ನ್ಯೂಸ್

ಮಗಳ ಗೆಳೆಯನಿಗೆ ಸಿಗರೇಟಿನಿಂದ ಸುಟ್ಟ ಆರೋಪ ಎದುರಿಸುತ್ತಿರುವ ಐಪಿಎಸ್​ ಅಧಿಕಾರಿ

ಡೆಹ್ರಾಡೂನ್: ಆಘಾತಕಾರಿ ಪ್ರಕರಣವೊಂದರಲ್ಲಿ, ಉತ್ತರಾಖಂಡ ಐಪಿಎಸ್ ಅಧಿಕಾರಿಯೊಬ್ಬರು ಹುಡುಗನೊಬ್ಬನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ.

ಐಪಿಎಸ್ ಅಧಿಕಾರಿ, ಇತರ ಕೆಲ ಪೊಲೀಸ್ ಸಿಬ್ಬಂದಿಯೊಂದಿಗೆ ಸೇರಿ ಸೋಮವಾರ ಮಧ್ಯಾಹ್ನ ಬಿಂದಾಲ್ ಪೊಲೀಸ್ ಚೌಕಿಗೆ ಆ ಹುಡುಗನನ್ನು ಕರೆಸಿ ಆತನ ಬಟ್ಟೆಗಳನ್ನು ಬಿಚ್ಚಿ ಹೊಡೆದು, ಸಿಗರೇಟಿನಿಂದ ಸುಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಬಾಲಕನ ಕುಟುಂಬ ಉತ್ತರಾಖಂಡ ಪೊಲೀಸ್ ಪ್ರಧಾನ ಕಚೇರಿಗೆ ನೀಡಿದ ದೂರಿನಲ್ಲಿ, ಅವರ ಮಗ ಮತ್ತು ಐಪಿಎಸ್ ಅಧಿಕಾರಿಯ ಮಗಳು ಸ್ನೇಹಿತರಾಗಿದ್ದಾರೆ, ಅದು ಆ ಅಧಿಕಾರಿಗೆ ಇಷ್ಟವಾಗಿರಲಿಲ್ಲ. ತನಗೆ ಸಹಾಯ ಬೇಕಿದೆ ಎಂದು ಹೇಳಿ ಆಗಸ್ಟ್ 10 ರಂದು ಬಾಲಕನನ್ನು ಪೊಲೀಸ್ ಚೌಕಿಗೆ ಕರೆಸಿಕೊಂಡ ಆ ಅಧಿಕಾರಿ ಹಾಗೂ ಇತರ ಸಿಬ್ಬಂದಿ ಸೇರಿ ಅಲ್ಲಿ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

“ಅಲ್ಲಿಗೆ ತಲುಪಿದಾಗ, ಅವರು ನನಗೆ ನಿರ್ದಯವಾಗಿ ಹೊಡೆಯಲು ಪ್ರಾರಂಭಿಸಿದರು. ನಂತರ ಪೊಲೀಸ್ ಚೌಕಿಯಲ್ಲಿದ್ದ ಇತರ ಪೊಲೀಸ್ ಸಿಬ್ಬಂದಿಯೊಂದಿಗೆ ನನ್ನ ಬಟ್ಟೆಗಳನ್ನು ಬಿಚ್ಚಿ ಸಿಗರೇಟಿನಿಂದ ಸುಟ್ಟರು ಎಂದು ಬಾಲಕ ತಿಳಿಸಿದ್ದಾನೆ.

ಅಷ್ಟೇ ಅಲ್ಲದೆ ಅಧಿಕಾರಿ ಈ ಘಟನೆ ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆ ಹಾಕಿದ್ದಾರೆ ಎಂದು ಹುಡುಗ ತಿಳಿಸಿದ್ದಾನೆ.

ಹಲ್ಲೆಯ ನಂತರ, ಬಾಲಕನ ಮನೆಯವರು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಾಗ ಬಾಲಕನ ಮೇಲೆ ಮೂರ್ನಾಲ್ಕು ಜನ ಹಲ್ಲೆ ಮಾಡಿದ್ದಾರೆ ಎಂದು ವೈದ್ಯಕೀಯ ವರದಿ ದೃಢಪಡಿಸಿದೆ. ಅವನ ಕಿವಿ ಮತ್ತು ಪೃಷ್ಠದ ಕೆಳಗೆ ಅನೇಕ ಗಾಯವಾಗಿದೆ. ಅವರ ಬಲಗೈ ಮೇಲೆ ಸಿಗರೇಟ್ ಸುಟ್ಟ ಗುರುತುಗಳಿವೆ.

ಐಪಿಎಸ್ ಅಧಿಕಾರಿ ಆ ಹುಡುಗನ ದೂರಿಗೆ ಸಂಬಂಧಿಸಿದಂತೆ ಪ್ರತಿ ದೂರು ದಾಖಲಿಸಿದ್ದು, ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಬಾಲಕನ ಕುಟುಂಬ ಮಾಡಿದ ಆರೋಪಗಳನ್ನು ತಳ್ಳಿಹಾಕಿದ ಅಧಿಕಾರಿ ನಾನು ಹುಡುಗನನ್ನು ಕರೆದಿರಲಿಲ್ಲ ಎಂದು ಹೇಳಿದ್ದಾರೆ. ಹುಡುಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಗಳಿಗೆ ಬೆದರಿಸುತ್ತಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.

ಎರಡೂ ಕಡೆಯವರು ನೀಡಿರುವ ದೂರುಗಳ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಲಾಗಿದೆ ಎಂದು ಮಹಾನಿರ್ದೇಶಕ (ಕಾನೂನು ಸುವ್ಯವಸ್ಥೆ) ಅಶೋಕ್ ಕುಮಾರ್ ತಿಳಿಸಿದ್ದಾರೆ. ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ನಗರ ಪೊಲೀಸ್ ವರಿಷ್ಠಾಧಿಕಾರಿ ಶ್ವೇತಾ ಚೌಬೆ ಅವರಿಗೆ ಡೆಹ್ರಾಡೂನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.