ನ್ಯೂಸ್

ಜಿಮ್​ನಲ್ಲಿ ಹೂಡಿಕೆ ಸಿಕ್ಸರ್; ಮೊದಲ ದಿನವೇ ಕರ್ನಾಟಕಕ್ಕೆ 6 ಲಕ್ಷ ಕೋಟಿ ರೂ. ಬೋಣಿ!

ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಮೊದಲ ದಿನವೇ ಕರ್ನಾಟಕಕ್ಕೆ ಆರು ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆ ಒಡಂಬಡಿಕೆ, ಭರವಸೆಗಳ ಬೂಸ್ಟರ್ ಸಿಕ್ಕಿತು. ಈ ಪೈಕಿ ನಾಲ್ಕು ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತ ‘ಹಸಿರು ಇಂಧನ’ ವಲಯಕ್ಕೆ ಸೇರಿರುವುದು ವಿಶೇಷ.

ಅರಮನೆ ಮೈದಾನದ ಆವರಣದಲ್ಲಿ ಆಯೋಜನೆಗೊಂಡಿರುವ 15ನೇ ಆವೃತ್ತಿಯ ನಾಲ್ಕು ದಿನಗಳ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದರು. ಹೂಡಿಕೆಗೆ ಕರ್ನಾಟಕ ಪ್ರಶಸ್ತ ತಾಣವೆಂದು ಹೇಳುವ ಮೂಲಕ ಉದ್ಯಮ-ವಹಿವಾಟು ವಲಯಕ್ಕೆ ಉತ್ತೇಜನದ ಶಕ್ತಿ ತುಂಬಿದರು. ಮಂಡಿ ನೋವಿನ ಕಾರಣದಿಂದಾಗಿ ಸಿಎಂ ಸಿದ್ದರಾಮಯ್ಯ ಗಾಲಿ ಕುರ್ಚಿಯಲ್ಲಿ ಆಗಮಿಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.

ರಾಜ್ಯದ ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಈ ಬಾರಿ 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷೆಯಿದೆ ಎಂದಿದ್ದರು. ಅದಕ್ಕೆ ಪೂರಕವಾಗಿ ಸಮಾವೇಶಕ್ಕೆ ಚಾಲನೆ ದಿನವೇ ನಾಲ್ಕು ಲಕ್ಷ ಕೋಟಿ ರೂ. ಮೊತ್ತದ ಒಡಂಬಡಿಕೆ, ಉಳಿದ ಎರಡು ಲಕ್ಷ ಕೋಟಿ ರೂ. ಮೊತ್ತ ಹೂಡಿಕೆಗೆ ಬದ್ಧತೆ ಮತ್ತು ಖಚಿತ ಭರವಸೆ ರಾಜ್ಯಕ್ಕೆ ಸಿಕ್ಕಿದೆ. ಹೂಡಿಕೆ ಒಪ್ಪಂದ ಮತ್ತು ಅಧಿಕೃತ ಘೋಷಣೆಯಲ್ಲಿ ಅಮೆರಿಕ, ಇಂಗ್ಲೆಂಡ್, ಜಪಾನ್, ಸಿಂಗಾಪುರ, ದಕ್ಷಿಣಕೊರಿಯಾ, ತೈವಾನ್ ಮತ್ತಿತರ ದೇಶಗಳು ಹಾಗೂ ಭಾರತದ ಮಹೀಂದ್ರಾ ಅಂಡ್ ಮಹೀಂದ್ರಾ, ಜೆಎಸ್​ಡಬ್ಲ್ಯು ಸಮೂಹ ಕಂಪನಿಗಳು ಸೇರಿವೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 13 ಕಂಪನಿಗಳು ಆಸಕ್ತಿ ತೋರಿಸಿ 3.42 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಇದರಿಂದ 78,253 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ದೇಶಗಳಿಗೆ ಸಂದೇಹವಿದ್ದರೆ ಕರ್ನಾಟಕಕ್ಕೆ ಬಂದು ನೋಡಬೇಕು. ಆಗ ಅವರ ಅನುಮಾನ ದೂರವಾಗುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೆಮ್ಮೆಯಿಂದ ಹೇಳಿದರು. ಭಾರತದ ಶಕ್ತಿ, ಸಾಮರ್ಥ್ಯಗಳನ್ನು ಬೆಂಗಳೂರು ಮತ್ತು ಕರ್ನಾಟಕದ ಮೂಲಕ ಬೇರೆ ದೇಶಗಳು ಅರಿಯಲು ಶಕ್ತವಾಗಲಿದೆ. ಬೆಂಗಳೂರು ಹಾಗೂ ಕರ್ನಾಟಕ ಹೂಡಿಕೆದಾರರಿಗೆ ಪ್ರಶಸ್ತ ತಾಣವಾಗಿದೆ ಎಂದು ಜಾಗತಿಕ ಉದ್ಯಮಿಗಳಿಗೆ ಕರೆ ನೀಡಿದರು.

