ಪ್ರೀತಿ ಮತ್ತು ಮೋಹದ ನಡುವಿನ ವ್ಯತ್ಯಾಸವೇನು? 
ನ್ಯೂಸ್

ಟೀನೇಜ್‌ನಲ್ಲಿ ಲವ್ ಆಗೋದು ತಪ್ಪಾ?; ಪ್ರೀತಿ ಮತ್ತು ಆಕರ್ಷಣೆಯ ನಡುವಿನ ವ್ಯತ್ಯಾಸವೇನು? | Teenage Love

ಹದಿಹರೆಯದ ಪ್ರೀತಿ ಬರೀ ಆಕರ್ಷಣೆಯೇ? ಹಾರ್ಮೋನ್‌ಗಳು, ಮೆದುಳಿನ ಬೆಳವಣಿಗೆ ಪ್ರೀತಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಪ್ರೀತಿ ಮತ್ತು ಮೋಹದ ನಡುವಿನ ವ್ಯತ್ಯಾಸವೇನು?

Love and Attraction: ಟೀನೇಜ್‌ನಲ್ಲಿ ಯಾರ ಮೇಲಾದ್ರೂ ಕ್ರಶ್ ಆಗೋದು, ಅವರ ಜತೆ ಮಾತಾಡಬೇಕು ಅನಿಸೋದು, ಅವರ ಮೆಸೇಜ್‌ಗಾಗಿ ಕಾಯೋದು ಇದೆಲ್ಲ ಕಾಮನ್. ಇದನ್ನೇ ಹಲವರು ಪ್ರೀತಿ ಅಂತ ಅಂದುಕೊಳ್ತಾರೆ. ಆದ್ರೆ ಮನೆಯವರು, ಹಿರಿಯರು ಮಾತ್ರ, “ಅದೆಲ್ಲ ಪ್ರೀತಿ ಅಲ್ಲ, ವಯಸ್ಸಿನ ಆಕರ್ಷಣೆ ಅಷ್ಟೇ” ಅಂತ ಹೇಳುತ್ತಾರೆ. ಹಾಗಾದ್ರೆ ಹದಿಹರೆಯದಲ್ಲಿ ಆಗೋ ಪ್ರೀತಿ ನಿಜಕ್ಕೂ ಆಕರ್ಷಣೆ ಮಾತ್ರನಾ? ಅಥವಾ ಆ ವಯಸ್ಸಿನಲ್ಲೂ ನಿಜವಾದ ಪ್ರೀತಿ ಹುಟ್ಟೋಕೆ ಸಾಧ್ಯನಾ?

ಹದಿಹರೆಯದಲ್ಲಿ ದೇಹದಲ್ಲಿ ಹಾರ್ಮೋನ್‌ಗಳ ಬದಲಾವಣೆ ಆಗುತ್ತೆ. ಈಸ್ಟ್ರೋಜನ್‌, ಟೆಸ್ಟೋಸ್ಟೆರಾನ್‌ ಸೇರಿದಂತೆ ಹಾರ್ಮೋನ್‌ಗಳು ದೈಹಿಕ ಬೆಳವಣಿಗೆ ಮತ್ತು ಆಕರ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದೇ ವಯಸ್ಸಿನಲ್ಲಿ ಪ್ರೀತಿ, ಇಷ್ಟ, ಅಸೂಯೆ, ಬೇಸರದಂಥ ಭಾವನೆಗಳೂ ಜಾಸ್ತಿಯಾಗಿರಬಹುದು.

ಹದಿಹರೆಯದಲ್ಲಿ ಭಾವನೆಗಳು ಯಾಕೆ ಇಷ್ಟು ತೀವ್ರ?

