ನ್ಯೂಸ್

ಭಗವಂತನು ಮನಸ್ಸು, ಬುದ್ಧಿಗೆ ಗೋಚರಿಸದಿರನೇ?

ಭಗವಂತನನ್ನು ಕಾಣಲಾಗುವುದಿಲ್ಲವೇ? ಮನಸ್ಸು, ಬುದ್ದಿಗೆ ಗೋಚರಿಸದಿರನೇ? - ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಪ್ರಕಾರ ಇದು ಪೂರ್ಣ ಸತ್ಯವಲ್ಲ ಎಂದು ತಿಳಿಸುತ್ತಾರೆ. ಈ ಜಗತ್ತಿನಲ್ಲಿ ಈವರೆಗೂ ಕೋಟ್ಯಂತರ ಮಂದಿ ಸಾಧನೆ, ಅಧ್ಯಾತ್ಮ ಮಾರ್ಗದಲ್ಲಿ ಪಥಿಸಿದರಾದರೂ ಯಾರೊಬ್ಬರೂ ಖಚಿತವಾಗಿ, ನಿಖರವಾಗಿ, ಸ್ಪಷ್ಟವಾಗಿ ದೇವರನ್ನು ಕಂಡಿದ್ದೇನೆ ಎಂದು ಹೇಳಿರುವುದಕ್ಕೆ ಪುರಾವೆಯಿಲ್ಲ. ಸ್ವತಃ ನಾನು ದೇವರನ್ನು ಕಂಡಿರುವೆ ಎಂದು ಯಾರೂ ಧೈರ್ಯವಾಗಿ, ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಮಾತ್ರ ಅತ್ಯಂತ ಸ್ಪಷ್ಟವಾಗಿ ಹಾಗೂ ಮನಸ್ಸಿಗೆ ನಾಟುವಂತೆ ತಿಳಿಸಿದ್ದಾರೆ, ‘ಹೌದು ನಾನು ದೇವರನ್ನು ಕಂಡಿರುವೆ ಮತ್ತು ತೋರಿಸಬಲ್ಲೆ!’

ಅದೊಂದು ದಿನ ನರೇಂದ್ರನಾಥ ದತ್ತ ಪರಮಹಂಸರ ಬಳಿ ಈ ಪ್ರಶ್ನೆಯನ್ನು ಹಾಕುತ್ತಾನೆ. ರಾಮಕೃಷ್ಣರು ಇತ್ತ ಉತ್ತರ ಇಡೀ ಜಗತ್ತನ್ನೇ ಬೆರಗಾಗಿಸಿತು. ‘ಹೌದಪ್ಪ, ಕಂಡಿದ್ದೇನೆ! ಈಗ ನಿನ್ನನ್ನು ಕಾಣುತ್ತಿರುವಂತೆಯೇ, ಆದರೆ ಇನ್ನೂ ಸ್ಪಷ್ಟವಾಗಿ ದೇವರನ್ನು ಕಂಡಿದ್ದೇನೆ!’. ನರೇಂದ್ರ ಸ್ತಬ್ದನಾಗಿ ಕುಳಿತ. ಪರಮಹಂಸರು ಮತ್ತೆ ನುಡಿದರು. ‘ನಾನು ನಿನ್ನನ್ನು ಕಾಣುವಷ್ಟೇ, ನಿನ್ನೊಡನೆ ಮಾತನಾಡುವಷ್ಟೇ ಸ್ಪಷ್ಟವಾಗಿ ಭಗವಂತನನ್ನು ಕಾಣಬಹುದು, ಕಂಡು ಮಾತನಾಡಬಹುದು’ ಎಂದರು. ಮತ್ತೊಂದು ಅಂಶವನ್ನು ಇಲ್ಲಿ ಸ್ಪಷ್ಟಪಡಿಸಿದರು. ‘ನೀನೂ ಸಹ ನೋಡಬಹುದು’ ಎಂದು. ಈ ಸ್ಪಷ್ಟ, ನಿಖರವಾದ ಉತ್ತರಕ್ಕೆ ನರೇಂದ್ರನಾಥ ಮೂಕವಿಸ್ಮಿತನಾದ. ಈ ಘಟನೆಯಿಂದ ನಮ ಗರಿವಾಗುತ್ತದೆ, ದೇವರನ್ನು ಕಾಣಬಹುದು ಎಂದು. ಆದರೆ ಹೇಗೆ? ಎಂಬುದು ಮನಸ್ಸಿಗೆ ಬಂದಾಗಲೇ ನಿಜವಾದ ಅಧ್ಯಾತ್ಮ ಜೀವನದ ಆರಂಭ.

