ನ್ಯೂಸ್

ನೇಕಾರ ಸ್ನೇಹಿ ಜವಳಿ ನೀತಿ, ವಿದ್ಯುತ್ ಸಬ್ಸಿಡಿ ಹೆಚ್ಚಳ: ಜವಳಿ ಸಚಿವ ಶಿವಾನಂದ ಪಾಟೀಲ್ ಮಾಹಿತಿ

ನೇಕಾರ ಸ್ನೇಹಿ ಜವಳಿ ನೀತಿ, ನೇಕಾರಿಕೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ವಿದ್ಯುತ್ ಸಬ್ಸಿಡಿ ಹೆಚ್ಚಳ, ನೇಕಾರರ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್​, ಆನ್​ಲೈನ್ ಮಾರ್ಕೆಟಿಂಗ್, 500 ಕೋಟಿ ರೂ. ಕಾರ್ಪಸ್ ಫಂಡ್... ಇವು ಜವಳಿ ಕ್ಷೇತ್ರದ ಮನ್ವಂತರಕ್ಕೆ ರಾಜ್ಯ ಸರ್ಕಾರ ರೂಪಿಸಲು ಉದ್ದೇಶಿಸಿರುವ ಕಾರ್ಯಕ್ರಮಗಳು. ನೇಕಾರರ ಅಭ್ಯುದಯಕ್ಕೆ ರೂಪಿಸಿರುವ ನೀಲಿನಕ್ಷೆಯ ಪ್ರಮುಖ ಅಂಶಗಳನ್ನು ‘ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್’ ಏರ್ಪಡಿಸಿದ್ದ ಸಂವಾದದಲ್ಲಿ ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ್ ಎಳೆ ಎಳೆಯಾಗಿ ಬಿಚ್ಚಿಟ್ಟರು.

ಸಾಂಪ್ರದಾಯಿಕ ನೇಕಾರಿಕೆ ಸಮಸ್ಯೆ, ನೇಕಾರರ ಸಂಕಷ್ಟದ ಬದುಕು, ನೇಕಾರಿಕೆ ಕ್ಷೇತ್ರದಲ್ಲಿ ಆಗಬೇಕಾಗಿರುವ ಬದಲಾವಣೆ, ಸರ್ಕಾರದ ಪ್ರೋತ್ಸಾಹ, ಹೊಸ ಜವಳಿ ನೀತಿಯ ಅಗತ್ಯತೆ, ಹೊಸ ತಂತ್ರಜ್ಞಾನ ಅಳವಡಿಕೆಗಳ ಬಗ್ಗೆ ಆಲೋಚನೆಗಳನ್ನು ಹಂಚಿಕೊಂಡರು. ಒಂದು ಕಾಲದಲ್ಲಿ ಬಟ್ಟೆ ಆಮದು ಮಾಡಿಕೊಳ್ಳುವ ಸ್ಥಿತಿ ಇತ್ತು. ಸರ್ಕಾರ ಮಾತ್ರ ಬಟ್ಟೆ ಕಾರ್ಖಾನೆ ಸ್ಥಾಪಿಸಿತ್ತು. ಆದರೆ ಸದ್ಯ ಈ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರಿ ಸ್ವಾಮ್ಯದ ಟೆಕ್ಸ್​ಟೈಲ್ ಕಾರ್ಖಾನೆಗಳನ್ನು ಗುತ್ತಿಗೆ ನೀಡಲಾಗಿದೆ. ಖಾಸಗಿಯವರು ಇವುಗಳನ್ನು ನಿರ್ವಹಿಸುತ್ತಿದ್ದಾರೆ. ಯಾವುದೇ ಸರ್ಕಾರ ಬರಲಿ ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳು ಹೆಚ್ಚು ಉದ್ಯೋಗ ಸೃಜನೆ ಮಾಡುವ ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜವಳಿ ಕ್ಷೇತ್ರದ ಸುಧಾರಣೆ ಬಗ್ಗೆ ರೂಪಿಸಿರುವ ನೀತಿಗಳು 2008-13ರಲ್ಲಿ ಶೇ.50 ಫಲಕಾರಿಯಾಗಿದ್ದರೆ, 2018-23ರ ಕನಸು ತೃಪ್ತಿಕರವಾಗಿಲ್ಲ. ಬದಲಾವಣೆ ಮಾಡಲು ಸಿಎಂ ಒತ್ತು ಕೊಟ್ಟರೆ ಮಾತ್ರ ಸಾಧ್ಯ ಎಂದರು. ಒಂದು ಕಡೆ ನೇಕಾರ ದಿನಾಚರಣೆ ಮಾಡುತ್ತಿದ್ದರೆ, ಇನ್ನೊಂದೆಡೆ ವೃತ್ತಿ ಬಿಡುತ್ತಿರುವ ಪ್ರಮಾಣ ಕೂಡ ಹೆಚ್ಚುತ್ತಿದೆ. ಪ್ರತಿ ವರ್ಷ 3-4 ಸಾವಿರ ಜನ ಬೇರೆ ಉದ್ಯೋಗಕ್ಕೆ ಹೋಗುತ್ತಿದ್ದಾರೆ. ನೇಕಾರಿಕೆ ನಂಬಿ ಜೀವನ ನಿರ್ವಹಣೆ ಮಾಡುವ ಪರಿಸ್ಥಿತಿ ಇಲ್ಲ. ವೈಜ್ಞಾನಿಕ ನೇಕಾರಿಕೆಗೆ ಪೋ›ತ್ಸಾಹ ನೀಡದೇ ಇದ್ದರೆ ಕೈಮಗ್ಗ ನೇಕಾರರಿಗೆ ಕುತ್ತು ಬರುವುದು ನಿಶ್ಚಿತ ಎಂದು ಬೇಸರಿಸಿದರು.