ಇದಕ್ಕೆ ಮೆದುಳಿನ ಬೆಳವಣಿಗೆಯೂ ಒಂದು ಕಾರಣ. ಭಾವನೆಗಳಿಗೆ ಸಂಬಂಧಿಸಿದ ಮೆದುಳಿನ ಭಾಗಗಳು ಸಕ್ರಿಯವಾಗಿರುತ್ತವೆ. ಆದರೆ ಒಂದು ನಿರ್ಧಾರ ತೆಗೆದುಕೊಳ್ಳುವ ಮೊದಲು ಅದರ ಪರಿಣಾಮದ ಬಗ್ಗೆ ಯೋಚಿಸಲು ಸಹಾಯ ಮಾಡುವ ಭಾಗಗಳು ಇನ್ನೂ ಬೆಳವಣಿಗೆಯಾಗುತ್ತಿರುತ್ತವೆ. ಹೀಗಾಗಿ ಕೆಲವೊಮ್ಮೆ ಭಾವನೆಗಳಲ್ಲೇ ಮುಳುಗಿ, ಯೋಚನೆ ಮಾಡದೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಪ್ರೀತಿ ಮತ್ತು ಆಕರ್ಷಣೆ ಎರಡೂ ಒಂದೇ ಅಲ್ಲ

ಯಾರದ್ದೋ ನಗು, ಮಾತು, ಅಂದ-ಚಂದ ಅಥವಾ ಸ್ಟೈಲ್‌ ಇಷ್ಟವಾಗಬಹುದು. ಅವರನ್ನು ಮತ್ತೆ ಮತ್ತೆ ನೋಡಬೇಕು, ಅವರ ಜತೆ ಮಾತನಾಡಬೇಕು ಅನ್ನಿಸಬಹುದು. ಇದು ಸಹಜವಾದ ಆಕರ್ಷಣೆಯಾಗಿರಬಹುದು. ಒಬ್ಬರ ಬಗ್ಗೆ ತುಂಬಾ ತೀವ್ರವಾದ ಒಲವು ಮೂಡುವುದನ್ನು ಕೆಲವೊಮ್ಮೆ ‘ಮೋಹ’ ಅಥವಾ ‘ಇನ್‌ಫ್ಯಾಚುಯೇಷನ್‌’ ಅಂತ ಕರೆಯಲಾಗುತ್ತದೆ.

ಹದಿಹರೆಯದ ಪ್ರೀತಿ ಬರೀ ಆಕರ್ಷಣೆಯೇ?

ಆದರೆ ಪ್ರೀತಿ ಅಂದರೆ ಕೇವಲ ಒಬ್ಬರನ್ನು ಇಷ್ಟಪಡುವುದು ಅಥವಾ ಅವರ ಜತೆ ಸಮಯ ಕಳೆಯುವುದಷ್ಟೇ ಅಲ್ಲ. ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು, ಅವರ ನಿರ್ಧಾರಗಳನ್ನು ಗೌರವಿಸುವುದು, ಕಷ್ಟದ ಸಮಯದಲ್ಲಿ ಬೆಂಬಲ ನೀಡುವುದು ಮತ್ತು ಪರಸ್ಪರ ನಂಬಿಕೆ ಬೆಳೆಸಿಕೊಳ್ಳುವುದೂ ಮುಖ್ಯ.

ಹಿರಿಯರು ಇದನ್ನು ಕೇವಲ ಆಕರ್ಷಣೆ ಅಂತ ಯಾಕೆ ಹೇಳುತ್ತಾರೆ?

ಹದಿಹರೆಯದಲ್ಲಿ ಜೀವನದ ಅನುಭವ ಕಡಿಮೆ ಇರಬಹುದು. ಈ ವಯಸ್ಸಿನಲ್ಲಿ ವ್ಯಕ್ತಿಯ ಆಸಕ್ತಿ, ಗುರಿ ಮತ್ತು ಆಲೋಚನೆಗಳು ಬದಲಾಗುವುದು ಸಹಜ. ಹಾಗಾಗಿ ಈಗ ತುಂಬಾ ಇಷ್ಟವಾಗುವ ವ್ಯಕ್ತಿಯ ಬಗ್ಗೆ ಮುಂದೆಯೂ ಅದೇ ಭಾವನೆ ಇರುತ್ತದೆ ಅಂತ ಹೇಳಲು ಸಾಧ್ಯವಿಲ್ಲ.

