ರೋಗ ಕಾರಣ ಹಲವು: ಆಹಾರವನ್ನು ಸೇವಿಸದಿರುವುದು, ಮೊದಲು ಸೇವಿಸಿದ ಆಹಾರ ಜೀರ್ಣವಾಗುವ ಮೊದಲೇ ಪುನಃ ಆಹಾರ ತೆಗೆದುಕೊಳ್ಳುವುದು, ಅತಿಯಾದ ಪ್ರಮಾಣದಲ್ಲಿ ಹಾಗೂ ಆಗಾಗ ಆಹಾರವನ್ನು ಸೇವಿಸುವುದು, ಅಕಾಲದಲ್ಲಿ ಭೋಜನ ಮಾಡುವುದು, ಒಮ್ಮೆ ಕಡಿಮೆ, ಒಮ್ಮೆ ಹೆಚ್ಚು ಹೀಗೆ ವಿಷಮಾಹಾರ ಸೇವಿಸುವುದು, ಶರೀರಕ್ಕೆ ಒಗ್ಗದ ಅಸಾತ್ಮ್ಯ ಆಹಾರ ಸ್ವೀಕರಿಸುವುದು, ಜೀರ್ಣಿಸಲು ಕಷ್ಟಕರವಾದ ಒಣ ಆಹಾರವನ್ನು ರೂಢಿ ಮಾಡಿಕೊಳ್ಳುವುದು, ಹಸಿವೆ ಬಾಯಾರಿಕೆಗಳಾದಾಗ ಆಹಾರ ಪಾನೀಯಗಳತ್ತ ಗಮನ ನೀಡದೆ ಹಸಿದುಕೊಂಡೇ ಇದ್ದು ಬಿಡುವುದು, ಸತ್ತ್ವ ಪೋಷಕಾಂಶಗಳಿಲ್ಲದ ಊಟ ಮಾಡುವುದು, ಒಂದಕ್ಕೊಂದು ಪೂರಕವಾಗಿರದೆ ವಿರುದ್ಧ ಗುಣ ಸ್ವಭಾವಗಳ ಆಹಾರದ ಮೊರೆ ಹೋಗುವುದು, ಆಯಾ ಪ್ರದೇಶದ ಆಹಾರವನ್ನು ಬಿಟ್ಟು ಬೇರೆ ದೇಶ ಪ್ರದೇಶಗಳ ಆಹಾರಗಳತ್ತ ನಾಲಿಗೆ ಚಾಚುವುದು, ಕಾಲಕ್ಕನುಗುಣವಾಗಿ ಬೆಳೆಯುವ ಧವಸಧಾನ್ಯ ಹಣ್ಣುಗಳಲ್ಲದೆ ಉಳಿದವುಗಳ ನಿತ್ಯಸೇವನೆ, ರೋಗಗಳಿಂದ ಬಳಲುತ್ತಿದ್ದಾಗ ಪಥ್ಯಾಹಾರದ ಕಡೆ ಗಮನಹರಿಸದೆ ಕೇವಲ ಔಷಧಗಳನ್ನು ಅವಲಂಬಿಸುವುದು, ಅನವಶ್ಯಕವಾಗಿ ಔಷಧಗಳನ್ನು ಅತಿಯಾಗಿ ಬಳಕೆ ಮಾಡುವುದು, ನಾನಾ ಕಾರಣಗಳಿಂದ ಜೀರ್ಣಶಕ್ತಿಯು ಕುಂದಿರುವುದು, ಸದಾ ಶೋಕ, ಆತಂಕ, ಉದ್ವೇಗಗಳಿಂದ ಮನಸ್ಸು ವ್ಯಾಕುಲವಾಗಿರುವುದು, ಪರಿಸರ ಶುಭ್ರ ಶುದ್ಧವಾಗಿ ಇಲ್ಲದಿರುವುದು, ವಾತ-ಪಿತ್ತಗಳನ್ನು ಹೆಚ್ಚಿಸುವ ಆಹಾರವಸ್ತುಗಳ ಅತಿಸೇವನೆ, ಮದ್ಯಪಾನ, ಧೂಮಪಾನ, ಋತುಗಳಿಗೆ ಹಾಗೂ ನಮ್ಮ ದೇಹಪ್ರಕೃತಿಗೆ ಸರಿಯಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳದಿರುವುದೇ ಮೊದಲಾದ ಕಾರಣಗಳಿಂದ ಜಠರದ ಅಗ್ನಿ ಶಕ್ತಿಯು ಕಡಿಮೆಯಾಗಿ ಪಚನಕಾರ್ಯದಲ್ಲಿ ವ್ಯತ್ಯಯ ಉಂಟಾಗಿ ಕ್ರಮೇಣ ಗ್ರಹಣೀರೋಗ ಕಾಣಿಸಿಕೊಳ್ಳುತ್ತದೆ.