ಕರ್ನಾಟಕವೂ ಸೇರಿ ಭಾರತದಲ್ಲಿ ‘ರೆಡ್ ಟೇಪ್’ ಯುಗಾಂತ್ಯವಾಗಿ ‘ರೆಡ್ ಕಾರ್ಪೆಟ್’ ಯುಗ ಆರಂಭವಾಗಿದೆ. ಮೂಲ ಸವಲತ್ತುಗಳ ಅಭಿವೃದ್ಧಿ, ಕೈಗಾರಿಕೆ-ವ್ಯಾಪಾರ ಸ್ನೇಹಿ ನೀತಿಗಳು, ಅಗತ್ಯ ಕೌಶಲಪೂರ್ಣ ಮಾನವ ಸಂಪನ್ಮೂಲಗಳು ಲಭ್ಯವಿದೆ ಎಂದು ರಾಜನಾಥ್​ಸಿಂಗ್ ಖಾತರಿಪಡಿಸಿದರು.

ರಾಜ್ಯಕ್ಕೆ ಜೋಶಿ ಅಭಯ: ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ಆರ್ಥಿಕತೆ ವೃದ್ಧಿ, ಅಭಿವೃದ್ಧಿ, ಉದ್ಯಮ-ವಹಿವಾಟು ಮತ್ತಿತರ ಉಪಕ್ರಮಗಳಿಗೆ ಕರ್ನಾಟಕಕ್ಕೆ ಬೇಕಾದ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ವಾಗ್ದಾನ ನೀಡಿದರು.

ವರ್ಣರಂಜಿತ ದೃಶ್ಯಕಾವ್ಯ: ತಂತ್ರಜ್ಞಾನ ಮಿಳಿತ ವರ್ಣರಂಜಿತ ದೃಶ್ಯಕಾವ್ಯದಂತೆ ಭೋರ್ಗರೆದು ಉದ್ಘಾಟನಾ ಸಮಾರಂಭ ಹೊಸ ಮೆರುಗು ತಂದಿತು. ನಾಡಗೀತೆ, ಕರ್ನಾಟಕದ ವೈವಿಧ್ಯತೆ, ಇತಿಹಾಸ, ಪರಂಪರೆ, ಕಲೆ, ಸಂಸ್ಕೃತಿ, ಜಾನಪದ ಸೊಗಡು, ವಿಜ್ಞಾನ, ತಂತ್ರಜ್ಞಾನ ಸೇರಿ ನವಪೀಳಿಗೆಯ ಉದ್ಯಮ ವಲಯದಲ್ಲಿ ಮೆರೆದ ಸಾಧನೆ, ವಿಶೇಷ ಖಾದ್ಯಗಳು, ವಿಶ್ವದ ಪ್ರಸಿದ್ಧ ತಾಣಗಳೊಂದಿಗೆ ತುಲನೆಯ ಕಿರುಚಿತ್ರಗಳು ಒಂದೂವರೆ ನಿಮಿಷ ತುಣುಕುಗಳಲ್ಲಿ ಪ್ರದರ್ಶನವಾದವು. ಆಹ್ವಾನಿತ ಅತಿಥಿಗಳ ಭಾಷಣದ ಮಧ್ಯೆ ಯಕ್ಷಗಾನ, ಜಾನಪದ ಕಲಾತಂಡಗಳ ಪ್ರದರ್ಶನ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಕರ್ನಾಟಕ ವೈಶಿಷ್ಟ್ಯ ಸಾರಿದ್ದೂ ಸೇರಿದ ತುಣುಕು ಚಿತ್ರಗಳ ಬಿತ್ತರವಾದವು. ಅತ್ತ ಭಾಷಣದ ಕಡೆಗೂ ಆಸಕ್ತಿ, ಇತ್ತ ಕರ್ನಾಟಕ ವೈವಿಧ್ಯತೆ, ಸಾಮರ್ಥ್ಯದ ಕಡೆಗೂ ಗಮನಸೆಳೆಯುವಲ್ಲಿ ಸಫಲವಾದವು.

