನ್ನು ಭೇಟಿಯಾಗಿ ಮುಂದಿನ ಕದನ ವಿರಾಮ ಉಲ್ಲಂಘನೆಗಳಿಗೆ ದೃಢವಾಗಿ ಪ್ರತಿಕ್ರಿಯಿಸುವಂತೆ ಮಿಲಿಟರಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ರಷ್ಯಾ ತೈಲ ಖರೀದಿಸುವುದನ್ನು ಭಾರತ ಮುಂದುವರಿಸಿದರೆ ಭಾರೀ ಸುಂಕ ಪಾವತಿಸಬೇಕಾಗುತ್ತದೆ: Donald Trump ಎಚ್ಚರಿಕೆ
ಇಸ್ರೇಲ್ನ 28 ಮೃತ ಒತ್ತೆಯಾಳುಗಳ ಅವಶೇಷಗಳನ್ನು ಹಮಾಸ್ಹಿಂದಿರುಗಿಸುವ ತನ್ನ ಕದನ ವಿರಾಮ ಬಾಧ್ಯತೆಯನ್ನು ಹೇಗೆ ಪೂರೈಸುತ್ತದೆ ಎಂಬುದನ್ನು ಇಸ್ರೇಲ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ನೆತನ್ಯಾಹು ಕಚೇರಿ ಹೇಳಿಕೆ ನೀಡಿದೆ. ಅಲ್ಲದೆ, ಇಲ್ಲಿಯವರೆಗೆ, ಹಮಾಸ್ 13 ಶವಗಳನ್ನು ಹಿಂದಿರುಗಿಸಿದೆ. ಇವುಗಳಲ್ಲಿ 12 ಇಸ್ರೇಲಿ ಒತ್ತೆಯಾಳುಗಳೆಂದು ಗುರುತಿಸಲಾಗಿದೆ. ಅದರೆ, ಇಸ್ರೇಲಿ ಅಧಿಕಾರಿಗಳ ಪ್ರಕಾರ, ಒಂದು ಶವ ಒತ್ತೆಯಾಳುವಿನದ್ದಾಗಿರಲಿಲ್ಲ. ಹೆಚ್ಚುವರಿ ಅವಶೇಷಗಳನ್ನು ಪತ್ತೆಹಚ್ಚಲು ವಿಶೇಷ ಉಪಕರಣಗಳು ಬೇಕಾಗಿವೆ ಎಂದು ಹಮಾಸ್ ಹೇಳಿಕೊಂಡಿದೆ. ಆದರೆ ಇಸ್ರೇಲ್ ಗುಂಪು ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನ ಶವಗಳನ್ನು ಹೊಂದಿದೆ ಎಂದು ಶಂಕಿಸಿದೆ.
ಅಂತರ್ರಾಷ್ಟ್ರೀಯ ಮಧ್ಯವರ್ತಿಗಳೊಂದಿಗೆ ಎರಡನೇ ಹಂತದ ಕದನ ವಿರಾಮದ ಮಾತುಕತೆಗಳು ಪ್ರಾರಂಭವಾಗಿವೆ ಎಂದು ಹಮಾಸ್ ದೃಢಪಡಿಸಿದೆ. ಅಲ್ಲದೆ, ಯಾವುದೇ ಹೆಚ್ಚಿನ ಒಪ್ಪಂದಗಳಿಗೆ ರಾಷ್ಟ್ರೀಯ ಒಮ್ಮತದ ಅಗತ್ಯವಿದೆ ಎಂದು ಹಮಾಸ್ ವಕ್ತಾರ ಹಜೆಮ್ ಖಾಸೆಮ್ ಹೇಳಿದ್ದಾರೆ. ಹಮಾಸ್ ತನ್ನ ಸ್ಥಾನವನ್ನು ಬಲಪಡಿಸಲು ಮಾತುಕತೆಗಳಲ್ಲಿ ತೊಡಗಿಸಿಕೊಂಡಿದೆ. ಆದರೆ, ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಗಮನಾರ್ಹವಾಗಿ, ಯುದ್ಧ ಮುಗಿದ ನಂತರ ಹಮಾಸ್ ಗಾಜಾದಲ್ಲಿ ಆಡಳಿತ ಪ್ರಾಧಿಕಾರದ ಭಾಗವಾಗುವುದಿಲ್ಲ ಎಂದು ಖಾಸೆಮ್ ಹೇಳಿದ್ದಾರೆ. (ಏಜೆನ್ಸೀಸ್)