ನ್ಯೂಸ್

ಅಂತರರಾಜ್ಯ ವೇಶ್ಯಾವಾಟಿಕೆ ಜಾಲ ಪತ್ತೆ : 14 ಜನರ ಬಂಧನ

rashmirhebbur

ಲೂಧಿಯಾನ: ಹತ್ತು ಮಹಿಳೆಯರು ಸೇರಿದಂತೆ ಹದಿನಾಲ್ಕು ಜನರನ್ನು ಬಂಧಿಸುವುದರೊಂದಿಗೆ ಅಂತರರಾಜ್ಯ ವೇಶ್ಯಾವಾಟಿಕೆ ದಂಧೆಯ ಜಾಲವನ್ನು ಪತ್ತೆ ಹಚ್ಚಿರುವುದಾಗಿ ಪಂಜಾಬಿನ ಲುಧಿಯಾನ ಪೊಲೀಸರು ಹೇಳಿದ್ದಾರೆ. ಲಾಕ್​ಡೌನ್​ನಿಂದಾಗಿ ಕೆಲಸ ಕಳೆದುಕೊಂಡ ವಿವಿಧ ರಾಜ್ಯಗಳ ನಿರ್ಗತಿಕ ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

ಶನಿವಾರ (ಮಾರ್ಚ 6) ಬೆಳಿಗ್ಗೆ ಲೂಧಿಯಾನದ ಹೊಸ ಸುಭಾಷ್ ನಗರದ ನಿವಾಸಿ ಮಂಜಿತ್ ಕೌರ್ ಅಲಿಯಾಸ್ ಪಮ್ಮಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಅವರ ಮನೆಗೆ ಧಾಳಿ ನಡೆಸಲಾಯಿತು. ಅವಳೊಂದಿಗೆ ದಂಧೆಯಲ್ಲಿ ತೊಡಗಿದ್ದ ಒಂಭತ್ತು ಮಹಿಳೆಯರು ಮತ್ತು ಒಬ್ಬ ಪುರುಷ ಸಹಚರನನ್ನೂ, ಗ್ರಾಹಕರಾಗಿ ಬಂದಿದ್ದ ಮೂವರು ಪುರುಷರನ್ನೂ ಬಂಧಿಸಲಾಗಿದೆ. ಅನೈತಿಕ ಸಂಚಾರ ತಡೆ ಕಾಯ್ದೆ 1956 ರ ಸೆಕ್ಷನ್ 3, 4 ಮತ್ತು 5 ರ ಅಡಿಯಲ್ಲಿ ಟಿಬ್ಬಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಲುಧಿಯಾನ ಎಡಿಸಿಪಿ ರೂಪಿಂದರ್ ಕೌರ್ ಸ್ರಾನ್ ಹೇಳಿದ್ದಾರೆ.

ಮುಖ್ಯ ಆರೋಪಿ ಪಮ್ಮಿ, ಈ ದಂಧೆಯ ಕಿಂಗ್​ಪಿನ್ ಆಗಿದ್ದು, ನಿರ್ಗತಿಕ ಹುಡುಗಿಯರನ್ನು ಆಮಿಷವೊಡ್ಡುವ ಮೂಲಕ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸುತ್ತಿದ್ದಳು, ಕೋವಿಡ್ ಲಾಕ್‌ಡೌನ್‌ನಿಂದಾಗಿ ಆರ್ಥಿಕ ತೊಂದರೆಗೆ ಸಿಲುಕಿದ ಮಹಿಳೆಯರನ್ನು ಟಾರ್ಗೆಟ್​ ಮಾಡುತ್ತಿದ್ದಳು ಎನ್ನಲಾಗಿದೆ. ಪಮ್ಮಿ, 2018 ರಲ್ಲಿ ಜೋಧೇವಾಲ್ ಬಸ್ತಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಇದೇ ರೀತಿಯ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಬಂದು ಮನೆಯಲ್ಲೇ ಅಕ್ರಮ ಚಟುವಟಿಕೆ ಮುಂದುವರೆಸಿದ್ದಳು ಎನ್ನಲಾಗಿದೆ.