ಇನ್ನು ರಾಮಕೃಷ್ಣರು ತಾವು ಅನುಭವಿ ಸಿದ ಸಾಕ್ಷಾತ್ಕಾರದ ವಿಚಾರವನ್ನು ಪದೇ ಪದೇ ತಮ್ಮ ಬಳಿ ಸಾರಿದವರಿಗೆಲ್ಲಾ ವಿವರಿಸುತ್ತಿದ್ದರು. ತಮ್ಮ ಅನುಭಾವ ನುಡಿಗಳನ್ನು ವಿವರಿಸುತ್ತಾ ಅಧ್ಯಾತ್ಮ ಪಿಪಾಸುಗಳಿಗೆ ಪೂರ್ಣ ನಂಬಿಕೆ ಹಾಗೂ ಶ್ರದ್ಧೆ, ನಿಷ್ಠೆಯಿಂದ ಸಾಧನಾ ಮಾರ್ಗದಲ್ಲಿ ಪಥಿಸುವಂತೆ ಪ್ರೇರೇಪಿಸುತ್ತಿದ್ದರು. ‘ಜ್ಞಾನೋದಯವಾದರೆ ಭಗವಂತ ದೂರದಲ್ಲಿದ್ದಾನೆ ಎಂಬುದಾಗಿ ಅನಿಸುವುದೇ ಇಲ್ಲ. ಆಗ ಅವನು ಅವನಾಗಿ ತೋರುವುದಿಲ್ಲ, ಇವನಾಗಿ ಬಿಡುತ್ತಾನೆ. ಆಗ ಅವನನ್ನು ಹೃದಯ ಮಧ್ಯದಲ್ಲಿ ನೋಡಬಹುದು. ಆತ ಎಲ್ಲರ ಆಂತರ್ಯದಲ್ಲಿ ಇದ್ದಾನೆ; ಅರಸಿದವರಿಗೆ ದೊರೆತುಬಿಡುತ್ತಾನೆ’- ಇದು ರಾಮಕೃಷ್ಣರ ಅನುಭಾವದ ನುಡಿ. ರಾಮಕೃಷ್ಣರು ತೋರಿದ ಅದ್ಭುತ ಎಂದರೆ ಮೃಣ್ಮಯಿಯಲ್ಲಿ ಚಿನ್ಮಯಿಯನ್ನು ಕಂಡು ಅರ್ಚಿಸುವುದು! ಇದೊಂದು ಅದ್ಭುತ ಪ್ರಕ್ರಿಯೆ. ನಾವು ಜೀವನ ಪರ್ಯಂತ ಭಾವಚಿತ್ರ, ವಿಗ್ರಹ, ಬೊಂಬೆ, ಪ್ರತಿಮೆ ಎಂದು ದೇವರನ್ನು ನಾನಾ ರೀತಿಯಲ್ಲಿ ಅರ್ಚಿಸಲು ಪ್ರಯತ್ನಿಸುತ್ತೇವೆಯೇ ವಿನಃ ಖಂಡಿತಾ ಆ ಮೃಣ್ಮಯಿಯಲ್ಲಿ ಚಿನ್ಮಯಿಯನ್ನು, ಬಿಂಬದಲ್ಲಿ ಪ್ರತಿಬಿಂಬವನ್ನು, ಪಟದಲ್ಲಿ ಚೈತನ್ಯವನ್ನು ಕಾಣಲು ಸಂಪೂರ್ಣ ವಿಫಲರಾಗಿದ್ದೇವೆ. ಆಂತರ್ಯದಲ್ಲಿ ರಾರಾಜಿಸುತ್ತಿರುವ ದಿವ್ಯ ಭಗವದ್ ಶಕ್ತಿಯ ಅರಿವೇ ನಮಗಿಲ್ಲ. ರಾಮಕೃಷ್ಣರ ಜೀವನದ ಒಂದೊಂದು ಘಟನೆಗಳಲ್ಲಿಯೂ ಭಗವದ್ದರ್ಶನದ ನಿಜ ಅರ್ಥ ದೊರೆಯುತ್ತದೆ. ‘ಯಾರನ್ನಾದರೂ ಮಂದಿರಕ್ಕೆ ಹೋಗು ಎಂದಾಗ ಕೇವಲ ಮಂದಿರಕ್ಕೆ ಭೇಟಿ ನೀಡುವುದು ಎಂಬ ಅರ್ಥದಿಂದಲ್ಲ, ಬದಲಾಗಿ ಭವತಾರಿಣಿಯ ದರ್ಶನದ ಭಾಗ್ಯ ಪಡೆದುಕೊಂಡು ಬಾ ಎಂದರ್ಥ.