ಪ್ರಮುಖ ಹೂಡಿಕೆಗಳು

  • ಜೆಎಸ್ ಡಬ್ಲು್ಯ ನಿಯೋ ಎನರ್ಜಿ ಲಿಮಿಟೆಡ್- 56 ಸಾವಿರ ಕೋಟಿ, ರಿನ್ಯೂ ಪ್ರೖೆ. ಲಿ., ಟಾಟಾ ಪವರ್ ರಿನಿವೇಬಲ್ ಎನರ್ಜಿ ತಲಾ 50 ಸಾವಿರ ಕೋಟಿ
  • ಸೆರೆಂಟಿಕಾ ರಿನಿವೇಬಲ್ ಇಂಡಿಯಾ ಪ್ರೖೆ. ಲಿ.- 43,975 ಕೋಟಿ ರೂ., ಮಹೀಂದ್ರಾ ಸಸ್ಟೆನ್ ಪ್ರೖೆ.ಲಿ.- 35,000 ಕೋಟಿ ರೂ.
  • ಸೆಮಿಕಂಡಕ್ಟರ್ ಉಪಕರಣಗಳ ತಯಾರಿಕೆಗೆ ಲ್ಯಾಮ್ ರಿಸರ್ಚ್ ಕಂಪನಿ 10 ಸಾವಿರ ಕೋಟಿ ರೂ., ಉಕ್ಕು ಉದ್ಯಮದಲ್ಲಿ ಜೆಎಸ್​ಡಬ್ಲ್ಯು ಸಮೂಹ ಕಂಪನಿ 43 ಸಾವಿರ ಕೋಟಿ ರೂ.
  • ಬಂದರು ಅಭಿವೃದ್ಧಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಸಮೂಹದಿಂದ 6 ಸಾವಿರ ಕೋಟಿ ರೂ., ಅಮೆರಿಕ, ಇಂಗ್ಲೆಂಡ್, ಯೂರೋಪ್ ಕಂಪನಿಗಳು -ಠಿ;28 ಸಾವಿರ ಕೋಟಿ.
  • ಜಪಾನ್, ದಕ್ಷಿಣಕೊರಿಯಾ, ಸಿಂಗಾಪುರ, ತೈವಾನ್​ನ 15 ಕಂಪನಿಗಳು, 24,124 ಕೋಟಿ ರೂ ಹೂಡಿಕೆ, ರೋಬೋಟಿಕ್ ಬಹುಹಂತದ ಕಾರ್ ಮತ್ತು ಬಸ್ ರ್ಪಾಂಗ್​ಗೆ ಸೋಟ್​ಫಿನ್ ಭಾರತ್ ಕಂಪನಿ 8,500 ಕೋಟಿ ರೂ. ಹೂಡಿಕೆ
  • ಶ್ರೀ ಸಿಮೆಂಟ್ ಲಿಮಿಟೆಡ್​ನಿಂದ ಸಮಗ್ರ ಸ್ಥಾವರ ಕ್ಲಿಂಕರ್ ಗ್ರೖೆಂಡಿಂಗ್ ಘಟಕಕ್ಕೆ 8,350 ಕೋಟಿ