ನೇಕಾರ ಸಮ್ಮಾನ್, ಕಚ್ಚಾ ವಸ್ತು, ಸಾಲ ಸೌಲಭ್ಯ ಕೊಟ್ಟರೂ ನಿರೀಕ್ಷಿತ ಬದಲಾವಣೆ ಕಂಡು ಬರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ನೇಕಾರರಿಗೆ 20 ಎಚ್.ಪಿ. ವರೆಗೆ ಸಬ್ಸಿಡಿ ನೀಡುವಂತೆ ಬೇಡಿಕೆ ಇದೆ. ಈ ಬೇಡಿಕೆ ಈಡೇರಿಸಿದರೆ ತುಸು ಪುನಶ್ಚೇತನವೂ ಆಗಬಹುದು. ಹಿಂದಿನ ಸಬ್ಸಿಡಿ ದರವನ್ನೂ ಮುಂದುವರಿಸುವ ಆಲೋಚನೆ ಇದೆ. ಈ ಸಂಬಂಧ ಕಾರ್ಯಾದೇಶವಾಗಬೇಕಿದೆ ಎಂದು ಹೇಳಿದರು.

ತಂತ್ರಜ್ಞಾನ ಬಳಕೆಯಲ್ಲಿ ಹಿಂದೆ: ನೇಕಾರಿಕೆಯಲ್ಲಿ ತಂತ್ರಜ್ಞಾನ ಬಳಕೆಯಲ್ಲಿ ಬಹಳ ಹಿಂದೆ ಇದ್ದೇವೆ. ಸೂರತ್​ನಲ್ಲಿ ಕಾಲಕಾಲಕ್ಕೆ ತಂತ್ರಜ್ಞಾನ ಬಳಸಿಕೊಂಡಿದ್ದಾರೆ. ನೇಕಾರರು ನೇಕಾರರಾಗಿಯೇ ಇರಬೇಕೆಂದು ಹೋದರೆ ಕಷ್ಟ. ಸಾಕಷ್ಟು ಯಶಸ್ಸಿನ ಕತೆಗಳಿವೆ. ನಮ್ಮ ನೇಕಾರರು ತಂತ್ರಜ್ಞಾನ ಬಳಕೆಗೆ ಮುಂದಾಗಬೇಕು. ಆದರೆ, ಸಾಂಪ್ರದಾಯಿಕ ನೇಕಾರರಾಗಿಯೇ ಉಳಿದಿದ್ದಾರೆ. ಹಾಗಾಗಿ ಉದ್ಯಮದಲ್ಲಿ ಯಶಸ್ಸು ಕಷ್ಟವಾಗಿದೆ.