ನರೇಂದ್ರನಾಥ (ಸ್ವಾಮಿ ವಿವೇಕಾನಂದ)ನಿಗೆ ಸ್ವಲ್ಪ ಪ್ರಾಪಂಚಿಕ ದುರಿತಗಳು ಬಂದಾಗ, ಪರಮಗುರುವಿನ ಬಳಿ ನನಗಾಗಿ ಭವತಾರಿಣಿಯಲ್ಲಿ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡಾಗ, ನಾನೇಕೆ ನಿನ್ನ ಪರವಾಗಿ ಪ್ರಾರ್ಥಿಸಲಿ? ನೀನೇ ಖುದ್ದಾಗಿ ಭವತಾರಿಣಿಯ ಬಳಿ ವ್ಯಾಕುಲಚಿತ್ತನಾಗಿ ಪ್ರಾರ್ಥಿಸಿಕೋ ಎಂದು ಸೂಚಿಸುತ್ತಾರೆ. ಹಾಗಾಗಿ ಈ ಆಧುನಿಕ ಯುಗದಲ್ಲಿ ಕೂಡ ಭಗವದ್ದರ್ಶನ ಲಾಭ ಪಡೆಯುವುದೇ ಜೀವನದ ಮುಖ್ಯ ಗುರಿ, ಉಳಿದದ್ದೆಲ್ಲ ಕೇವಲ ಜೀವಿತಕ್ಕಾಗಿ ಎಂಬುದನ್ನು ಅರ್ಥೈಸಿಕೊಂಡಾಗಲೇ ಪರಮಹಂಸರು ಹೇಳಿದ ‘ಭಗವಂತನನ್ನು ಕಂಡಿದ್ದೇನೆ, ನಿನಗೂ ತೋರಿಸಬಲ್ಲೆ’ ಎಂಬ ವಾಕ್ಯದ ಸಂಪೂರ್ಣ ಅರ್ಥ ಪಡೆದುಕೊಳ್ಳಬಹುದು.

ಪರಮಹಂಸರ ಬಳಿಗೆ ಸಾರಿದ ನಿಷ್ಠಾವಂತ ಸಾಧಕರಿಗೆ ರಾಮಕೃಷ್ಣರ ಸ್ವಾನುಭವದ ನುಡಿಗಳು ಅತ್ಯಂತ ಪರಿಣಾಮಕಾರಿಯಾಗಿ ಅವರವರ ಸಾಧನಾ ಪಥಕ್ಕೆ ಹೆಚ್ಚು ಒತ್ತು ನೀಡಿ ಸಾಧನೆಯ ಮಾರ್ಗದಲ್ಲಿ ಮುಂದುವರಿಯುವಂತೆ ಮಾಡುತ್ತಿತ್ತು. ಅವರ ಪ್ರತ್ಯಕ್ಷ ಶಿಷ್ಯರ ಜೀವನ ಸಂದೇಶವನ್ನು ಕಂಡಾಗ ನಮಗೆ ಮುಖ್ಯವಾಗಿ ತೋರಿಬರುವುದು ಅವರುಗಳಲ್ಲಿ ಉದ್ದೀಪನವಾಗಿದ್ದ ಭಗವತ್ ವ್ಯಾಕುಲತೆ. ಇದು ನಿಜಕ್ಕೂ ಶ್ರದ್ಧ್ಧಾವಂತ, ನಿಷ್ಠಾವಂತ ಸಾಧಕರಿಗೆ ಗುರಿಯನ್ನು ಮುಟ್ಟುವ ಸ್ಪೂರ್ತಿ ದೊರೆಯುವುದರಲ್ಲಿಸಂದೇಹವೇ ಇರುತ್ತಿರಲಿಲ್ಲ. ಅನೇಕ ಭಕ್ತರಿಗೆ ಅದರಲ್ಲೂ ಮುಖ್ಯವಾಗಿ ಮಹಾನ್ ಸಾಧಕರುಗಳಿಗೆ ಪರಮಹಂಸರು ಭವತಾರಿಣಿಯ ದರುಶನದ ಭಾಗ್ಯವನ್ನು ಕೃಪೆ ಮಾಡಿದ್ದರು. ಈ ವಿಚಾರದ ಸಾರಾಂಶವೆಂದರೆ ಭಗವತ್ ಶಕ್ತಿ ಖಂಡಿತವಾಗಿ ಇದೆ. ಅದನ್ನು ಪಡೆಯುವುದಕ್ಕಾಗಿ ಸಾಧನೆ ಮಾಡಬೇಕು. ಇದೇ ರಾಮಕೃಷ್ಣರು ಸಾಧಕರಿಗೆ ನೀಡಿದ ಉಪದೇಶಾಮೃತ.

(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)

(ಪ್ರತಿಕ್ರಿಯಿಸಿ: vvsudina@gmail.com, swajapa@gmail.com)