ಜಮ್ಮು ಮತ್ತು ಕಾಶ್ಮೀರ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಈಗ ಭಯೋತ್ಪಾದನೆ ಉದ್ದೇಶಗಳ ಈಡೇರಿಕೆಗಾಗಿ ಕಾಶ್ಮೀರ ಕಣಿವೆಯಲ್ಲಿನ ಬಾಲಕಿಯರು, ಮಹಿಳೆಯರು ಹಾಗೂ ಬಾಲಾಪರಾಧಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಉಗ್ರರು ಪಾಕಿಸ್ತಾನದಿಂದ ಸಂದೇಶ ಪಡೆಯಲು ಬಳಸುತ್ತಿದ್ದ 14 ಆ್ಯಪ್ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ
ಸೇನಾ ವಿಭಾಗದ ಮುಖ್ಯಸ್ಥ ಲೆ.ಜ. ಅಮರ್ ದೀಪ್ ಸಿಂಗ್ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಈ ಆಘಾತಕಾರಿ ಮಾಹಿತಿ ನೀಡಿದ್ದಾರೆ. 'ಉಗ್ರ ಕೃತ್ಯಗಳನ್ನು ನಡೆಸಲು ಅನುಸರಿಸುವ ಸಾಂಪ್ರದಾಯಿಕ ಸಂವಹನ ವಿಧಾನಗಳಿಗೆ ಐಎಸ್‌ಐ ವಿದಾಯ ಹೇಳಿದೆ, ಸಂದೇಶ ರವಾನೆಗೆ ಮೊಬೈಲ್, ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳ ಬಳಕೆ ಗಣನೀಯವಾಗಿ ತಗ್ಗಿದೆ. ಅದರ ಬದಲಾಗಿ ಹೊಸ ದಾರಿ ಕಂಡುಕೊಳ್ಳಲಾಗಿದೆ, ಶಸ್ತಾಸ್ತ್ರಗಳ ಸಾಗಣೆ, ಮಾದಕವಸ್ತುಗಳ ಸಾಗಾಟ, ವಿಧ್ವಂಸಕ ಯೋಜನೆಗಳ ಸಂದೇಶಗಳನ್ನು ಕಳುಹಿಸಲು ಮಹಿಳೆಯರು, ಹುಡುಗಿಯರು, ಬಾಲಾಪರಾಧಿಗಳನ್ನು ಬಳಕೆ ಮಾಡುವ ಆಘಾತಕಾರಿ ತಂತ್ರ ಅನುಸರಿಸುತ್ತಿದೆ. ಕೆಲವು ಪ್ರಕರಣಗಳನ್ನು ಭೇದಿಸಿ, ತನಿಖೆ ನಡೆಸಿದ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದೆ' ಎಂದು ಅಮರ್‌ದೀಪ್ ಸಿಂಗ್ ಹೇಳಿದ್ದಾರೆ.
ಐಎಸ್‌ಐ ಜತೆಗೆ ಪಾಕ್ ಮೂಲದ ಉಗ್ರ ಸಂಘಟನೆಗಳ ಮುಖ್ಯಸ್ಥರೂ ಇದೇ ತಂತ್ರದ ಮೊರೆ ಹೋಗುತ್ತಿದ್ದಾರೆ. ಈ ರೀತಿಯ ಭಯೋತ್ಪಾದನೆ ಅತ್ಯಂತ ಗಂಭೀರ ಹಾಗೂ ಕಳವಳಕಾರಿ, ಈ ಜಾಲವನ್ನು ಪತ್ತೆ ಹಚ್ಚಿ ಇಂಥ ಅಪಾಯಕಾರಿ ಟ್ರೆಂಡ್ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಭೂಸೇನೆ ಮತ್ತು ಇತರ ತನಿಖಾ ಸಂಸ್ಥೆಗಳು ಪ್ರಯತ್ನ ನಡೆಸುತ್ತಿವೆ ಎಂದೂ ಅವರು ತಿಳಿಸಿದ್ದಾರೆ.