ದಂಧೆಯಲ್ಲಿ ತೊಡಗಿದ್ದ ಮಹಿಳಾ ಆರೋಪಿಗಳು ನೇಪಾಳ, ಕೇರಳ, ಹಿಮಾಚಲ ಪ್ರದೇಶ, ಹರಿಯಾಣ, ಉತ್ತರಾಖಂಡ್, ಪಂಜಾಬ್​ನ ಚಂಡೀಗಡ ಮತ್ತು ಅಮೃತಸರಕ್ಕೆ ಸೇರಿದವರಾಗಿದ್ದಾರೆ. ಆರಂಭಿಕ ವಿಚಾರಣೆಯ ಬಳಿಕ ಇತರ ರಾಜ್ಯದ ನಗರಗಳಲ್ಲಿ ಇದೇ ರೀತಿಯ ಕೆಲಸದಲ್ಲಿ ತೊಡಗಿರುವವರ ಹೆಸರುಗಳು ಬೆಳಕಿಗೆ ಬಂದಿವೆ. ಆರೋಪಿಗಳು ತಮ್ಮ ಜಾಲವನ್ನು ವಿಸ್ತರಿಸಲು ಅವರೊಂದಿಗೆ ಸಂಪರ್ಕದಲ್ಲಿದ್ದರು. ಈ ನಿಟ್ಟಿನಲ್ಲಿ ಅವರ ಕಾರ್ಯವಿಸ್ತಾರವನ್ನು ಅರಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ. ಇನ್ನೂ ಹೆಚ್ಚು ಜನರನ್ನು ಈ ಸಂಬಂಧದಲ್ಲಿ ಬಂಧಿಸುವ ಸಾಧ್ಯತೆಯಿದೆ ಎಂದು ಸ್ರಾನ್ ಹೇಳಿದ್ದಾರೆ.

ಸ್ಥಳದಿಂದ ಏಳು ಮೊಬೈಲ್ ಫೋನ್, 28 ಪ್ಯಾಕೆಟ್ ಕಾಂಡೋಮ್, 3,630 ರೂ. ಮತ್ತು ಎರಡು ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿರ್ಬಂಧಿತ ಡ್ರಗ್ಸ್​​ ಕೂಡ ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಪೂರೈಕೆಯ ಮೂಲವನ್ನು ಕಂಡುಹಿಡಿಯಲು ವಿಚಾರಣೆ ಸಾಗಿದೆ ಎಂದಿದ್ದಾರೆ.

ಬಂಧಿತರಲ್ಲಿ, ದೆಹಲಿಯ ಓರ್ವ ಯುವತಿಯು ಲಾಕ್​ಡೌನ್​ ಸಮಯದಲ್ಲಿ ಸಂಬಂಧಿಕರಿಂದ ಪಡೆದ ಸಾಲವನ್ನು ಮರುಪಾವತಿಸಲು ಈ ಚಟುವಟಿಕೆಯಲ್ಲಿ ತೊಡಗಿರುವುದಾಗಿ ತಿಳಿಸಿದ್ದಾಳೆ. ಇನ್ನೊಬ್ಬ ಯುವತಿಯನ್ನು ಮುಖ್ಯ ಆರೋಪಿ ಪಮ್ಮಿ ನಗರದ ಗುರುದ್ವಾರದಿಂದ ಉದ್ಯೋಗ ಕೊಡಿಸುವ ನೆಪದಲ್ಲಿ ಕರೆತಂದು ಈ ಕೆಲಸಕ್ಕೆ ಹಚ್ಚಿದ್ದಾಳೆ. ಇನ್ನು ಕೆಲವು ಯುವತಿಯರು ಮನೆಯಲ್ಲಿ ಕಾರ್ಖಾನೆ ಮುಂತಾದೆಡೆ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿ ಈ ಕೆಲಸದಲ್ಲಿ ತೊಡಗಿದ್ದಾರೆ ಎಂದು ಎಡಿಸಿಪಿ ಸ್ರಾನ್ ಹೇಳಿದ್ದಾರೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