ಪೋಖ್ರನ್ : ಭಾರತದ ರಕ್ಷಣಾ ಸಂಸ್ಥೆಗಳ ಮೇಲೆ ಗೂಢಚಾರಿಕೆ ನಡೆಸುತ್ತಾ ಪಾಕಿಸ್ತಾನಕ್ಕೆ ಮತ್ತು ಐಎಸ್ಐಗೆ ಮಹತ್ವದ ಮಾಹಿತಿ ಮತ್ತು ದಾಖಲಾತಿಗಳನ್ನು ಒದಗಿಸುತ್ತಿದ್ದ ಐಎಸ್ಐ ಏಜೆಂಟ್ ಒಬ್ಬನನ್ನು ರಾಜಸ್ತಾನದ ಪೋಖ್ರನ್ನಲ್ಲಿ ಬಂಧಿಸಲಾಗಿದೆ. ಹಬೀಬುರ್ ರೆಹಮಾನ್ ಎಂಬ ಈ ಏಜೆಂಟು ನೀಡಿದ ಮಾಹಿತಿಯ ಮೇರೆಗೆ ಸೇನಾ ಸಿಬ್ಬಂದಿಯೊಬ್ಬರು ಅಪರಾಧದಲ್ಲಿ ಭಾಗಿಯಾಗಿರುವ ಅನುಮಾನ ಎದ್ದಿದೆ ಎನ್ನಲಾಗಿದೆ.
ಪಾಕಿಸ್ತಾನದ ಐಎಸ್ಐಗಾಗಿ ಕೆಲಸ ಮಾಡುತ್ತಿದ್ದು, ಆ ದೇಶಕ್ಕೂ ಭೇಟಿ ನೀಡಿದ್ದಾನೆ ಎನ್ನಲಾದ ರೆಹಮಾನ್ನನ್ನು, ದೆಹಲಿ ಅಪರಾಧ ವಿಭಾಗದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆತನ ಮೇಲೆ ಅಫಿಶಿಯಲ್ ಸೀಕ್ರೆಟ್ಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೆಹಮಾನ್ ಬಳಿಯಿಂದ ಸೇನಾ ಪ್ರದೇಶಗಳ ವಿಶ್ವಸನೀಯ ದಾಖಲಾತಿಗಳು ಮತ್ತು ನಕ್ಷೆಗಳು ಲಭ್ಯವಾಗಿವೆ. ಇವುಗಳನ್ನು ಆಗ್ರಾದಲ್ಲಿ ಪೋಸ್ಟಿಂಗ್ ಇರುವ ಸೇನಾ ಸಿಬ್ಬಂದಿ ಪರಂಜೀತ್ ಕೌರ್ ಎಂಬುವರು ತನಗೆ ನೀಡಿದರು ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ. ಪ್ರಸ್ತುತ, ಸೇನಾ ಅಧಿಕಾರಿಗಳು ಕೌರ್ ಅವರನ್ನು ವಿಚಾರಣೆ ಮಾಡುತ್ತಿದ್ದು, ಸದ್ಯದಲ್ಲೇ ಮುಂದಿನ ತನಿಖೆಗಾಗಿ ದೆಹಲಿ ಪೊಲೀಸರಿಗೆ ಒಪ್ಪಿಸಲಾಗುವುದು ಎನ್ನಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಪೋಖ್ರನ್ ಆರ್ಮಿ ಬೇಸ್ ಕ್ಯಾಂಪಿಗೆ ತರಕಾರಿಗಳನ್ನು ಸರಬರಾಜು ಮಾಡುತ್ತಿದ್ದ ರೆಹಮಾನ್, ಈ ಸೇನಾ ದಾಖಲಾತಿಗಳನ್ನು ಕಮಲ್ ಎಂಬುವವನಿಗೆ ಕೊಡುವವನಿದ್ದ. ಈ ನಿಟ್ಟಿನಲ್ಲಿ ದೊಡ್ಡ ರಾಕೆಟ್ ಇರುವ ಶಂಕೆಯಿದ್ದು, ಇತರ ಕೆಲವು ಜನರನ್ನೂ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)