ನವದೆಹಲಿ: ಇಸ್ರೇಲ್ ಮೇಲೆ ನಿನ್ನೆ ಬೆಳ್ಳಂಬೆಳಗ್ಗೆ ನಡೆದ ಹಮಾಸ್ ಉಗ್ರರ ದಾಳಿ ರಣಭೀಕರ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ಇಸ್ರೇಲಿಗರು ಭಾರಿ ಸಾವು-ನೋವಿಗೆ ಒಳಗಾಗಿದ್ದಾರೆ. ಮೊದಲ ದಿನ ನೂರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರ ಕುರಿತು ನಿನ್ನೆ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಇದೀಗ ಸತ್ತವರ ಸಂಖ್ಯೆ 400ಕ್ಕೂ ಅಧಿಕ ಎನ್ನಲಾಗಿದೆ.
ಒಂದು ದಿನ ಕಳೆಯುವಷ್ಟರಲ್ಲಿ 400ಕ್ಕೂ ಅಧಿಕ ಇಸ್ರೇಲಿಗರು ಬಲಿಯಾಗಿದ್ದು, ಆ ಪೈಕಿ ಸೈನಿಕರು ಹಾಗೂ ಪೊಲೀಸರು ಕೂಡ ಇದ್ದರು ಎಂಬುದಾಗಿ ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಮತ್ತೊಂದೆಡೆ ಗಾಯಾಳುಗಳ ಸಂಖ್ಯೆ 2 ಸಾವಿರಕ್ಕೂ ಅಧಿಕ ಎನ್ನಲಾಗಿದೆ.
ಸುಮಾರು 2 ಸಾವಿರ ಮಂದಿ ಗಾಯಗೊಂಡಿದ್ದು ಅವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆ ಪೈಕಿ 330 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 20 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಉಳಿದಿರುವ ಉಗ್ರರ ಸದೆಬಡಿಯಲು ಇಸ್ರೇಲ್ ರಕ್ಷಣಾ ಪಡೆ ಇನ್ನೂ ಕಾರ್ಯನಿರತವಾಗಿದೆ ಎಂದೂ ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಡಕ್ ಎಚ್ಚರಿಕೆ ನೀಡಿದ್ದು, ಇಸ್ರೇಲ್ ರಕ್ಷಣಾ ಪಡೆ ಭಯಂಕರ ಯುದ್ಧ ಆರಂಭಿಸಿದ್ದು, ಅದು ತನ್ನೆಲ್ಲ ಶಕ್ತಿಯನ್ನು ಪ್ರಯೋಗಿಸಿ ಹಮಾಸ್ ಉಗ್ರರನ್ನು ಸದೆಬಡಿಯಲಿದೆ ಎಂದು ಹೇಳಿದ್ದಾರೆ.
ಇದು ಯುದ್ಧಾಪರಾಧ, ಇದಕ್ಕೆ ಯಾರೇ ಕಾರಣವಾಗಿದ್ದರೂ ಅವರು ಅದಕ್ಕೆ ತಕ್ಕ ಬೆಲೆ ತೆರಲೇಬೇಕಾಗುತ್ತದೆ ಎಂದು ಇಸ್ರೇಲ್ ರಕ್ಷಣಾ ಪಡೆಯ ವಕ್ತಾರ ಅಡ್ಮಿರಲ್ ಡೇನಿಯಲ್ ಹಗಾರಿ ವಿಡಿಯೋ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.