ಕಲಬುರಗಿಗೆ ಹೂಡಿಕೆದಾರರ ಶೋಧ: ದೇಶದಲ್ಲಿ ಏಳು ಪಿಎಂ ಜವಳಿ ಪಾರ್ಕ್​ಗಳ ಪೈಕಿ ಕಲಬುರಗಿಯಲ್ಲೂ ಒಂದು ಸ್ಥಾಪನೆ ಮಾಡಲಾಗುತ್ತದೆ. ಅದಕ್ಕಾಗಿ ಮಾಸ್ಟರ್ ಡೆವಲಪರ್ ಹುಡುಕಬೇಕಾಗಿದೆ. 500 ಕೋಟಿ ರೂ. ಹೂಡಿಕೆ ಮಾಡುವವರು ಬರಬೇಕಾಗುತ್ತದೆ. ಕೇಂದ್ರ ಸರ್ಕಾರ 500 ಕೋಟಿ ರೂ. ಕೊಡುತ್ತದೆ. ಎರಡು ತಿಂಗಳಲ್ಲಿ ಟೆಂಡರ್ ಕರೆಯಲಾಗುತ್ತದೆ. ದೇಶದ ಇತರ ಪಾರ್ಕ್​ಗಳಿಗಿಂತ ನಾವು ಒಂದು ಹೆಜ್ಜೆ ಮುಂದಿದ್ದೇವೆ. ನಾವು ಈಗಾಗಲೆ ಈ ಪಾರ್ಕ್ ಸ್ಥಾಪನೆಗೆ ಭೂಮಿ ಗುರುತಿಸಿದ್ದೇವೆ. ಇದು ಸ್ಥಾಪನೆಯಾದರೆ ದೇಶದಲ್ಲೇ ಮಾದರಿಯಾಗಲಿದೆ. ಕಾವೇರಿ ಹ್ಯಾಂಡ್ ಲೂಂ, ಪ್ರಿಯದರ್ಶಿನಿಯನ್ನು ಪುನಾರಂಭಿಸಿ ಕೈ ಸುಟ್ಟುಕೊಳ್ಳುವ ಬದಲು, ಡೀಲರ್​ಗೆ ಪೂರೈಕೆ ಮಾಡುವ ಚಿಂತನೆ ನಮ್ಮ ಮುಂದಿದೆ. ಎಲ್ಲ ಉತ್ಪನ್ನಗಳಿಗೆ ಒಂದೇ ಪ್ರಾಂಗಣ ಮಾಡಿ ಮಾರಾಟಕ್ಕೆ ಉತ್ತೇಜನ ನೀಡುವ ಉದ್ದೇಶವಿದೆ.

ಉತ್ಪನ್ನಗಳಿಗೆ ಇ-ಕಾಮರ್ಸ್: ಜಿಯೋ ಟ್ಯಾಗಿಂಗ್ ಹಾಗೂ ಗಾಂಧಿ ವಸ್ತ್ರೋದ್ಯಮ ನೀತಿ ಜಾರಿಗೆ ತರಲು ಚರ್ಚೆ ನಡೆದಿದೆ. ಇ-ಕಾಮರ್ಸ್ ಮೂಲಕವೂ ನೇಕಾರರ ಉತ್ಪನ್ನಗಳಿಗೆ ವಿಶೇಷ ಮಾರುಕಟ್ಟೆ ಒದಗಿಸುವ ಪ್ರಯತ್ನ ನಡೆದಿದೆ. ಕೈಮಗ್ಗ ನೇಕಾರಿಕೆಗೆ ಉತ್ತೇಜನ ನೀಡಲು ಸರ್ಕಾರ ಸಮವಸ್ತ್ರ ಸರಬರಾಜು ಮಾಡಲು ಆದೇಶಿಸಿತ್ತು. ಆದರೆ, ಮಿಲ್​ನಿಂದ ಬಟ್ಟೆ ತಂದು ಸರಬರಾಜು ಮಾಡಿರುವ ಆರೋಪಗಳೂ ಇವೆ.

ಅನ್ಯ ರಾಜ್ಯಗಳ ಸ್ಥಿತಿ-ಗತಿ ಅಧ್ಯಯನ: ಇಳಕಲ್, ಮೊಳಕಾಲ್ಮೂರು ಸೇರಿ ನಮ್ಮದೇ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಬ್ರ್ಯಾಂಡಿಂಗ್ ಮಾಡುವ ಉದ್ದೇಶವಿದೆ. ನಾವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ತಮಿಳುನಾಡು ಸೇರಿ ಬೇರೆ ಬೇರೆ ರಾಜ್ಯಗಳ ಅಧ್ಯಯನ ಮಾಡಿ ನೇಕಾರರ ಹಿತ ರಕ್ಷಣೆಗೆ ಕಾರ್ಯಕ್ರಮ ರೂಪಿಸುತ್ತೇವೆ.

