ನ್ಯೂಸ್

ಇರಾನ್​ ಮೇಲೆ ಸೇಡು ತೀರಿಸಿಕೊಂಡ ಇಸ್ರೇಲ್​; ಮತ್ತೊಂದು ಭೀಕರ ಯುದ್ಧದ ಭೀತಿ

ವಾಷಿಂಗ್ಟನ್: ಇಸ್ರೇಲ್​ ಹಾಗೂ ಇರಾನ್​ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಇದೀಗ ಇರಾನ್​ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ ನಡೆಸಿದೆ. ಕಳೆದ ಶನಿವಾರ ತಡರಾತ್ರಿ ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಆ ಬಳಿಕ ಇರಾನ್ ಮೇಲೆ ದಾಳಿ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು.

ಕಳೆದ ವಾರ ನಡೆದ ಇರಾನ್​ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಇಸ್ರೇಲ್​ ಸೇಡು ತೀರಿಸಿಕೊಂಡಿದೆ. ಇದೇ ವೇಳೆ ಇರಾನ್, ಸಿರಿಯಾ ಮತ್ತು ಇರಾಕ್‌ನಲ್ಲಿ ಸ್ಫೋಟದ ಸದ್ದು ಕೇಳಿ ಬಂದಿದೆ. ಜೆರುಸಲೆಮ್ ಪೋಸ್ಟ್ ವರದಿಯ ಪ್ರಕಾರ, ಶುಕ್ರವಾರ ಬೆಳಿಗ್ಗೆ ಮಧ್ಯ ಇರಾನ್‌ನ ಇಸ್ಫಹಾನ್, ದಕ್ಷಿಣ ಸಿರಿಯಾದ ಅಸ್-ಸುವೈದಾ ಗವರ್ನರೇಟ್ ಮತ್ತು ಬಾಗ್ದಾದ್ ಪ್ರದೇಶದಲ್ಲಿ ಮತ್ತು ಇರಾಕ್‌ನ ಬಾಬಿಲ್ ಗವರ್ನರೇಟ್‌ನಲ್ಲಿ ಸ್ಫೋಟದ ಸದ್ದು ಕೇಳಿಸಿತು.

ಇರಾನ್ ದಾಳಿಯ ನಂತರ, ಅಮೆರಿಕ ಮತ್ತು ಬ್ರಿಟನ್ ಗುರುವಾರ ಇರಾನ್ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿವೆ. ಸಿರಿಯಾದಲ್ಲಿರುವ ಇರಾನ್ ರಾಯಭಾರಿ ಕಚೇರಿ ಮೇಲೆ ಶಂಕಿತ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ನಂತರ ಪರಿಸ್ಥಿತಿ ಹದಗೆಟ್ಟಿದೆ. ಇರಾನ್ ಇತ್ತೀಚೆಗೆ ಇಸ್ರೇಲ್ ಮೇಲೆ ಡಜನ್ ಗಟ್ಟಲೆ ಡ್ರೋನ್ ಮತ್ತು ಕ್ಷಿಪಣಿಗಳಿಂದ ದಾಳಿ ನಡೆಸಿತ್ತು.

ಇಸ್ರೇಲ್​ ಮೇಲೆ ಇರಾನ್ ಕ್ಷಿಪಣಿ ಹಾಗೂ ಡ್ರೋನ್​ ದಾಳಿ ನಡೆಸಿದೆ. ಕಿಲ್ಲರ್ ಡ್ರೋನ್​ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಕ್ರೂಸ್​ ಕ್ಷಿಪಣಿಗಳು ಸೇರಿದಂತೆ ಇರಾನ್ 200ಕ್ಕೂ ಹೆಚ್ಚು ಬಗೆಯ ಡ್ರೋನ್​ ದಾಳಿಗಳನ್ನು ನಡೆಸಿದೆ.  ಇರಾನ್ ದಾಳಿಯ ನಂತರ ಇಸ್ರೇಲ್ ರಕ್ಷಣಾ ಪಡೆ ತೀವ್ರ ಕಟ್ಟೆಚ್ಚರವಹಿಸಿದೆ. ಇಸ್ರೇಲಿ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲೇ ಡ್ರೋನ್ ಮತ್ತು ಕ್ಷಿಪಣಿದಾಳಿಗಳನ್ನು ತಡೆಹಿಡಿಯಲಾಗಿತ್ತು.