Animal Behavior: ‘ಹುಲಿ ಹುಲ್ಲು ತಿನ್ನಲ್ಲ’ ಎನ್ನುವ ಮಾತಿದೆ. ಈ ಮಾಂಸಾಹಾರಿ ಪ್ರಾಣಿಗಳಾದ ಹುಲಿ, ನಾಯಿ ಮತ್ತು ಬೆಕ್ಕುಗಳು ಮಾಂಸ ಬಿಟ್ಟು ಹುಲ್ಲು ತಿನ್ನುವುದನ್ನು ಎಲ್ಲಾದರೂ ನೋಡಿದ್ದೀರಾ? 'ಇವೇನು ಮಾಂಸ ಬಿಟ್ಟು ಹುಲ್ಲು ಮೇಯ್ತಿವೆಯಲ್ಲಾ' ಅಂತ ನಿಮಗೂ ಅನಿಸಿರಬಹುದು. ಆದರೆ ಇವು ಹಸಿವಿಗಾಗಿ ಹುಲ್ಲು ತಿನ್ನಲ್ಲ, ಬದಲಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳೋಕೆ ತಿನ್ನುತ್ತವೆ.
ಮಾಂಸಾಹಾರಿ ಪ್ರಾಣಿಗಳು ಮಾಂಸ ತಿನ್ನುವಾಗ ಅದರ ಜತೆಗೆ ಪ್ರಾಣಿಗಳ ಕೂದಲು, ಗರಿ ಹಾಗೂ ಸಣ್ಣ ಸಣ್ಣ ಮೂಳೆಗಳು ಹೊಟ್ಟೆ ಸೇರುತ್ತವೆ. ಇವು ಸುಲಭವಾಗಿ ಜೀರ್ಣವಾಗುವುದಿಲ್ಲ. ಇಂತಹ ಸಮಯದಲ್ಲಿ ಇವು ಹುಲ್ಲನ್ನು ತಿಂದು ವಾಂತಿ ಮಾಡಿಕೊಳ್ಳುತ್ತವೆ. ಇದರಿಂದ ಹೊಟ್ಟೆಯಲ್ಲಿ ಸಿಲುಕಿಕೊಂಡಿದ್ದ ತ್ಯಾಜ್ಯವೆಲ್ಲ ಹೊರಬಂದು ಹೊಟ್ಟೆ ಕ್ಲೀನ್ ಆಗುತ್ತದೆ.
ಪ್ರಾಣಿಗಳಿಗೆ ಹೊಟ್ಟೆ ಉಬ್ಬರ, ಅಜೀರ್ಣ ಅಥವಾ ಹೊಟ್ಟೆ ನೋವು ಬಂದಾಗ ಅವು ನೈಸರ್ಗಿಕ ಔಷಧಿಯಂತೆ ಹುಲ್ಲನ್ನು ತಿನ್ನುತ್ತವೆ. ಹುಲ್ಲು ಅವುಗಳ ಜೀರ್ಣಾಂಗವ್ಯೂಹವನ್ನು ಉತ್ತೇಜಿಸಿ, ಆರಾಮ ಸಿಗುವಂತೆ ಮಾಡುತ್ತದೆ.
ಹುಲ್ಲಿನಲ್ಲಿ ನಾರು (Fibre) ಮತ್ತು ಕೆಲವೊಂದು ಅಗತ್ಯ ವಿಟಮಿನ್‌ಗಳು ಇರುತ್ತವೆ. ತಮ್ಮ ದೈನಂದಿನ ಆಹಾರದಲ್ಲಿ ಈ ಪೋಷಕಾಂಶಗಳ ಕೊರತೆ ಉಂಟಾದಾಗ ಪ್ರಾಣಿಗಳು ಹುಲ್ಲನ್ನು ತಿನ್ನುತ್ತವೆ.
ಹೌದು, ಬೆಕ್ಕು ಮತ್ತು ನಾಯಿಗಳು ಕೂಡ ಹುಲ್ಲು ತಿನ್ನುತ್ತವೆ. ಬೆಕ್ಕುಗಳು ತಮ್ಮ ಮೈಯನ್ನು ನೆಕ್ಕಿಕೊಳ್ಳುವಾಗ (Grooming) ಸಾಕಷ್ಟು ಕೂದಲು ಹೊಟ್ಟೆಗೆ ಹೋಗುತ್ತದೆ (Hairballs). ಇದನ್ನು ಹೊರಹಾಕಲು ಬೆಕ್ಕುಗಳು ಹುಲ್ಲು ತಿನ್ನುತ್ತವೆ. ಇನ್ನು ನಾಯಿಗಳು ತಮ್ಮ ಹೊಟ್ಟೆ ಕೆಟ್ಟಾಗ ಅಥವಾ ಕರಳಿನ ಕ್ರಿಯೆ ಸುಲಭವಾಗಲು ಹುಲ್ಲನ್ನು ಅಗಿಯುತ್ತವೆ.
ಒಟ್ಟಿನಲ್ಲಿ ಹೇಳಬೇಕೆಂದರೆ, ಈ ಪ್ರಾಣಿಗಳು ಹಸಿವಿನಿಂದ ಹುಲ್ಲು ತಿನ್ನುವುದಿಲ್ಲ. ತಮ್ಮ ಆರೋಗ್ಯವನ್ನು ತಾವೇ ಸರಿಮಾಡಿಕೊಳ್ಳಲು ಒಂದು ನೈಸರ್ಗಿಕ ಚಿಕಿತ್ಸೆಯಾಗಿ ಹುಲ್ಲನ್ನು ಬಳಸಿಕೊಳ್ಳುತ್ತವೆ.