ಪರಿಹಾರ ಉಪಾಯ: ಮೇಲೆ ಹೇಳಿದ ರೋಗಕಾರಣಗಳನ್ನೆಲ್ಲ ಸರಿಪಡಿಸಿಕೊಳ್ಳುವುದು ಮೊದಲ ಉಪಾಯ. ಎಲ್ಲಾ ರೋಗಗಳಿಗೂ ಮೂಲ ಕಾರಣ ಮಂದಗತಿಯಲ್ಲಿರುವ ಜಠರಾಗ್ನಿ ಎಂಬುದಾಗಿ ಆಯುರ್ವೆದ ಹೇಳಿದ್ದು ಈ ಗ್ರಹಣೀರೋಗದಲ್ಲಂತೂ ಹದಗೆಟ್ಟ ಜೀರ್ಣ ಪ್ರಕ್ರಿಯೆಯೇ ರೋಗದ ಮೂಲ ಕಾರಣ ಹಾಗೂ ನೇರಕಾರಣ. ಆಹಾರ, ನಿದ್ರೆ, ವ್ಯಾಯಾಮಗಳನ್ನು ಒಳಗೊಂಡಂತೆ ಜೀವನಶೈಲಿಯನ್ನು ಸರಿಪಡಿಸಿಕೊಳ್ಳುವುದು ಎರಡನೇ ಹೆಜ್ಜೆ. ತಿಳಿಯಾದ ಸದೃಢವಾದ, ಸ್ಥಿರವಾದ ಮನಸ್ಸನ್ನು ಹೊಂದಲು ಧ್ಯಾನ, ಪ್ರಾಣಾಯಾಮ, ಸೂರ್ಯನಮಸ್ಕಾರ, ಯೋಗಾಸನಗಳಲ್ಲಿ ಭುಜಂಗಾಸನ, ಪಶ್ಚಿಮೋತ್ಥಾಸನ, ಮತ್ಸೆ್ಯೕಂದ್ರಾಸನ, ಸರ್ವಾಂಗಾಸನ ಹಾಗೂ ಮಯೂರಾಸನಗಳ ಅನುಷ್ಠಾನ ನಿತ್ಯ ನಿಯಮಿತ ನಿಗದಿತ ನಡಿಗೆ-ವ್ಯಾಯಾಮಗಳ ಅಳವಡಿಕೆ ಇವೆಲ್ಲವೂ ರೋಗ ಪರಿಹಾರಕ್ಕೆ ಪೂರಕವಾಗಿವೆ. ಆಹಾರ ಸೇವನೆಯ ಪಾತ್ರವಹಿಸುತ್ತದೆ. ದ್ರವಾಹಾರ, ಬೇಗನೆ ಜೀರ್ಣಗೊಳ್ಳುವ ಲಘುವಾದ ಆಹಾರ ಪದಾರ್ಥಗಳು, ಯಥೋಚಿತ ಮಜ್ಜಿಗೆಯ ಬಳಕೆ ಬಹುಮೌಲ್ಯವನ್ನು ಹೊಂದಿದೆ. ಹಾಲಿನ ಉಪಯೋಗವನ್ನು ವರ್ಜಿಸಬೇಕು. ಖಾರ ಹಾಗೂ ಕಹಿ ರಸವುಳ್ಳ ಪದಾರ್ಥಗಳನ್ನು ಬಿಟ್ಟು ಉಳಿದ ಆಹಾರ ದ್ರವ್ಯಗಳು ಅನುಕೂಲಕಾರಿಯಾಗಿವೆ. ಆಯುರ್ವೆದ ಹೇಳಿದ ಯೂಷ-ಯವಾಗುಗಳೆಂಬ ಆಹಾರ ರೂಪದ ಔಷಧಗಳು, ಪಂಚಕೋಲ ದ್ರವ್ಯದ ಸೂಪ್, ಹೀರೆಕಾಯಿ, ಪಡುವಲಕಾಯಿ, ಸೋರೆಕಾಯಿ, ಬೂದಗುಂಬಳಕಾಯಿ, ಬೆಂಡೆಕಾಯಿ, ಸೌತೆಕಾಯಿ, ಮೂಲಂಗಿ, ನವಿಲುಕೋಸು, ತೊಂಡೆಕಾಯಿ, ಸೀಮೆಬದನೆ ಮುಂತಾದ ತರಕಾರಿಗಳು, ಪಪ್ಪಾಯ, ಖರಬೂಜ, ಮೂಸಂಬಿ, ಪೇರ್, ಸೇಬುಹಣ್ಣುಗಳು, ತೆಂಗಿನಕಾಯಿ, ಬೇಳೆಗಳಲ್ಲಿ ಹೆಸರುಬೇಳೆಯ ಉಪಯೋಗ ಹಿತವಾಗಿರುತ್ತದೆ. ಜೀರ್ಣಶಕ್ತಿ ವೃದ್ಧಿಗೊಳಿಸುವ ಅನೇಕ ಔಷಧಿಯುಕ್ತ ಘೃತಗಳು, ದೀಪನ, ಪಾಚನ ಹಾಗೂ ಗ್ರಾಹೀ ಗುಣಧರ್ಮವುಳ್ಳ ಔಷಧೀಯ ಸಸ್ಯಗಳ ಹಲವಾರು ಔಷಧಿಗಳು, ಕ್ಷಾರಗುಣದ ಔಷಧಿಗಳು, ಕೊಡಸಿಗೆ, ಶುಂಠಿ, ಜಾಯಿಕಾಯಿ, ಬಿಲ್ವಫಲ ಮೊದಲಾದ ಅನೇಕ ಔಷಧಿಗಳು, ಪಂಚಕರ್ಮಗಳಲ್ಲಿ ಸ್ನೇಹನ, ಸ್ವೇದನ, ವಮನ, ವಿರೇಚನ ಹಾಗೂ ಬಸ್ತಿ ಚಿಕಿತ್ಸೆಗಳನ್ನು ವೈದ್ಯರ ವಿವೇಚನೆಗೆ ಅನುಸಾರವಾಗಿ ನೀಡಿದರೆ ಗ್ರಹಣೀರೋಗವನ್ನು ಗೆಲ್ಲಬಹುದು. ಗ್ರಹಣೀರೋಗಕ್ಕೆ ಇದುವೇ ಪರಿಹಾರ.