ಹದಿಹರೆಯದ ಪ್ರೀತಿ ಸುಳ್ಳಾ?

ಪ್ರೀತಿ ಅಂದ್ರೆ ಬರೀ ಭಾವನೆಯಲ್ಲ, ಅದರಲ್ಲಿ ತಾಳ್ಮೆ, ಗೌರವ, ಹೊಂದಾಣಿಕೆ ಮತ್ತು ಜವಾಬ್ದಾರಿಯೂ ಮುಖ್ಯ. ಇವೆಲ್ಲ ಅನುಭವದ ಜತೆ ಬೆಳೆಯುತ್ತವೆ. ಹಾಗಂತ ಹದಿಹರೆಯದ ಪ್ರೀತಿ ಬರೀ ಆಕರ್ಷಣೆ ಅಂತ ಹೇಳೋಕೂ ಆಗಲ್ಲ. ಚಿಕ್ಕ ವಯಸ್ಸಿನಲ್ಲೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಗೌರವದಿಂದ ಸಂಬಂಧ ಬೆಳೆಸುವವರಿದ್ದಾರೆ.

ಹಾಗಾದರೆ ಟೀನೇಜ್ ಪ್ರೀತಿ ನಿಜವೇ, ಸುಳ್ಳೇ?

ಹದಿಹರೆಯದಲ್ಲಿ ಮೂಡುವ ಭಾವನೆಗಳು ಸುಳ್ಳಲ್ಲ. ಆ ಸಮಯದಲ್ಲಿ ಅನುಭವಿಸುವ ಪ್ರೀತಿ, ಕಾಳಜಿ ಮತ್ತು ನೋವು ನಿಜವಾಗಿಯೇ ಇರಬಹುದು. ಆದರೆ ಆ ಸಂಬಂಧ ಜೀವನಪೂರ್ತಿ ಉಳಿಯುತ್ತದೆಯೇ ಅಥವಾ ಕಾಲದ ಜತೆ ಬದಲಾಗುತ್ತದೆಯೇ ಅನ್ನೋದನ್ನು ಮೊದಲೇ ನಿರ್ಧರಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: ಸರ್ಪಗಳಿಗೆ ಸಿಂಹಸ್ವಪ್ನ ಈ 4 ಹಕ್ಕಿಗಳು; ಹಾವುಗಳನ್ನು ಬೇಟೆಯಾಡುವ ರೀತಿ ಮೈ ಜುಮ್ಮೆನಿಸುತ್ತೆ! | Snake Hunting Birds

ಪ್ರೀತಿ ನಿಜವೇ ಅನ್ನೋದನ್ನ ವಯಸ್ಸಿನಿಂದ ಮಾತ್ರ ನಿರ್ಧರಿಸೋಕೆ ಆಗಲ್ಲ. ಸಂಬಂಧದಲ್ಲಿ ನಂಬಿಕೆ, ಗೌರವ ಮತ್ತು ಪರಸ್ಪರ ತಿಳುವಳಿಕೆ ಮುಖ್ಯ. ಹಾಗಂತ ಟೀನೇಜ್ ಪ್ರೀತಿಯನ್ನ ತಕ್ಷಣ ತಳ್ಳಿಹಾಕಬಾರದು, ಅದನ್ನೇ ಜೀವನದ ಅಂತಿಮ ನಿರ್ಧಾರ ಅಂತಾನೂ ಭಾವಿಸಬಾರದು. ಆಕರ್ಷಣೆಯಿಂದ ಶುರುವಾಗುವ ಪ್ರೀತಿ ಗಾಢವಾದ ಸಂಬಂಧವಾಗಿ ಬೆಳೆಯೋಕೆ ಸಮಯ ಮತ್ತು ಪ್ರಬುದ್ಧತೆ ಬೇಕು.