ಮುಖ್ಯಾಂಶಗಳು

  • ಮುಂದಿನ 5 ವರ್ಷದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ, ಹಿಂದುಳಿದ ಜಿಲ್ಲೆ/ ತಾಲೂಕುಗಳಿಗೆ ಒತ್ತು ನೀಡಿದ, ಕೈಗಾರಿಕಾ ಬೆಳವಣಿಗೆಗೆ ಮೂರು ವಲಯಗಳ ವ್ಯವಸ್ಥೆ ಸೃಷ್ಟಿಸಲು ಉದ್ದೇಶಿತ ನೂತನ ಕೈಗಾರಿಕಾ ನೀತಿ (2025 ರಿಂದ 2030) ಬಿಡುಗಡೆ
  • ಸುಧಾರಿತ ಏಕಗವಾಕ್ಷಿ ವ್ಯವಸ್ಥೆ ಪೋರ್ಟಲ್ ಲೋಕಾರ್ಪಣೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಉಮಾ (ಉದ್ಯೋಗಮಿತ್ರ ಅಸಿಸ್ಟನ್ಸ್) ನೆರವು, 30ಕ್ಕೂ ಹೆಚ್ಚು ಇಲಾಖೆಗಳ 150 ಸೇವೆಗಳು ಈ ವೇದಿಕೆಯಲ್ಲಿ ಲಭ್ಯ

ಕರ್ನಾಟಕ ಸರಸ್ವತಿ ಮತ್ತು ಲಕ್ಷ್ಮಿಯರನ್ನು ಮೇಳೈಸಿದ ರಾಜ್ಯವಾಗಿದೆ. ದೇಶದ ತಂತ್ರಜ್ಞಾನದ ರಾಜಧಾನಿ ಬೆಂಗಳೂರು. ಇಲ್ಲಿಂದ ಸದ್ಯದಲ್ಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಪ್ರಥಮ ಮಾದರಿ ಕೂಡ ಹೊರಬರಲಿದೆ. ಇದಕ್ಕೆಲ್ಲ ಇಲ್ಲಿರುವ ಮಾನವಸಂಪನ್ಮೂಲ, ಸಮೃದ್ಧವಾಗಿರುವ ಪ್ರತಿಭೆ ಕಾರಣ.

| ರಾಜನಾಥ್ ಸಿಂಗ್ ರಕ್ಷಣಾ ಸಚಿವ

ಜವಾಬ್ದಾರಿಯುತ, ಸುಸ್ಥಿರ ಬೆಳವಣಿಗೆಗೆ ಕರ್ನಾಟಕ ಆದ್ಯತೆ ನೀಡಿದೆ. ಉದ್ಯಮ-ವಹಿವಾಟಿಗೆ ಮಿತಿಯಿಲ್ಲದ ಅವಕಾಶಗಳು, ಉಜ್ವಲ ಭವಿಷ್ಯವುಳ್ಳ ರಾಜ್ಯವಾಗಿದೆ. ಹೂಡಿಕೆದಾರರಿಗೆ ಕಾನೂನು ಸುವ್ಯವಸ್ಥೆ ಪಾಲನೆ ಸೇರಿ ಸುಭದ್ರ ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸಲು ಸರ್ಕಾರ ಬದ್ಧವಾಗಿದೆ.

| ಸಿದ್ದರಾಮಯ್ಯ ಮುಖ್ಯಮಂತ್ರಿ

ತಂತ್ರಜ್ಞಾನದ ಬಳಕೆ, ಹೂಡಿಕೆ ಆಕರ್ಷಣೆ ಮತ್ತು ಸ್ಪರ್ಧಾತ್ಮಕ ಉದ್ಯಮಗಳ ಸ್ಥಾಪನೆಯೇ ಭವಿಷ್ಯದ ಆರ್ಥಿಕ ಬೆಳವಣಿಗೆಯ ನಿರ್ಣಾಯಕ ಶಕ್ತಿ. ವಿಶ್ವದರ್ಜೆಯ ಮೂಲ ಸವಲತ್ತು ಒದಗಿಸುವುದು ಸೇರಿ ಸುರಕ್ಷಿತ ಪ್ರಕ್ರಿಯೆ ಸೇರಿ ಸುಗಮ, ತ್ವರಿತ ಅನುಮೋದನೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

| ಎಂ.ಬಿ. ಪಾಟೀಲ ಕೈಗಾರಿಕಾ ಸಚಿವ