ಕೆಎಚ್​ಡಿಸಿ 120 ಕೋಟಿ ರೂ. ವ್ಯವಹಾರ ನಿರೀಕ್ಷೆ: ಕೆಎಚ್​ಡಿಸಿಯಲ್ಲಿ 3 ರಿಂದ 4 ಸಾವಿರ ಸದಸ್ಯರಿದ್ದಾರೆ. ಅವರಿಗೆ ಬಟ್ಟೆ ತರಿಸಿಕೊಟ್ಟು ನಾವು ಖರೀದಿಸಿದರೆ ಕೆಎಚ್​ಡಿಸಿ ನಡೆಸುವುದು ಕಷ್ಟವಾಗಲಿದೆ. ಕಳೆದ ಬಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಬಾರಿ ಪೊಲೀಸ್, ಸಾರಿಗೆ ನಿಗಮಗಳ ಮೆಕ್ಯಾನಿಕ್, ಡ್ರೖೆವರ್, ಕಂಡಕ್ಟರ್, ವಿವಿಧ ಇಲಾಖೆಗಳಿಗೆ ಸಮವಸ್ತ್ರ ಕೊಡಿಸಲು ಪ್ರಯತ್ನ ಮಾಡಲಾಗಿದೆ. ಈಗಾಗಲೆ 7 ಕಡೆ ಆರ್ಡರ್ ಪಡೆದಿದ್ದು, -ಠಿ;120 ಕೋಟಿ ವ್ಯವಹಾರ ನಿರೀಕ್ಷೆ ಇದೆ.

ಬ್ರ್ಯಾಂಡಿಂಗ್​: ಗುಳೇದಗುಡ್ಡ ಸೀರೆ, ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆ ಸೇರಿ ಪ್ರದೇಶ ವಾರು ಬ್ರಾ್ಯಂಡಿಂಗ್ ಮಾಡುವ ಉದ್ದೇಶವಿದ್ದು, ಕೆಎಚ್​ಡಿಸಿ ಮೂಲಕ ಪ್ಲಿಫ್​ಕಾರ್ಟ್ ರೀತಿ ಬೇರೆ ಬೇರೆ ಆನ್​ಲೈನ್ ವೇದಿಕೆ ಬಳಸಿಕೊಂಡು 2 ತಿಂಗಳಲ್ಲಿ ಮಾರುಕಟ್ಟೆ ಜಾಲ ವಿಸ್ತರಿಸಲಾಗುವುದು.

500 ಕೋಟಿ ರೂ. ಕಾರ್ಪಸ್ ಫಂಡ್​ಗೆ ಚರ್ಚೆ: ಕಾಲ ಕಾಲಕ್ಕೆ ತಂತ್ರಜ್ಞಾನ ಅಳವಡಿಕೆ ಆಗಬೇಕಿತ್ತು. ಏರ್​ಜೆಟ್, ವಾಟರ್ ಜೆಟ್ ಮಿಷನ್​ಗಳಿವೆ. ಅವುಗಳನ್ನು ಬಳಸಿಕೊಂಡು ಉದ್ಯಮ ಉಳಿಸಿಕೊಳ್ಳುವ ಪ್ರಯತ್ನ ಆಗಬೇಕು. ನೇಕಾರರಿಗೆ 2 ಕೋಟಿ ರೂ. ಸಬ್ಸಿಡಿ ಸಾಲ ಕೊಟ್ಟಿದ್ದೇವೆ. ಏರ್​ಜೆಟ್​ಗೆ 70 ಕೋಟಿ ರೂ. ಸಾಲ ಕೊಡುವ ಗುರಿ ಇದೆ. ಚಾಲ್ತಿಯಲ್ಲಿರುವ ಯೋಜನೆಗಳಿಗೆ 35 ಕೋಟಿ ರೂ. ಕೊಡಲು ಅವಕಾಶವಿದೆ. ನೇಕಾರರಿಗೆ ಶೂನ್ಯ ಬಡ್ಡಿದರದ ಸಾಲ ಕೊಡಲು ಬ್ಯಾಂಕ್​ಗಳು ಸಾಲ ಪಡೆಯುವವರ ಆಸ್ತಿ ನೋಡುತ್ತಾರೆ. ಹೀಗಾಗಿ ಕಾರ್ಪಸ್ ಫಂಡ್ ಮಾಡಬೇಕೆಂದು ಚರ್ಚೆ ನಡೆಸಲಾಗಿದೆ. 45,000 ಕುಟುಂಬಗಳಿದ್ದು, 500 ಕೋಟಿ ರೂ. ಕಾರ್ಪಸ್ ಫಂಡ್ ಬೇಕಾಗಬಹುದು.