ಇಸ್ಲಮಾಬಾದ್: ಪಾಕಿಸ್ತಾನದಲ್ಲಿರುವ ಎರಡು ಉಗ್ರ ಸಂಘಟನೆಗಳ ನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ಮಂಗಳವಾರ (ಜ.16) ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನಿಯನ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ಇರಾಕ್ ಮತ್ತು ಸಿರಿಯಾದಲ್ಲಿನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದ ಮರು ದಿನವೇ ಪಾಕಿಸ್ತಾನದ ಮೇಲೂ ದಾಳಿ ನಡೆದಿದೆ. ಬಲೂಚಿ ಉಗ್ರಗಾಮಿ ಸಂಘಟನೆ ಜೈಶ್ ಅಲ್ ಅದ್ಲ್ಗೆ ಸಂಬಂಧಿಸಿದ ಎರಡು ನೆಲೆಗಳ ಮೇಲೆ ದಾಳಿ ನಡೆದಿದೆ.
ಈ ಹಿಂದೆ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಇರಾನ್ ಭದ್ರತಾ ಪಡೆಗಳ ಮೇಲೆ ಈ ಉಗ್ರಗಾಮಿ ಗುಂಪು ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಇರಾನ್ ಪ್ರತಿತಂತ್ರ ರೂಪಿಸಿ, ದಾಳಿ ಮಾಡಿದೆ. ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ಎರಡೂ ನೆಲೆಗಳು ಧ್ವಂಸಗೊಂಡಿದೆ ಎಂದು ಇರಾನಿಯನ್ ಮಾಧ್ಯಮ ಮಾಹಿತಿ ನೀಡಿದೆ.
ದೇಶದ ಉನ್ನತ ಭದ್ರತಾ ಸಂಸ್ಥೆಯೊಂದಿಗೆ ಸಂಯೋಜಿತವಾಗಿರುವ ಇರಾನ್‌ನ ನೂರ್‌ನ್ಯೂಸ್ ಮಾಧ್ಯಮ, ದಾಳಿಗೊಳಗಾದ ನೆಲೆಗಳು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿವೆ ಎಂದು ಹೇಳಿದೆ.
ಇರಾನ್‌ನ ಗಡಿಯಲ್ಲಿರುವ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಮಾಹಿತಿ ಸಚಿವ ಜಾನ್ ಅಚಕ್ಜೈ ಅವರು ಇರಾನ್ ದಾಳಿಯನ್ನು ಖಚಿತಪಡಿಸಲು ನಿರಾಕರಿಸಿದರು. ಪಾಕಿಸ್ತಾನಿ ಮಿಲಿಟರಿಯ ಸಾರ್ವಜನಿಕ ಸಂಪರ್ಕ ವಿಭಾಗ ಐಎಸ್ಪಿಆರ್ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದರು.
ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ ಮತ್ತು ಈ ಘಟನೆಯು "ಗಂಭೀರ ಪರಿಣಾಮಗಳನ್ನು" ಉಂಟುಮಾಡಬಹುದು ಹಾಗೂ "ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ಎಚ್ಚರಿಸಿದೆ. ಆದರೆ, ಈ ಬಗ್ಗೆ ಇರಾನ್ನಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. (ಏಜೆನ್ಸೀಸ್)